ಆರ್ಥಿಕ ಅಭಿವೃದ್ಧಿಯಿಂದ ವಿಕಸಿತ ಭಾರತದತ್ತ: ಪ್ರೊ. ಆರ್‌.ಆರ್‌. ಬಿರಾದಾರ

| Published : Mar 10 2024, 01:33 AM IST / Updated: Mar 10 2024, 09:05 AM IST

ಬಿರಾದಾರ್‌
ಆರ್ಥಿಕ ಅಭಿವೃದ್ಧಿಯಿಂದ ವಿಕಸಿತ ಭಾರತದತ್ತ: ಪ್ರೊ. ಆರ್‌.ಆರ್‌. ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಸಿತ ಭಾರತಕ್ಕೆ ಮಹಾತ್ಮ ಗಾಂಧಿ ಅವರ ರಾಮರಾಜ್ಯ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಪ್ರೊ. ಆರ್‌.ಆರ್‌. ಬಿರಾದಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತವು ವಿವಿಧ ಜನಾಂಗ, ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕತಿಯನ್ನು ಹೊಂದಿದ ಜಗತ್ತಿನ ಅತ್ಯಂತ ದೊಡ್ಡ ದೇಶ. ಅಲ್ಲದೆ ವಿವಿಧ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿದ ಶ್ರೀಮಂತ ರಾಷ್ಟ್ರವಾಗಿದೆ.

ಭಾರತವು 200 ವರ್ಷಗಳಿಗಿಂತ ಹೆಚ್ಚು ಬ್ರಿಟಿಷರು ದೇಶದ ಆರ್ಥಿಕ ಪ್ರಗತಿಯತ್ತ ಕಿಂಚತ್ತು ಗಮನ ಹರಿಸಲಿಲ್ಲ. ಇದರಿಂದಾಗಿ ಸ್ವತಂತ್ರ ಭಾರತದ ನಂತರವೂ ಹಲವಾರು ಸಂವಿಧಾನಾತ್ಮಕ ಮತ್ತು ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಭಾರತವು ‘ಕೆಳ-ಮಧ್ಯಮ ಆದಾಯದ ಗುಂಪಿಗೆ’ ಸೇರಿದ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿಯೇ ಮುಂದುವರಿಯುತ್ತಿದೆ.

ಅಭಿವೃದ್ಧಿಯ ವಿವಿಧ ಮಾರ್ಗಗಳು: ಸ್ವಾತಂತ್ರ್ಯದ ನಂತರ ಭಾರತವು ಬಡತನ, ಹಸಿವು, ಅಪೌಷ್ಠಿಕತೆ, ನಿರುದ್ಯೋಗ, ಆದಾಯ ಅಸಮಾನತೆ, ಅನಕ್ಷರತೆ, ಅನಾರೋಗ್ಯ, ಲಿಂಗ ತಾರತಮ್ಯ ಮುಂತಾದ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪಂಚವಾರ್ಷಿಕ ಯೋಜನೆಯ ಮೊದಲ ಎರಡು ದಶಕಗಳವರೆಗೆ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಯಿತು. 

ಈ ಅಭಿವೃದ್ಧಿಯ ಮಾರ್ಗವು ಸಂಪ್ರಾದಾಯ ಅರ್ಥಶಾಸ್ತ್ರಜ್ಞರ ‘ಟ್ರಿಕಲ್‍ಡೌನ್ (ಸ್ರವಿಸುವ) ಸಿದ್ಧಾಂತದ ಮೇಲೆ ಆಧಾರವಾಗಿದ್ದು, ಇದು ತೃಪ್ತಿಕರವಾದ ಫಲಿತಾಂಶ ನೀಡಲಿಲ್ಲ.

ಆದ್ದರಿಂದ, 1970ರ ದಶಕದಿಂದ ‘ಆರ್ಥಿಕ ಅಭಿವೃದ್ಧಿ’ 1990ರ ದಶಕದಿಂದ ‘ಮಾನವ ಅಭಿವೃದ್ಧಿ’ 2000ರ ದಶಕದಿಂದ ‘ಒಳಗೊಳ್ಳವಿಕೆ (ಅಂತರ್ಗತ) ಬೆಳವಣಿಗೆ’ ಮತ್ತು 2020ರ ದಶಕದಿಂದ ‘ಆತ್ಮನಿರ್ಭರ’ (ಸ್ವಾವಲಂಬನೆ) ಎಂಬ ವಿವಿಧ ಅಭಿವೃದ್ಧಿ ಮಾರ್ಗಗಳನ್ನು ಅನುಷ್ಠಾನಗೊಳಿಸಲಾಗಿದೆ. 

ಆದರೆ ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಬೇಕಾದ ಎಲ್ಲಾ ತರಹದ ಸಂಪನ್ಮೂಲ ಹೊಂದಿದ್ದರೂ ಇನ್ನೂ ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲಿಯೇ ಇರುವುದು ವಿಷಾದನೀಯ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2047ಕ್ಕೆ ಭಾರತವು ‘ಅಭಿವೃದ್ಧಿ ಹೊಂದಿದ’ ದೇಶಗಳ ಪಟ್ಟಿಗೆ ತರಲಾಗುತ್ತದೆಂದು ಸಂಕಲ್ಪ ಮಾಡಿದ್ದಾರೆ. 

ನಾವೆಲ್ಲರೂ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ ದೇಶವು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ವಿಕಸಿತ ಭಾರತವಾಗಿ ಹೊರಹೊಮ್ಮಲಿದೆ ಎಂದು ಮೋದಿ ಘೋಷಿಸಿದ್ದಾರೆ. 

ಈ ದಿಶೇಯಲ್ಲಿ ಮೋದಿ ಅವರು 11ನೇ ಡಿಸೆಂಬರ್ 2023ರಂದು ‘ವಿಕಸಿತ್ ಭಾರತ@2047: ಯುವಜನತೆಯ ಧ್ವನಿ’ ವಿನುತನ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಾರಂಭಗೊಳಿಸಿದರು.

ವಿಕಸಿತ ಭಾರತ ಎಂದರೇನು?
ವಿಕಸಿತ ಭಾರತವೆಂದರೆ ದೇಶದ ಉತ್ಪಾದನೆಯನ್ನು 30 ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುವುದಷ್ಟೇ ಅಲ್ಲದೆ, ಭಾರತವು ಜ್ಞಾನಭರಿತ, ಕೌಶಲ್ಯಭರಿತ, ಆರೋಗ್ಯಯುತ, ಸಂತೋಷಭರಿತ, ಬಡತನಮುಕ್ತ, ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಸಮಾನ ಅವಕಾಶಗಳ ಸೃಷ್ಟಿ ಮತ್ತು ಪರಿಸರ ಸುಸ್ಥಿರತೆಯನ್ನು ಸಾಧಿಸುವುದಾಗಿದೆ. ಒಂದು ದೇಶದ ಅಭಿವೃದ್ಧಿ ಆ ದೇಶದ ಜನರು ಎಷ್ಟು ಸಂತೋಷಭರಿತರಾಗಿದ್ದಾರೆ ಎಂಬುವದರ ಮೇಲೆ ನಿಂತಿದೆ.

ಮಹಾತ್ಮ ಗಾಂಧಿಜೀಯವರ ಅಭಿವೃದ್ಧಿಯ ಪರಿಕಲ್ಪನೆಯು, ಭೌತಿಕ ಸಂಪತ್ತಿನ ಹೆಚ್ಚಿನ ಸಂಗ್ರಹಣೆಗಿಂತ, ಸ್ವಾವಲಂಬನೆ, ಸಾಮಾಜಿಕ ನ್ಯಾಯ, ಅಹಿಂಸಾ ಮತ್ತು ಪರಿಸರ ಸುಸ್ಥಿರತೆಯ ತತ್ವಗಳ ಮೇಲೆ ಅಭಿವೃದ್ಧಿಪಡಿಸಲಾಗಿದೆ. 

ನರೇಂದ್ರ ಮೋದಿಜಿ ಅವರ ವಿಕಸಿತ ಭಾರತದ ಪರಿಕಲ್ಪನೆಯು ಗಾಂಧಿಜೀಯವರ ಕನಸಿನ ಅಭಿವೃದ್ಧಿಯ (ರಾಮರಾಜ್ಯದ) ಪರಿಕಲ್ಪನೆಯಾಗಿದೆ.

ಆರ್ಥಿಕ ಬೆಳವಣಿಗೆ: 1947ರಲ್ಲಿ ಭಾರತದ ಒಟ್ಟು ಸ್ವದೇಶಿ ಉತ್ಪನ್ನ(ಜಿಡಿಪಿ)ವು (ಪ್ರಸ್ತುತ ಡಾಲರ ಬೆಲೆಗಳಲ್ಲಿ) 40 ಬಿಲಿಯನ್ ಡಾಲರ್‌ಗಳಷ್ಟು ಇದ್ದದ್ದು, 2023ಕ್ಕೆ 3.75 ಟ್ರಿಲಿಯನ್ ಡಾಲರ್‌ಗಳಿಗೆ ಅಧಿಕವಾಗಿ, ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಿದೆ. 

2022-23ರ ಸಾಲಿಗೆ, ಭಾರತವು ಜಿಡಿಪಿ ಉತ್ಪಾದನೆಯಲ್ಲಿ ಜಗತ್ತಿನ 5ನೇ ಅತಿ ದೊಡ್ಡ ರಾಷ್ಟ್ರವಾಗಿರುವುದು ಹೆಮ್ಮೆಯ ವಿಷಯ. ಅಲ್ಲದೆ 2027ಕ್ಕೆ ಸುಮಾರು 7.30 ಟ್ರಿಲಿಯನ್ ಡಾಲರ್‌ಗಳಿಗೆ ಅಧಿಕಗೊಂಡು ಜಗತ್ತಿನ 3ನೇ ಅತಿ ದೊಡ್ಡ ರಾಷ್ಟ್ರವಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪದಂತೆ 2047ಕ್ಕೆ ಭಾರತವು 30 ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಗೆ ತಲುಪಿ, ಅಭಿವೃದ್ಧಿ ಹೊಂದಿದ ದೇಶಗಳ ಸರಣಿಗೆ ಸೇರುವ ಬಹುದೊಡ್ಡ ಗುರಿ ಹೊಂದಿದೆ. 

ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಬೇಕಾದರೆ ದೇಶದ ಪ್ರತಿ ತಲಾ ಆದಾಯ ಈಗಿನ 2610 ಡಾಲರ್‌ಗಳಿಂದ ಕನಿಷ್ಠ 13,846 ಡಾಲರ್‌ಗಳಿಗಿಂತ ಅಧಿಕವಾಗಬೇಕು. 

ಅಂದರೆ ಭಾರತದ ಜಿಡಿಪಿಯು ಪ್ರತಿ ವರ್ಷ ಶೇ.12ರಷ್ಟು ಬೆಳೆಯಬೇಕಾಗುತ್ತದೆ. ಅದರಂತೆ ಒಟ್ಟು ಸ್ಥಿರ ಬಂಡವಾಳ ಹೂಡಿಕೆಯು ಈಗಿನ ಜಿಡಿಪಿಯ ಶೇ.28ರಿಂದ ಶೇ.32ಕ್ಕಿಂತ ಇನ್ನೂ ಹೆಚ್ಚಿಗೆ ಮಾಡಬೇಕಾಗುತ್ತದೆ.

2047ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಲು ಕೆಲವು ವಿಶೇಷ ವಲಯಗಳಲ್ಲಿ ಸುಧಾರಣೆ ಕ್ರಮಗಳನ್ನು ಜಾರಿಮಾಡಬೇಕಿದೆ.

ಗುಣಮಟ್ಟ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ: ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕೌಶಲ ಬಹುಮುಖ್ಯವಾದ ಪಾತ್ರವು ವಹಿಸುತ್ತದೆ. ದೇಶದ ಯುವಕರನ್ನು ಕೌಶಲಭರಿತರನ್ನಾಗಿ ಮಾಡುವುದರಿಂದ ಅವರನ್ನು ವಿಕಸಿತ ಭಾರತ ಸಾಧನೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕಿದೆ.

ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ಗುಣಮಟ್ಟ ಶಿಕ್ಷಕರ ನೇಮಕ, ಆಧುನಿಕ ಮೂಲಸೌಕರ್ಯಗಳ ಪೂರೈಕೆ, ಉದ್ಯೋಗ ಸೃಷ್ಟಿಸುವ ನೂತನ ಪಠ್ಯಕ್ರಮದ ರಚನೆ ಮತ್ತು ಉಚಿತ ವಸತಿ ನಿಲಯಗಳ ಪೂರೈಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಮಹಿಳಾ ಸಬಲೀಕರಣ: ಭಾರತದಲ್ಲಿ ಲಿಂಗ ತಾರತಮ್ಯದಿಂದ ಮಹಿಳೆಯರಲ್ಲಿ ಸಾಕ್ಷರತೆ, ಆರೋಗ್ಯದ ಸ್ಥಿತಿಗತಿ, ಉದ್ಯೋಗ, ಅದಾಯ ಗಳಿಕೆ ಮತ್ತು ಸ್ವತ್ತುಗಳ ಒಡೆತನದ ಪ್ರಮಾಣ ಪುರುಷರಿಗೆ ಹೋಲಿಸಿದಾಗ ತುಂಬಾ ಕಡಿಮೆ ಇದೆ. 

ಆದ್ದರಿಂದ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಬಲರಾದರೆ ದೇಶದ ಉತ್ಪಾದನೆ ಅಧಿಕವಾಗುತ್ತದೆ.

ಆರೋಗ್ಯ ವಲಯ: ಉತ್ತಮ ಗುಣಮಟ್ಟದ ಆರೋಗ್ಯಕಾಳಜಿ ಸೇವೆ ಮತ್ತು ಸೌಕರ್ಯಗಳನ್ನು ಕಡಿಮೆ ಬೆಲೆಗಳಲ್ಲಿ ದೊರಕುವಂತೆ ಮಾಡುವುದರಿಂದ ಜನರ ಆರೋಗ್ಯ ಸುಧಾರಿಸುತ್ತದೆ. 

ಆ ಮೂಲಕ ಮಾನವ ಉತ್ಪಾದಕ ಶಕ್ತಿ ವೃದ್ಧಿಯಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ. ನಮ್ಮ ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಆಸ್ಪತ್ರೆ ಹಾಸಿಗೆಗಳು, ವೈದ್ಯರು ಮತ್ತು ದಾದಿಯರ ಸಂಖ್ಯೆ ತುಂಬಾ ಕಡಿಮೆ ಇದೆ. 

ಭಾರತದಲ್ಲಿ ಶಿಶು ಮರಣ ದರ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ ಮತ್ತು ತಾಯಿಯಂದಿರ ಮರಣ ದರ ತುಂಬಾ ಅಧಿಕವಿದೆ, ಜೀವನಾಯುಷ್ಯವೂ ಕೂಡಾ ತುಂಬಾ ಕಡಿಮೆ ಇದೆ. ಆದ್ದರಿಂದ ಆರೋಗ್ಯದ ಮೇಲೆ ಕನಿಷ್ಠ ಪ್ರಮಾಣ ಜಿಡಿಪಿಯ ಶೇ.5ರಷ್ಟು ವೆಚ್ಚ ಮಾಡಬೇಕಿದೆ.

ಉತ್ಪಾದಕತೆ ಹೆಚ್ಚಳ: ದೇಶದ ಉತ್ಪಾದಕತೆಯನ್ನು ಹೆಚ್ಚಿಸಲು ಕಡಿಮೆ ಉತ್ಪಾದಕತೆ (ಕೃಷಿ) ವಲಯದಿಂದ ಹೆಚ್ಚು ಉತ್ಪಾದಕತೆ(ಕೈಗಾರಿಕೆ) ವಲಯಗಳಿಗೆ ಉತ್ಪಾದನಾ ಸಂಪನ್ಮೂಲಗಳನ್ನು ಸ್ಥಳಾಂತರಿಸಬೇಕಿದೆ. ಆ ಮೂಲಕ ಬಂಡವಾಳ ಹೂಡಿಕೆ ಹೆಚ್ಚಾಗಿ, ಉತ್ಪಾದನೆ ಹೆಚ್ಚಿಸಲು ಸಾಧ್ಯ.

ಉದ್ಯಮಗಳ ದಕ್ಷತೆ ಮತ್ತು ಪೈಪೋಟಿ: ಉದ್ಯಮ ಸಂಸ್ಥೆಗಳ ದಕ್ಷತೆ, ಅವಿಷ್ಕಾರ ಮತ್ತು ನವಿನತೆಯನ್ನು ಉತ್ತಮಗೊಳಿಸುವುದರ ಮೂಲಕ ಉತ್ಪಾದನೆ ಮಾಡಲ್ಪಡುವ ಸರಕು ಮತ್ತು ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಬೇಕಿದೆ.

ಹಣಕಾಸಿನ ಮತ್ತು ಸಾಮಾಜಿಕ ಒಳಗೊಳ್ಳುವಿಕೆ: ಬಡವರಿಗೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಹಣಕಾಸಿನ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನೆಗಳನ್ನು ತಾರತಮ್ಯವಿಲ್ಲದೆ ಸರಳವಾಗಿ ಪೂರೈಕೆ ಮಾಡುವುರಿಂದ ಅವರ ಆದಾಯ, ಅನುಭೋಗ ಹೆಚ್ಚಾಗಿ, ಶಿಕ್ಷಣ ಮತ್ತು ಆರೋಗ್ಯ ಇನ್ನಷ್ಟು ಸುಧಾರಣೆಗೊಂಡು ಅವರು ಸಂತೋಷವಾದ ಜೀವನ ನಡಿಸಲು ಸಾಧ್ಯ.

ಹಸಿರು ತಂತ್ರಜ್ಞಾನಗಳ ಬಳಕೆ: ನವೀಕರಿಸಬಹುದಾದ ಇಂಧನದ ಬಳಕೆ, ಇಂಧನ ದಕ್ಷತೆಯಲ್ಲಿನ ಸುಧಾರಣೆ, ಪರಿಸರ ರಕ್ಷಣೆಯ ಹಸಿರು ತಂತ್ರಜ್ಞಾನಗಳನ್ನು ಬಳಸುವುದರಿಂದ, ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತು ಪರಿಸರ ನಾಶವನ್ನು ಕಡಿಮೆಗೊಳಿಸಿ, ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನೂತನ ಅವಕಾಶಗಳನ್ನು ಸೃಷ್ಟಿಸುವುದರ ಮೂಲಕ ಇನ್ನಷ್ಟು ಉತ್ಪಾದನೆ ವೃದ್ಧಿಯಾಗಲಿದೆ.

ಭಾರತವು 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸರಣಿಗೆ ಸೇರಬೇಕಾದರೆ ಉತ್ತಮ ಗುಣಮತಟ್ಟದ ಶಿಕ್ಷಣ, ಯುವಕರ ಕೌಶಲ ಅಭಿವೃದ್ಧಿ (ಯುವಶಕ್ತಿ), ಉತ್ತಮ ಆರೋಗ್ಯ ಸೇವೆ ಮತ್ತು ಸೌಕರ್ಯಗಳ ಪೂರೈಕೆ (ಆರೋಗ್ಯ ಶಕ್ತಿ), ಮಹಿಳಾ ಸಬಲೀಕರಣ (ನಾರಿಶಕ್ತಿ), ಉತ್ಪಾದಕತೆಯಲ್ಲಿನ ಹೆಚ್ಚಳ (ಕೃಷಿ ವೈವಿಧ್ಯೀಕರಣ), ಹಣಕಾಸಿನ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಹಸಿರು ತಂತ್ರಜ್ಞಾನಗಳ ಬಳಕೆ ಇವುಗಳಿಗೆ ಸಂಬಂಧಿಸಿದಂತೆ ಸೂಕ್ತ ಯೋಜನೆಗಳನ್ನು ರಚಿಸಿ ಜನರ ಸಹಭಾಗಿತ್ವದೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.