ಸಕಲ ಭಾಗ್ಯಗಳ ಮಳೆಗರೆವ ವರಮಹಾಲಕ್ಷ್ಮೀ

| N/A | Published : Aug 08 2025, 12:03 PM IST

varamahalakshmi saree

ಸಾರಾಂಶ

ನಮ್ಮ ಸಂಪ್ರದಾಯ, ಶಾಸ್ತ್ರಗಳು ಆಡಂಬರ, ದುಂದು ವೆಚ್ಚದ ಆಚರಣೆಗಳನ್ನು ಪ್ರೋತ್ಸಾಹಿಸಿಲ್ಲ. ಯಥಾಶಕ್ತಿಯಿಂದ ಸರಳವಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿ ಮಾಡಿದ ಪೂಜೆಯನ್ನೇ ಶ್ರೇಷ್ಠವೆಂದು ಪ್ರಮಾಣಿಸಿವೆ. ಪೂಜೆಯಲ್ಲಿ ಭಕ್ತಿ ಶ್ರದ್ಧೆಗೆ ಪ್ರಾಮುಖ್ಯ ಕೊಡಬೇಕೇ ವಿನಃ ಅಂತಸ್ತಿನ ತೋರಿಕೆಗಲ್ಲ.

-ಮೃಣಾಲಿನಿ ಅಗರಖೇಡ್, ಬೆಂಗಳೂರು.

(ಸದಸ್ಯರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು)

‘ನಮಸ್ತೆ ಸರ್ವಲೋಕಾನಂ ಜನನೈ ಪುಣ್ಯಮೂರ್ತಯೇ

ಶರಣ್ಯ ತ್ರಿಜಗದ್ವಂದೇ ವಿಷ್ಣು ವಕ್ಷಸ್ಥಲ ಸ್ಥಿತೆ’

ಎಂದು ಭವಿಷ್ಯೋತ್ತರ ಪುರಾಣದಲ್ಲಿ ವರಮಹಾಲಕ್ಷ್ಮೀ ವ್ರತದ ಮಹತ್ವ, ಪೂಜೆ ಮಾಡುವ ವಿಧಾನ ಹಾಗೂ ಅದರ ವೃತ್ತಾಂತವನ್ನು ತಿಳಿಸಲಾಗಿದೆ. ಹೆಸರೇ ಸೂಚಿಸುವಂತೆ ಬೇಡಿದ ವರ ಕೊಡುವ ಸರ್ವಲೋಕದ ಜನನಿ, ತ್ರಿಜಗದ ವಂದಿತೆಯಾದ, ಮಹಾವಿಷ್ಣುವಿನ ಹೃತ್ಕಮಲವಾಸಿಯಾದ ಮಾಹಾಲಕ್ಷ್ಮೀಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವುದೇ ವರಮಹಾಲಕ್ಷ್ಮೀ ಹಬ್ಬ.

ಶ್ರಾವಣ ಮಾಸದ ಶುಕ್ಲ ಪಕ್ಷದ ಪೌರ್ಣಿಮೆಯ ಸಮೀಪದ, ಸಾಮಾನ್ಯವಾಗಿ ಎರಡನೆಯ ಶುಕ್ರವಾರದಂದು ಈ ವ್ರತವನ್ನು ಮಾಡಬೇಕು. ಇದು ಸೌಭಾಗ್ಯವನ್ನು, ಸಂಪತ್ತನ್ನು ಕೊಡುವ ಈ ವ್ರತವಾಗಿದ್ದು, ಸುಮಂಗಲಿಯರು ಇದನ್ನು ಸಂಭ್ರಮದಿಂದ ಸಹಕುಟುಂಬದೊಂದಿಗೆ ಆಚರಿಸುತ್ತಾರೆ.

ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಈ ವ್ರತವನ್ನು ಈಗ ಸಾಮೂಹಿಕ ಹಬ್ಬದಂತೆ ಮನೆ ಮನೆಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಲಶ ಅಥವಾ ಬಿಂದಿಗೆ ಇಟ್ಟು, ಅದಕ್ಕೆ ಲಕ್ಷ್ಮೀಯ ಲಕ್ಷಣವುಳ್ಳ ಕಂಚು ಅಥವಾ ಬೆಳ್ಳಿಯ ಮುಖ ಹಾಕಿ, ಸೀರೆ ಉಡಿಸಿ ನಾನಾಲಂಕಾರ ಮಾಡಿ, ಅಷ್ಟಲಕ್ಷ್ಮೀಯ ಸ್ವರೂಪವನ್ನು ಧ್ಯಾನಿಸಿ, ಆಹ್ವಾನಿಸಿ, ಷೋಡಶೋಪಚಾರ ಪೂಜೆಯನ್ನು ಮಾಡಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲಾಗುತ್ತದೆ.

ಲಕ್ಷ್ಮೀದೇವಿ ಬರೀ ಹಣ, ಸಂಪತ್ತು ಕೊಡುವ ದೇವತೆ ಎನ್ನುವ ತಪ್ಪು ಗ್ರಹಿಕೆ ಹಲವರಲ್ಲಿದೆ. ವಿಷ್ಣುಸಹಿತ ಲಕ್ಷ್ಮೀಯನ್ನು ಪೂಜಿಸಿದರೆ ಜ್ಞಾನ, ಭಕ್ತಿ, ವೈರಾಗ್ಯ, ಸಮಾಧಾನ ಹಾಗೂ ಸಂತೃಪ್ತಿಯನ್ನು ಕೂಡ ಅನುಗ್ರಹಿಸುತ್ತಾಳೆ. ತಾಯಿ ಮಹಾಲಕ್ಷ್ಮೀಯಲ್ಲಿ ಬರೀ ಸಂಪತ್ತನ್ನು ಕೋರದೇ, ಶ್ರೀಹರಿಯನ್ನು ಕ್ಷಣಕಾಲ ಬಿಟ್ಟಿರದ ಆಕೆಯಲ್ಲಿ ಶಾಂತಿ ನೆಮ್ಮದಿಯನ್ನು ಬೇಡಬೇಕು. ರಮಾದೇವಿಯನ್ನು ಕೇವಲ ಐಹಿಕ ಸುಖಕ್ಕಾಗಿ ಪೂಜಿಸದೆ ಲೋಕನಾಥನ ಗುಣಲೀಲೆಯನ್ನು ಕೊಂಡಾಡುವಂಥ ಏಕಾಗ್ರತೆಯನ್ನು ಕೊಡು ಎಂದು ವಿಜಯದಾಸರು ತಮ್ಮ ರಚನೆಯಲ್ಲಿ ಕೇಳಿಕೊಳ್ಳುತ್ತಾರೆ.

ವರಮಹಾಲಕ್ಷ್ಮೀಯನ್ನು ಪೂಜಿಸುವುದರಿಂದ ನಮಗಷ್ಟೇ ಅಲ್ಲ ಸಮಸ್ತ ಭೂಮಿಯಲ್ಲಿ ಧಾನ್ಯದ ಸಮೃದ್ಧಿಯಾಗುತ್ತದೆ. ಮಳೆ, ಬೆಳೆ ಉತ್ತಮ ರೀತಿಯಲ್ಲಿ ಆಗಿ, ಆರೋಗ್ಯ ಆಯುಷ್ಯ ವೃದ್ಧಿಯಾಗುತ್ತದೆ. ಇದರಿಂದಾಗಿ ಐಶ್ವರ್ಯ ಹಾಗೂ ಸೌಭಾಗ್ಯ ಸ್ಥಿರವಾಗಿ, ಸತ್ಸಂತಾನದ ಪ್ರಾಪ್ತಿಯಾಗುತ್ತದೆ ಎನ್ನುವ ಲೋಕಕಲ್ಯಾಣದ ವಿಚಾರವನ್ನು ಪ್ರಾಜ್ಞರು ಹೇಳುತ್ತಾರೆ.

ಪೂಜೆಯ ವಿಧಾನ:

ಸುಮಂಗಲಿಯರು ಬ್ರಾಹ್ಮೀ ಮುಹೂರ್ತದಲ್ಲೆದ್ದು, ಅಭ್ಯಂಜನ ಮಾಡಿ, ಮಡಿ ಸೀರೆ ಉಟ್ಟು, ಪೂಜೆಗೆ ಅಣಿಯಾಗಬೇಕು, ಮೊದಲಿಗೆ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿ ಕಲಶದಲ್ಲಿ ಪಂಚರತ್ನ ಹಾಕಬೇಕು, ಇಲ್ಲದ ಪಕ್ಷದಲ್ಲಿ ನಾಣ್ಯಗಳನ್ನು ಹಾಕಬಹುದು. ಪಂಚ ಪಲ್ಲವ (ಐದು ಮರದ ಎಲೆಗಳು) ಇಲ್ಲದಿದ್ದರೆ ಮಾವಿನ ಎಲೆ, ಅಡಿಕೆ, ಅರಿಶಿಣ, ಕುಂಕುಮ ಹಾಗೂ ಶುದ್ಧ ಜಲವನ್ನು ಹಾಕಿ, ತೆಂಗಿನಕಾಯಿ ಇಟ್ಟು, ಮಣೆಯ ಮೇಲೆ ಮಂತ್ರಾಕ್ಷತೆಯನ್ನು ಹಾಕಿ ಕಲಶವನ್ನು ಇಡಬೇಕು. ಮೊದಲಿಗೆ ಆದಿವಂದಿತನಾದ ಗಣಪತಿಯ ಪೂಜೆ, ನಂತರದಲ್ಲಿ ಕಲಶ ಪೂಜೆ,ಯಾ ಬಳಿಕ ‘ಲಕ್ಷ್ಮೀಸಹಿತ ನಾರಾಯಣ ದೇವತಾಭ್ಯೋ ನಮಃ’ ಎಂದು ಲಕ್ಷ್ಮೀಸಹಿತ ನಾರಾಯಣನನ್ನು ಪೂಜಿಸವ ಕ್ರಮವಿದೆ.

‘ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೆ

ನಾರಾಯಣಪ್ರಿಯೆ ದೇವಿ ಸುಪ್ರೀತಾ ವರದಾ ಭವ’

ಎಂದು ಪ್ರಾರ್ಥಿಸಿ ಕಲಶವನ್ನು ಸ್ಥಾಪನೆ ಮಾಡಬೇಕು.

ಗೆಜ್ಜೆ ವಸ್ತ್ರ, ಮಾಂಗಲ್ಯ, ಬಳೆ, ಓಲೆ, ಮೂಗುತಿ ಮುಂತಾದ ಆಭರಣಗಳಿಂದ ಲಕ್ಷ್ಮೀಯನ್ನು ಅಲಂಕರಿಸಬೇಕು. ಗಂಧ, ಸೌಭಾಗ್ಯ ದ್ರವ್ಯಗಳು, ಸಿಂದೂರ, ಕಾಡಿಗೆಯನ್ನು ಅರ್ಪಿಸಿಬೇಕು. ನಂತರ ಅಂಗಪೂಜೆಯಲ್ಲಿ ಮಹಾಲಕ್ಷ್ಮೀಯ ನಾಮಾವಳಿ, ಶ್ರೀಸೂಕ್ತ, ಅಂಬೃಣಿ ಸೂಕ್ತ ಪಠಿಸುತ್ತ ತಾವರೆ, ಕೇತಕಿ, ಜಾಜಿ, ಪುನುಗು, ಬಕುಲ, ಕಲ್ಹಾರ ಪುಷ್ಪಗಳ ಜೊತೆ ಗರಿಕೆ, ಶತಪತ್ರಗಳನ್ನು ಸಮರ್ಪಿಸಬೇಕು.

ಇದಾದ ನಂತರ ಒಂಬತ್ತು ಎಳೆಯ ದಾರವನ್ನು ಪೂಜಿಸಿ, ಕೊರಳಲ್ಲಿ ಅಥವಾ ಬಲಗೈಗೆ ಧರಿಸಬೇಕು. ಧೂಪ ದೀಪವನ್ನು ಬೆಳಗಿಸಬೇಕು. ಮನೆಯಲ್ಲಿ ತಯಾರಿಸಿದ ಖಾದ್ಯಗಳನ್ನು, ಪಂಚಭಕ್ಷ್ಯ, ಪರಮಾನ್ನವನ್ನು ದೇವಿಗೆ ನಿವೇದಿಸಬೇಕು. ಹೆಚ್ಚಾಗಿ ಬೆಲ್ಲ ಹಾಗೂ ಕಡಲೆಬೇಳೆಯಿಂದ ತಯಾರಿಸಿದ ಹೂರಣದ ಒಬ್ಬಟ್ಟು, ಪಾಯಸ, ಚಿತ್ರಾನ್ನವನ್ನು ಮಾಡುವುದು ರೂಢಿ. ಉತ್ತರ ಕರ್ನಾಟಕದಲ್ಲಿ ಕಡಲೆ ಹೂರಣದ ಜೊತೆಗೆ ಕಲ್ಲು ಸಕ್ಕರೆ, ಗೋಡಂಬಿ ಹಾಕಿ ಕರಿಗಡಬನ್ನು ನೈವೇದ್ಯಕ್ಕೆ ತಯಾರಿಸುತ್ತಾರೆ. ಕೆಲವರು ಚಕ್ಕುಲಿ, ಕೋಡಬಳೆ, ಬೇಸನ್ ಲಾಡು, ಹುರಿದವಲಕ್ಕಿ, ವಿಧವಿಧವಾದ ಫಲಾಹಾರಗಳನ್ನು ನೈವೇದ್ಯಕ್ಕೆ ಇಡುತ್ತಾರೆ. ನೈವೇದ್ಯದ ನಂತರ ಮಹಾಮಂಗಳಾರತಿಯನ್ನು ಮಾಡಿ ವರಮಹಾಲಕ್ಷ್ಮೀಯ ಅನುಗ್ರಹ ಪಡೆದ ಕುಂಡನಿಪುರದ ಚಾರುಮತಿಯ ಕಥೆಯನ್ನು ಶ್ರವಣ ಮಾಡಬೇಕು.

ಪುರಾಣದ ಕಥೆ:

ವರಮಹಾಲಕ್ಷ್ಮೀ ಹಬ್ಬದ ಹಿಂದೆ ಪೌರಾಣಿಕ ಕಥೆಯೊಂದಿದೆ. ಚಾರುಮತಿ ಎಂಬ ಸ್ತ್ರೀ ಧನಕನಕ, ಆಸ್ತಿಯನ್ನೆಲ್ಲ ಕಳೆದುಕೊಂಡು ಬಡತನದಿಂದ ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದಳು. ಗಂಡನೂ ಹಾಸಿಗೆ ಹಿಡಿದು ಬದುಕು ದುಸ್ತರವಾಯಿತು. ಆಗ ಆಕೆ ಸಾಯಲೆಣಿಸಿದಾಗ ಮಹರ್ಷಿ ನಾರದರು ಆಕೆಯನ್ನು ತಡೆದು, ಭವಿಷ್ಯಕ್ಕೆ ದಾರಿ ತೋರಿದರು. ‘ಹಿಂದಿನ ಜನ್ಮದಲ್ಲಿ ಅಪಾರ ಸಂಪತ್ತನ್ನು ಹೊಂದಿದ್ದ ನೀನು ಜಿಪುಣತನದಿಂದ ಮೆರೆದೆ. ದಾನಧರ್ಮಗಳಿಗೆ ಸಂಪತ್ತನ್ನು ವಿನಿಯೋಗಿಸದ್ದರಿಂದ ಈ ಜನ್ಮದಲ್ಲಿ ಸಂಕಷ್ಟ ಬಂದಿದೆ. ನೀನು ಶ್ರಾವಣ ಮಾಸದ ಹುಣ್ಣಿಗೆ ಸನಿಹದಲ್ಲಿರುವ ಶುಕ್ರವಾರ ಲಕ್ಷ್ಮೀಯನ್ನು ಪೂಜಿಸು. 12 ವರ್ಷಗಳ ಕಾಲ ಎಡೆಬಿಡದೆ ಈ ವ್ರತವನ್ನು ಆಚರಿಸು. ನಿನ್ನ ಸಂಕಷ್ಟಗಳೆಲ್ಲ ಪರಿಹಾರವಾಗುತ್ತವೆ’ ಎಂದು ಅನುಗ್ರಹಿಸಿದರು.

ನಾರದರ ಮಾರ್ಗದರ್ಶನದಂತೆ ಚಾರುಮತಿ ಕಷ್ಟಪಟ್ಟು, ನಾನಾ ಮನೆಗಳಲ್ಲಿ ಬೇಡಿ ಶ್ರದ್ಧೆಯಿಂದ ವ್ರತವನ್ನು ಆಚರಿಸಿದಳು. ಕಷ್ಟಪಟ್ಟು ವ್ಯವಸಾಯ ಮಾಡಿ, ಬಂದ ಬೆಳೆಯಿಂದ ದಾನಧರ್ಮಗಳನ್ನು ಮಾಡಿದಳು. ಪರಿಣಾಮವಾಗಿ, ಆಕೆಯ ಕಷ್ಟಗಳೆಲ್ಲವೂ ಪರಿಹಾರವಾಗಿ, ಗಂಡನೂ ಚೇತರಿಸಿಕೊಂಡ ಎಂಬುದು ಪ್ರತೀತಿ.

ಆಡಂಬರಕ್ಕಿಂತ ಶ್ರದ್ಧೆ ಮುಖ್ಯ:

ವರಮಹಾಲಕ್ಷ್ಮೀ ಹಬ್ಬವೆಂದರೆ ಮನೆಗಳಲ್ಲದೆ, ಮಾರುಕಟ್ಟೆಯಲ್ಲೂ ಸಂಭ್ರಮ ನೋಡಬಹುದು. ಬಣ್ಣಬಣ್ಣದ ಕೃತಕ ಅಲಂಕಾರದ ವಸ್ತುಗಳು, ಪ್ಲಾಸ್ಟಿಕ್ ಹೂವಿನ ಹಾರಗಳು, ತಾಂಬೂಲ ವಿನಿಮಯಕ್ಕೆ ಪ್ಲಾಸ್ಟಿಕ್ ಟ್ರೇಗಳು, ಲಕ್ಷ್ಮೀಯ ಬಿಡಿ ಭಾಗಗಳು, ಮುಖವಾಡಗಳು, ಕೃತಕ ಆಭರಣ ಮಾರುವ ಅಂಗಡಿಗಳ ಭರಾಟೆ ಕಾಣುತ್ತಿದೆ. ಗಗನಕ್ಕೇರಿದ ಬೆಲೆಗಳಲ್ಲಿ ಸಿಗುವ ಫಲ ತಾಂಬೂಲಗಳು ಮಧ್ಯಮ ವರ್ಗದವರಿಗೆ ಜೇಬಿಗೆ ಬಿಸಿ ಮುಟ್ಟಿಸುತ್ತಿವೆ.

ನಮ್ಮ ಸಂಪ್ರದಾಯ, ಶಾಸ್ತ್ರಗಳು ಆಡಂಬರ, ದುಂದು ವೆಚ್ಚದ ಆಚರಣೆಗಳನ್ನು ಪ್ರೋತ್ಸಾಹಿಸಿಲ್ಲ. ಯಥಾಶಕ್ತಿಯಿಂದ ಸರಳವಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿ ಮಾಡಿದ ಪೂಜೆಯನ್ನೇ ಶ್ರೇಷ್ಠವೆಂದು ಪ್ರಮಾಣಿಸಿವೆ. ಪೂಜೆಯಲ್ಲಿ ಭಕ್ತಿ ಶ್ರದ್ಧೆಗೆ ಪ್ರಾಮುಖ್ಯ ಕೊಡಬೇಕೇ ವಿನಃ ಅಂತಸ್ತಿನ ತೋರಿಕೆಗಲ್ಲ. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವಂತಹ ಆಚರಣೆಗಳನ್ನು ತ್ಯಜಿಸಿ, ಸಾಮೂಹಿಕ ವರಮಹಾಲಕ್ಷ್ಮೀ ಆಚರಣೆಯನ್ನು ವೈದಿಕ ಪದ್ಧತಿಯಲ್ಲಿ ಆಚರಿಸಿ ಅರ್ಥಪೂರ್ಣವಾಗಿಸಬೇಕು. ಮಾರ್ಕೆಟಿಂಗ್ ತಂತ್ರಗಳಿಗೆ ಬಲಿಯಾಗದೆ ಮಿತವ್ಯಯದ ಆಚರಣೆಯನ್ನು ರೂಢಿಸಿಕೊಳ್ಳಬೇಕು.

ಬಾಳೆ ಎಲೆಯಲ್ಲಿ ಹೂವು, ತಾಂಬೂಲವನ್ನು ಕಟ್ಟಿ ಕೊಡುವುದು, ಕಲಾತ್ಮಕವಾಗಿ ಮಾಡಿದ ಕಾಗದದ ಪೊಟ್ಟಣದಲ್ಲಿ ಅರಿಶಿಣ ಕುಂಕುಮವನ್ನು ಕೊಡುವುದು, ಅಂಗಡಿಯ ಕೃತಕ ಬಣ್ಣ ಹಾಕಿದ ಮಿಠಾಯಿಯ ಬದಲಾಗಿ, ಮನೆಯಲ್ಲಿ ತಯಾರಿಸಿದ ವಿವಿಧ ಸಿಹಿ ಭಕ್ಷ್ಯಗಳನ್ನು ಪ್ರಸಾದದ ರೂಪದಲ್ಲಿ ಹಂಚಿದಾಗ, ಆರೋಗ್ಯದ ಜೊತೆಗೆ ವ್ಯರ್ಥ ಖರ್ಚು ತಪ್ಪುತ್ತದೆ. ಇನ್ನೊಬ್ಬರ ಅನುಕರಣೆ ಮಾಡದೆ, ಸರಳತೆ ಹಾಗೂ ಶ್ರದ್ಧೆಯಿಂದ ಹಬ್ಬವನ್ನು ಆಚರಿಸಬೇಕಿದೆ. ವರಮಹಾಲಕ್ಷ್ಮೀ ಎಲ್ಲರ ಮನೆಮನಗಳಲ್ಲೂ ಸಮೃದ್ಧಿ, ಸೌಭಾಗ್ಯವನ್ನು ಕರುಣಿಸಲಿ.

Read more Articles on