ಸಾರಾಂಶ
- ಬಾಲಾಕೋಟ್ ಕಾರ್ಯಾಚರಣೆಗಿಂತಲೂ ಈಗ ನಡೆದ ಮಿಲಿಟರಿ ಕಾರ್ಯಾಚರಣೆ 10 ಪಟ್ಟು ಪ್ರಭಾವಶಾಲಿ
ವಿಕಾಸ್ ಪುತ್ತೂರು
ಲೇಖಕರು ಮತ್ತು ಬಿಜೆಪಿ ಮುಖಂಡರು
(ಆಪರೇಷನ್ ಸಿಂದೂರ 1.0 ಮೇ 7ರಂದು ಕೊನೆಗೊಂಡರೆ, ಆಪರೇಷನ್ ಸಿಂದೂರ 2.0 ಮೇ 10ರಂದು ಹೊಂದಾಣಿಕೆಯ ಮೂಲಕ ಕೊನೆಗೊಂಡಿದೆ. ಆದರೆ ಆ ಕ್ಷಣವೇ ಆಪರೇಷನ್ ಸಿಂದೂರ 3.0 ಚಾಲನೆಗೊಂಡಿದ್ದು, ಪಾಕಿಸ್ತಾನ ಬಾಲಬಿಚ್ಚಿದೊಡನೆ ಅದು ಉಲ್ಬಣಗೊಳ್ಳಲಿದೆ.)
ಏಪ್ರಿಲ್ 22ರ ಸಂಜೆ ಪಹಲ್ಗಾಂನ ಬೈಸರನ್ ಕಣಿವೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಆಗ ಹಠಾತ್ತನೇ ಪ್ರತ್ಯಕ್ಷರಾದ ಮಷಿನ್ ಗನ್ ಹಿಡಿದಿದ್ದ ಟೋಪಿಧಾರಿ ಉದ್ದಗಡ್ಡದ ಪುರುಷರ ತುಂಡು ತುಂಡು ಗುಂಪು ಪ್ರವಾಸಿಗರನ್ನು ಅವರ ಧರ್ಮ ಕೇಳಿ ಭಯಭೀತಗೊಳಿಸಿತು. ಧರ್ಮದ ಆಧಾರದ ಮೇಲೆ ಅವರನ್ನು ಪ್ರತ್ಯೇಕಿಸಿ ಹಿಂದೂ, ಮುಸ್ಲಿಮರನ್ನು ಬೇರೆ ನಿಲ್ಲಿಸಿ, ಹಿಂದೂ ಪುರುಷರನ್ನು ಕ್ರೂರವಾಗಿ ಗುಂಡಿಕ್ಕಿ ಕೊಂದರು. ಸುನ್ನತ್ ಆಗಿದೆಯೇ ಎಂದು ಕೆಲವರನ್ನು ಪರೀಕ್ಷಿಸಿದರೆ, ಮತ್ತೆ ಕೆಲವರಿಗೆ ಕಲ್ಮಾ ಪಠಿಸಲು ಕೇಳಿದರು. ಮಹಿಳೆಯರು ಮತ್ತು ಮಕ್ಕಳನ್ನು ಮಾತ್ರ ಉಳಿಸಿ ಕ್ರೂರತೆಯ ಸಂದೇಶವನ್ನು ಮೋದಿಯವರಿಗೆ ತಿಳಿಸಲು ಹೇಳಿದರು.
ಪಾಕಿಸ್ತಾನ ಪ್ರಾಯೋಜನೆಯಲ್ಲಿ 26 ಮಂದಿಯನ್ನು ಬಲಿ ಪಡೆದ ಈ ಉಗ್ರದಾಳಿಯು 1990ರ ಕಾಶ್ಮೀರ ಹತ್ಯಾಕಾಂಡದ ಭೀಕರತೆಯನ್ನು ನೆನಪಿಸಿತು. ಲಷ್ಕರ್-ಎ-ತೊಯ್ಬಾದ ಉಪಘಟಕವಾಗಿರುವ ರೆಸಿಸ್ಟನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತಿತು. ಪಾಕಿಸ್ತಾನವನ್ನು ನೆಲೆಯಾಗಿಸಿ ಸಂಚು ರೂಪಿಸುವ ಲಷ್ಕರ್, ಜೈಷ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಇಂಡಿಯನ್ ಮುಜಾಹಿದ್ದೀನ್ ಹೀಗೆ ಮುಂತಾದ ಎಲ್ಲ ಉಗ್ರ ಸಂಘಟನೆಗಳ ಹಿಂದಿರುವುದು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಹಾಗೂ ಬೆನ್ನೆಲುಬಾಗಿ ಪಾಕಿಸ್ತಾನ ಸರಕಾರವಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಉಗ್ರರ ಗುರಿ ಮುಸ್ಲಿಮೇತರರು
ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ನಡೆದಿರುವ ಅನೇಕ ಉಗ್ರದಾಳಿಗಳನ್ನು ಗಮನಿಸಿದಾಗ, 2004-2014ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 25ಕ್ಕೂ ಹೆಚ್ಚಿನ ಭಯೋತ್ಪಾದಕ ದಾಳಿಗಳು ನಡೆದಿದ್ದು, 900ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ. 26/11ರ ಮುಂಬೈ ದಾಳಿ, ದೆಹಲಿ ಹಾಗೂ ಜೈಪುರ್ ಬಾಂಬ್ ಸ್ಫೋಟ ಹೀಗೆ ಎಲ್ಲ ಉಗ್ರ ದಾಳಿಗಳಲ್ಲಿ ಅವರು ಗುರಿಯಾಗಿಸಿದ್ದು ಹಿಂದೂ ಮತ್ತು ಇತರೆ ಮುಸ್ಲಿಮೇತರ ಸಮುದಾಯಗಳನ್ನೇ. ಇದರಲ್ಲಿ ಪಾಕಿಸ್ತಾನದ ಕೈವಾಡ ಸ್ಪಷ್ಟವಾಗಿದ್ದರೂ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಒಂದೇ ಒಂದು ಮಿಲಿಟರಿ ಪ್ರತಿಕ್ರಿಯೆಯನ್ನು ನೀಡಲು ಆಗಲಿಲ್ಲ. ಕಾಂಗ್ರೆಸ್ ಮೌನ ವಹಿಸಿ, ನಮ್ಮ ಸೇನೆ ಮತ್ತು ಪ್ರಜಾಪ್ರಭುತ್ವವನ್ನು ಅಣಕಿಸಿತು.
ಪ್ರತೀಕಾರದ ಬದಲು ಅವರು ಗಾಂಧೀಜಿಯ ‘ಮನುಕುಲದ ಅತ್ಯಂತ ಶಕ್ತಿಶಾಲಿ ಆಯುಧ ಶಾಂತಿ’ ಎಂಬ ಮಾತುಗಳ ಹಿಂದೆ ಅಡಗಿಕೊಂಡರು. ಅವರ ಅಂದಿನ ನಿಲುವನ್ನೇ ‘ಆಪರೇಷನ್ ಸಿಂದೂರ’ ಪ್ರಾರಂಭವಾದಾಗಲೂ ಪುನರುಚ್ಚರಿಸಿದರು. ಭಯೋತ್ಪಾದಕರಿಗೆ ದಿಟ್ಟ ಉತ್ತರ 2014ರ ನಂತರ ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ಭಾರತ ಸದೃಢಗೊಂಡಿದೆ. 11 ವರ್ಷಗಳಲ್ಲಿ ನಡೆದ ಮೂರೂ ಉಗ್ರ ದಾಳಿಗಳಿಗೂ ಮಿಲಿಟರಿ ಪ್ರತಿಕ್ರಿಯೆ ನೀಡಲಾಯಿತು. 2014ರಲ್ಲಿ ಕಾಶ್ಮೀರದ ಉರಿಯಲ್ಲಿ ಸೇನಾನೆಲೆಯ ಮೇಲೆ ಜೈಷ್-ಎ-ಮೊಹಮ್ಮದ್ ನಡೆಸಿದ ದಾಳಿಯಲ್ಲಿ 19 ಯೋಧರು ಬಲಿಯಾದದ್ದಕ್ಕೆ ಪ್ರತೀಕಾರವಾಗಿ, ಕೇವಲ ಹತ್ತು ದಿನಗಳಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಅದೇ ರೀತಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ 2019ರ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ‘ಆಪರೇಷನ್ ಬಂದರ್’ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ಶಿಬಿರಗಳನ್ನೆಲ್ಲಾ ಹೊಡೆದುರುಳಿಸಲಾಯಿತು. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ, ಏಪ್ರಿಲ್ 22ರಂದು ಭಾರತೀಯ ನಾಗರಿಕರ ಮೇಲೆ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿತು.
ಇದರಿಂದ ಕೆರಳಿದ ಪ್ರಧಾನಿ ಮೋದಿ ತಕ್ಕ ಪ್ರತೀಕಾರದ ಭರವಸೆ ನೀಡಿ, ಮರುದಿನವೇ 1960ರ ಸಿಂಧೂ ನದಿ ನೀರಿನ ಒಪ್ಪಂದವನ್ನು ಹಿಂಪಡೆದರು, ಅಟ್ಟಾರಿ ಗಡಿಗೆ ಬೀಗ ಬಿತ್ತು. ಅಷ್ಟಕ್ಕೇ ನಿಲ್ಲಲಿಲ್ಲ, ಮೇ 7ರಂದು ಭಾರತದ ಮಿಲಿಟರಿ ಪ್ರತಿಕ್ರಿಯೆ ‘ಆಪರೇಷನ್ ಸಿಂದೂರ’ವನ್ನು ಮಧ್ಯರಾತ್ರಿ 1 ಗಂಟೆಗೆ ಆರಂಭಿಸಿದರು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಳಗಿನ 9 ಪ್ರಮುಖ ಉಗ್ರಶಿಬಿರಗಳನ್ನು ಮಾತ್ರ ಗುರಿಯಾಗಿಸಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಯಿತು. ಇದರಲ್ಲಿ 26/11 ಮತ್ತು ಹತ್ತು ಹಲವಾರು ಪ್ರಮುಖ ದಾಳಿಗಳ ಮೂಲವಾಗಿದ್ದ ಜೈಷ್‌ನ ಬಹಾವಲ್ಪುರ್ ಕೇಂದ್ರ, ಲಷ್ಕರ್‌ನ ಮುರಿದ್ಕೆ ಶಿಬಿರ ಹೀಗೆ ಮುಖ್ಯವಾದವೆಲ್ಲವನ್ನೂ ಧ್ವಂಸಗೊಳಿಸಲಾಯಿತು.
ಪಾಕ್‌ಗೆ ಆಪರೇಷನ್ ಸಿಂದೂರ ನಡುಕ: ಆಪರೇಷನ್ ಸಿಂದೂರ ಶಸ್ತ್ರಚಿಕಿತ್ಸೆಯಂತಿದ್ದು ನಿಖರವಾದ ಗುರಿಗಳನ್ನು ನಿಯೋಜಿಸಲಾಗಿತ್ತು. ನಮ್ಮ ಸೈನ್ಯದ ಈ ಆಕ್ರಮಣವು ಬಾಲಾಕೋಟ್ ಕಾರ್ಯಾಚರಣೆಗಿಂತಲೂ 10 ಪಟ್ಟು ಹೆಚ್ಚಿನ ಪ್ರಭಾವ ಬೀರಿತ್ತು. 100ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ಸೇನೆ ಜನ್ನತ್‌ಗೆ ರವಾನಿಸಿತು. ಹೀಗೆ ಕೇವಲ 25 ನಿಮಿಷಗಳ ಕಾರ‍್ಯಾಚರಣೆಯಲ್ಲಿ ತನ್ನ ಗುರಿ ತಲುಪಿದ ಸೇನೆಯು ಆ ಕ್ಷಣವೇ ಆಕ್ರಮಣವನ್ನು ನಿಲ್ಲಿಸಿತು. ಆದರೆ, ಪಾಕಿಸ್ತಾನ ಸೇನೆಯು ತನ್ನ ಉಗ್ರರ ಒತ್ತಡದಿಂದ ಭಾರತದ ಸೇನಾನೆಲೆ, ದೇವಾಲಯಗಳು, ಗುರುದ್ವಾರಗಳು ಮತ್ತು ವಸತಿ ಸ್ಥಳಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಮರುದಿವಸದಿಂದ ಆರಂಭಿಸಿತು. ಪರಮಾಣು ಯುದ್ಧದ ಬೆದರಿಕೆಯನ್ನೂ ಹಾಕಿತು.
ಭಾರತದ ಸಾರ್ವಭೌಮತೆಯನ್ನು ಕೆಣಕಿತು. ಭಾರತೀಯ ಸೈನ್ಯದ ಸ್ವಾಭಿಮಾನವನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಯಾಗಿ, ಮೇ 10ರಂದು ಭಾರತ ಕೇವಲ 90 ನಿಮಿಷಗಳಲ್ಲಿ ಪಾಕಿಸ್ತಾನದ 11 ವಾಯುನೆಲೆಗಳನ್ನು ಹಾಗೂ ಎರಡು ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು. ಬ್ರಹ್ಮೋಸ್ ಕ್ಷಿಪಣಿಗಳು ಆಗಸದಲ್ಲಿ ಭೋರ್ಗರೆದವು, ರಫೇಲ್ ಯುದ್ಧ ವಿಮಾನಗಳು ಗರ್ಜಿಸಿದವು, ಭಾರತೀಯ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ಎದುರು ನಿಂತು ಪಾಕಿಗಳ ಜಂಗಾಬಲವನ್ನೇ ನಡುಗಿಸಿದವು. ಲಾಹೋರ್, ರಾವಲ್ಪಿಂಡಿ, ಕರಾಚಿ ಹೀಗೆ ಪಾಕಿಸ್ತಾನದ ಯಾವುದೇ ನಗರಗಳೂ ನಮ್ಮ ಕ್ಷಿಪಣಿಗೆ ದೂರವಾಗಲಿಲ್ಲ.
ಅಸ್ತಿತ್ವಕ್ಕಾಗಿ ಅಮೆರಿಕಗೆ ದುಂಬಾಲು
ಭಾರತದ ಪ್ರತೀಕಾರ ಮುಂದುವರೆದಲ್ಲಿ ಇಸ್ಲಾಮಾಬಾದ್‌ಗೆ ಅಸ್ತಿತ್ವವಿರುವುದಿಲ್ಲ ಎಂಬುದನ್ನು ಅರಿತು, ನೇರವಾಗಿ ಭಾರತವನ್ನು ಎದುರಿಸಲು ಧೈರ್ಯವಿಲ್ಲದ ಪಾಕಿಸ್ತಾನವು ಅಮೆರಿಕವನ್ನೂ ಒಳಗೊಂಡಂತೆ ಅನೇಕ ರಾಷ್ಟ್ರಗಳ ಮೊರೆ ಹೋಯಿತು. ಅಂತಿಮವಾಗಿ ಅಮೆರಿಕ ಪಾಕಿಸ್ತಾನದ ಗೋಗರೆಯುವಿಕೆಗೆ ಸ್ಪಂದಿಸಿ ಭಾರತದೊಂದಿಗೆ ಮಾತನಾಡುವುದಾಗಿ ಹೇಳಿ ಮಾತನಾಡಿದಾಗ, ಸ್ಪಷ್ಟ ಶಬ್ದಗಳಲ್ಲಿ ಪಾಕಿಸ್ತಾನವೇ ನಮ್ಮೊಂದಿಗೆ ನೇರವಾಗಿ ಮಾತನಾಡಲಿ ಎಂದು ತಿಳಿಸಲಾಯಿತು.
ಇದರ ಬೆನ್ನಲ್ಲೇ ಭಾರತದ ಸೇನಾ ಮುಖ್ಯಸ್ಥರಿಗೆ ಕರೆ ಮಾಡಿ ಕದನವಿರಾಮ ಘೋಷಿಸುವಂತೆ ಕೇಳಿಕೊಂಡರು. ಅದಾಗಲೇ ಭಾರತವು ತನ್ನ ಗುರಿಯನ್ನು ಸಾಧಿಸಿದ್ದರಿಂದ, ಪಾಕಿಸ್ತಾನದ ವಿನಂತಿಗೆ ಸ್ಪಂದಿಸಿ ‘ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನ ನಡೆಸಿದರೆ, ಅದನ್ನು ಯುದ್ಧ ಕ್ರಿಯೆ ಎಂದು ಪರಿಗಣಿಸುತ್ತೇವೆ’ ಎಂದು ತಿಳಿಸಿ, ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ತಡೆಹಿಡಿಯುವ ಹೊಂದಾಣಿಕೆಯನ್ನು ಮಾಡಿಕೊಳ್ಳಲಾಯಿತು.
ಈ ಸನ್ನಿವೇಶದ ಲಾಭ ಪಡೆಯುವ ಸಲುವಾಗಿ ಅಮೆರಿಕದ ಅಧ್ಯಕ್ಷರು ತಮ್ಮ ಮಧ್ಯಪ್ರವೇಶದಿಂದ ಕದನವಿರಾಮ ಘೋಷಿಸಲಾಯಿತು ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದು ನಗೆಪಾಟಲಿಗೆ ಈಡಾಯಿತು ಎಂಬುದು ಸತ್ಯವಷ್ಟೇ. ಆದರೆ ಕುಹಕ ಬುದ್ಧಿಯ ಪಾಕಿಸ್ತಾನ ಕೇವಲ 100 ನಿಮಿಷದಲ್ಲಿ ಹೊಂದಾಣಿಕೆಯನ್ನು ಉಲ್ಲಂಘಿಸಿ ತನ್ನ ಬುದ್ಧಿ ತೋರಿಸಿತಾದರೂ ಭಾರತದ ಆಧಾರಸಹಿತ ಪ್ರತಿಕ್ರಿಯೆಗೆ ಬೆದರಿ ಇದೀಗ ಬಾಲ ಮುದುರಿಕೊಂಡಿದೆ.
ಮೋದಿಯವರಂತೂ, ಪಾಕಿಸ್ತಾನದಿಂದ ಬರುವ ಒಂದೊಂದು ಗುಂಡಿಗೆ ಪ್ರತಿಯಾಗಿ ಒಂದೊಂದು ಬಾಂಬನ್ನು ಭಾರತದಿಂದ ಕಳುಹಿಸಿ ಎಂದು ಹೇಳಿ ಮುಕ್ತ ಸ್ವಾತಂತ್ಯವನ್ನು ಸೈನ್ಯಕ್ಕೆ ನೀಡಿದ್ದಾರೆ. ಆದರೆ ಇದೆಲ್ಲದರ ನಡುವೆ ತಮ್ಮ ಅವಧಿಯಲ್ಲಾದ ಅಷ್ಟೂ ದಾಳಿಗಳ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ, ಯಾವುದೇ ವಿಶೇಷ ಅಧಿವೇಶನಗಳನ್ನು ನಡೆಸದೆ, ಇದೀಗ ವಿಶೇಷ ಅಧಿವೇಶನ ನಡೆಸಬೇಕೆಂದು ಕಾಂಗ್ರೆಸ್ ಹೇಳುತ್ತಿರುವುದು ವಿಪರ್ಯಾಸವಷ್ಟೇ. ಆಪರೇಷನ್ ಸಿಂದೂರ 1.0 ಮೇ 7ರಂದು ಕೊನೆಗೊಂಡರೆ, ಆಪರೇಷನ್ ಸಿಂದೂರ 2.0 ಮೇ 10ರಂದು ಹೊಂದಾಣಿಕೆಯ ಮೂಲಕ ಕೊನೆಗೊಂಡಿದೆ. ಆದರೆ ಆ ಕ್ಷಣವೇ ಆಪರೇಷನ್ ಸಿಂದೂರ 3.0 ಚಾಲನೆಗೊಂಡಿದ್ದು, ಪಾಕಿಸ್ತಾನ ಬಾಲಬಿಚ್ಚಿದೊಡನೆ ಅದು ಉಲ್ಬಣಗೊಳ್ಳಲಿದೆ.