ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ವೃಂದದವರೂ ಮುಷ್ಕರಕ್ಕೆ ಅಣಿಯಾಗಿದ್ದಾರೆ. ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ತಿಳುವಳಿಕೆ ಪತ್ರವನ್ನೂ ನೀಡಿದ್ದಾರೆ.

- ಡಾ. ರವೀಂದ್ರನಾಥ್‌ ಎಂ. ಮೇಟಿ

ಅಧ್ಯಕ್ಷರು, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

-ಶ್ರೀಕಾಂತ್ ಎನ್. ಗೌಡಸಂದ್ರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ವೃಂದದವರೂ ಮುಷ್ಕರಕ್ಕೆ ಅಣಿಯಾಗಿದ್ದಾರೆ. ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ತಿಳುವಳಿಕೆ ಪತ್ರವನ್ನೂ ನೀಡಿದ್ದಾರೆ. ವೈದ್ಯರು ಮುಷ್ಕರಕ್ಕೆ ಇಳಿಯುವುದು ಎಂದರೆ ಜನರ ಜೀವಕ್ಕೆ ಸಂಬಂಧಿಸಿದ ವಿಷಯ. ವಿಶೇಷವಾಗಿ ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವ ಬಡ ಮತ್ತು ಮಧ್ಯಮ ವರ್ಗದ ಮೇಲೆ ಮುಷ್ಕರದ ಪರಿಣಾಮ ಮತ್ತಷ್ಟು ಘೋರ. ಹೀಗಾಗಿ ಮುಷ್ಕರದಿಂದ ಆಗುವ ಅಪಾಯಗಳ ಬಗ್ಗೆ ಸರ್ಕಾರ, ವೈದ್ಯರು ಯೋಚಿಸಬೇಕೆಂಬ ಚರ್ಚೆ ಶುರುವಾಗಿದೆ. ಆದರೆ ಸರ್ಕಾರ ಹಾಗೂ ವೈದ್ಯರು ಸಂಧಾನ ಸೂತ್ರಕ್ಕೆ ಸಿದ್ಧರಿಲ್ಲ. ಇಲಾಖೆಯ ಸಂಧಾನ ಸಭೆಗೂ ವೈದ್ಯಾಧಿಕಾರಿಗಳ ಸಂಘ ಬಹಿಷ್ಕಾರ ಹಾಕಿದೆ. ಈ ಬಗ್ಗೆ ‘ಕನ್ನಡಪ್ರಭ’ ಜತೆ ಮುಖಾಮುಖಿ ಆಗಿರುವ ಡಾ. ರವೀಂದ್ರನಾಥ್‌ ಎಂ. ಮೇಟಿ, ‘ಎಸ್ಮಾ ಜಾರಿ ಮಾಡಿದರೂ ಸೇವೆಯಿಂದ ವಜಾಗೊಳಿಸಿದರೂ ಬಂಧಿಸಿದರೂ ಹೋರಾಟ ನಿಲ್ಲಿಸಲ್ಲ’ ಎಂದಿದ್ದಾರೆ.

- ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೇಕಿತ್ತಾ?

ಮುಷ್ಕರಕ್ಕೆ ಹೋಗಲು ಬೇಸರವಿದೆ. ಆದರೆ, ಇಲಾಖೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಇದು ಅನಿವಾರ್ಯ. ಮಾ.11 ರಿಂದ ಓಪಿಡಿ ಸೇವೆ, ಮಾ.16ರಿಂದ ಅನಿರ್ದಿಷ್ಟಾವಧಿವರೆಗೆ ಎಲ್ಲಾ ಸೇವೆ ಬಹಿಷ್ಕರಿಸಿ ಮುಷ್ಕರ ಹೂಡುತ್ತೇವೆ.

- ವೈದ್ಯಕೀಯ ಸೇವೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಅಡಿಯಿದೆ. ಸರ್ಕಾರ ಎಸ್ಮಾ ಜಾರಿ ಮಾಡಿದರೆ...?

ಎಸ್ಮಾಗೂ ತಯಾರಿದ್ದೇವೆ. ಜೈಲಿಗೆ ಹೋಗಲೂ ಸಿದ್ಧರಾಗಿದ್ದೇವೆ. ನೌಕರಿಯಿಂದ ವಜಾಗೊಳಿಸಿದರೂ ಎದೆಗುಂದದೆ ಎದುರಿಸುತ್ತೇವೆ. ಆದರೆ, ಹೋರಾಟದಿಂದ ಮಾತ್ರ ಹಿಂದೆ ಸರಿಯುವುದಿಲ್ಲ.

- ಸರ್ಕಾರ ಖಾಸಗಿ ವೈದ್ಯರಿಂದ ಸೇವೆ ಪಡೆದರೇ?

ಈಗಾಗಲೇ ಐಎಂಎ-ಕರ್ನಾಟಕ (ಭಾರತೀಯ ವೈದ್ಯಕೀಯ ಸಂಘ) ಅವರಿಗೆ ಸಹಕಾರ ಕೇಳಿದ್ದೇವೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವ ವಿಶ್ವಾಸವಿದೆ. ಅಲ್ಲದೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಪೂರ್ಣ ಬೆಂಬಲ ಇದೆ. ಸಿ.ಎಸ್‌. ಷಡಕ್ಷರಿ ಅವರ ಮಾರ್ಗದರ್ಶನವೂ ಇದೆ. ಹೀಗಾಗಿ ನಮ್ಮ ಹೋರಾಟ ವಿಫಲವಾಗಲ್ಲ.

- ಸರ್ಕಾರ ಸಂಧಾನಕ್ಕೆ ಕರೆದರೂ ಬಹಿಷ್ಕರಿಸಿ ಮುಷ್ಕರ ಹಾದಿ ಹಿಡಿದಿದ್ದೀರಿ ಯಾಕೆ?

ನಮ್ಮ ಬೇಡಿಕೆಗಳ ಬಗ್ಗೆ ಸಚಿವರಿಗೆ ಏಳು ಬಾರಿ ನಡೆದ ಸಭೆಗಳಲ್ಲಿ ಮನವಿ ಸಲ್ಲಿಸಿದ್ದೇನೆ. ನಾಲ್ಕು ಬಾರಿ ಸಭೆಗಳ ನಡಾವಳಿ ಸಹ ದಾಖಲಿಸಿಲ್ಲ. ಸಚಿವರು ಬಹಿರಂಗವಾಗಿ ಸಿ ಅಂಡ್‌ ಆರ್‌ ನಿಯಮವನ್ನು ಒಂದು ತಿಂಗಳಲ್ಲಿ ಮಾಡುತ್ತೇವೆ ಎಂದು ವರ್ಷದ ಹಿಂದೆಯೇ ಹೇಳಿದರು. ಆದರೂ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಜತೆಗೆ ಮನವಿ ಸಲ್ಲಿಸಲು ಇಲಾಖೆಗೆ ಹೋದರೆ ಉಡಾಫೆ ಮಾತುಗಳು ಬೇರೆ. ಹೀಗಾಗಿ ಸಂಧಾನ ಸಭೆಯ ಮೇಲೆ ನಂಬಿಕೆ ಕಳೆದು ಹೋಗಿದೆ. ತಾಳ್ಮೆ ಪ್ರದರ್ಶನ ಸಾಕಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಹೋಗುತ್ತಿದ್ದೇವೆ.

- ನಿಮ್ಮ ಬೇಡಿಕೆಗಳಿಗೆ ಉಡಾಫೆಯಿಂದ ಮಾತನಾಡಿದ್ದು ಯಾರು?

ನಾವು ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಇಲಾಖೆ ಮುಖ್ಯಸ್ಥರು ಹೇಗೂ ನೀವು ವೈದ್ಯರು ಕೋರ್ಟ್‌ಗೆ ಹೋಗುತ್ತೀರಲ್ಲಾ ಹೋಗಿ ಎನ್ನುತ್ತಾರೆ. ವೈದ್ಯಕೀಯ ಸಿಬ್ಬಂದಿಗಳು ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲೂ ಅವಕಾಶ ನೀಡದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನಮ್ಮ ಹಕ್ಕು ಕಸಿದಿದ್ದಾರೆ.

- ಹಾಗಂತ, ನೀವು ತುರ್ತು ಸೇವೆ ನಿಲ್ಲಿಸಿ ಜೀವ ಹಾನಿಯಾದರೆ ಹೊಣೆ ಯಾರು?

ಆರೋಗ್ಯ ಇಲಾಖೆ ಮುಖ್ಯಸ್ಥರೇ ಹೊಣೆ ಹೊರಬೇಕು. ನಾವು ಹಲವು ಬಾರಿ ಮನವಿ, ಬೇಡಿಕೆ, ಎಚ್ಚರಿಕೆ ನೀಡಿದರೂ ಸ್ಪಂದಿಸದೆ ಮುಷ್ಕರಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಅವರು. ನಮಗೆ ಜನರಿಗೆ ಸಮಸ್ಯೆ ಮಾಡಬೇಕೆಂಬ ಉದ್ದೇಶವಿಲ್ಲ. ಹೀಗಾಗಿಯೇ ಹಠಾತ್‌ ಮುಷ್ಕರಕ್ಕೆ ಹೋಗದೆ ಸರ್ಕಾರಕ್ಕೆ ಸ್ಪಂದಿಸಲು ಹಾಗೂ ಜನರಿಗೆ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶ ನೀಡಿದ್ದೇವೆ.

- ಇಷ್ಟಕ್ಕೂ ವೈದ್ಯಾಧಿಕಾರಿಗಳ ಸಂಘದ ಬೇಡಿಕೆಗಳೇನು?

ವೈದ್ಯಾಧಿಕಾರಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಬಿದ್ದಿವೆ. ಆಸ್ಪತ್ರೆಗಳಿಗೆ ಔಷಧ ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸಬೇಕು. ಮುಖ್ಯವಾಗಿ ವೃಂದ ಮತ್ತು ನೇಮಕಾತಿ ನಿಯಮ ಮಾಡಬೇಕು. 13 ವರ್ಷಗಳಿಂದ ಬಾಕಿ ಇರುವ ಎಲ್ಲಾ ವೃಂದಗಳ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಪ್ರಕಟಿಸಬೇಕು. ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಸೇವಾ ನಿರತ ನೌಕರರ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಬೇಕು. ವರ್ಗಾವಣೆ ಕಾಯ್ದೆ ಮಾರ್ಪಾಡು ಮಾಡಬೇಕು. ಇದರ ನಡುವೆ ಸರ್ಕಾರಿ ವೈದ್ಯರು ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ಒಳ ರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ಆದೇಶಿಸಿದ್ದು, ಇವೆಲ್ಲವೂ ಸರ್ಕಾರಿ ವೈದ್ಯರಿಗೆ ತೀವ್ರ ತೊಂದರೆ ನೀಡುತ್ತಿವೆ. ವೈದ್ಯರೊಂದಿಗೆ ಚರ್ಚಿಸದೆ ಹೊರಡಿಸಿರುವ ಇಂತಹ ಆದೇಶಗಳನ್ನು ಹಿಂಪಡೆಯಬೇಕು.

- ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆ ಸಮಸ್ಯೆ ಅಷ್ಟು ಗಂಭೀರವಾಗಿದೆಯೇ?

ಹೌದು, ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ನಿರ್ದೇಶಕರ ಹುದ್ದೆಗಳೆಲ್ಲವೂ ಖಾಲಿ ಇವೆ. 16 ಜಂಟಿ ನಿರ್ದೇಶಕ ಹುದ್ದೆಗಳಲ್ಲಿ 15 ಖಾಲಿ ಇವೆ. ಸಹಾಯಕ ನಿರ್ದೇಶಕರ ಹುದ್ದೆಗಳಲ್ಲೂ ಆರಕ್ಕೆ ಆರೂ ಖಾಲಿ ಇವೆ. ರಾಜ್ಯಮಟ್ಟದಲ್ಲಿ ಎರಡು ನಿರ್ದೇಶಕ ಸ್ಥಾನಗಳಿದ್ದು, ಒಂದು ಖಾಲಿ ಇದೆ. ಆರೋಗ್ಯ ಇಲಾಖೆಯು ಉಸ್ತುವಾರಿ ಆಗಿಬಿಟ್ಟಿದೆ.

- ಔಷಧಗಳ ಪೂರೈಕೆ ಸುಧಾರಿಸಿದ್ದೇವೆ ಎಂದು ಸಚಿವರು ಹೇಳುತ್ತಿದ್ದಾರಲ್ಲಾ?

ಈಗ ನಾವು ಮುಷ್ಕರ ಎಚ್ಚರಿಕೆ ನೀಡಿದ ಬಳಿಕ ಕಳೆದ ವಾರ ಎರಡು ಹಂತದಲ್ಲಿ 12 ಕೋಟಿ ರು. ಹಾಗೂ 30 ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಕೆ.ಆರ್‌. ಪುರ ಆಸ್ಪತ್ರೆಗೆ 1 ಲಕ್ಷ ರು. ನೀಡಿದ್ದಾರೆ. ದಿನಕ್ಕೆ ಸಾವಿರಾರು ಮಂದಿ ರೋಗಿಗಳು ಬರುವ ಆಸ್ಪತ್ರೆಗಳಿಗೆ ಇಷ್ಟು ಹಣ ನೀಡಿದರೆ ಹೇಗೆ ನಿಭಾಯಿಸಬೇಕು?

- ಔಷಧ ಪೂರೈಕೆ ಕೆಎಸ್ಎಂಎಸ್‌ಸಿಎಲ್‌ ಜವಾಬ್ದಾರಿಯಲ್ಲವೇ?

ನಿಗದಿತ ಕೆಎಸ್‌ಎಂಎಸ್‌ಸಿಎಲ್‌ ಅವರು ಸಮಯಕ್ಕೆ ಔಷಧ ಸರಬರಾಜು ಮಾಡಿದರೆ ನೀಡಲು ವೈದ್ಯರಿಗೆ ಸಮಸ್ಯೆಯಿಲ್ಲ. ಅಲ್ಲಿ ಗುಳಿಗೆ, ಔಷಧ ನೀಡಲೇ ಐಎಎಸ್‌ ಅಧಿಕಾರಿಗಳನ್ನು ನೇಮಿಸಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಔಷಧ ಪೂರೈಸಲೂ ಅವರಿಗೆ ಆಗುತ್ತಿಲ್ಲ. ಈಗ ಬೇಸಿಗೆ ಹತ್ತಿರವಾಗುತ್ತಿದೆ. ಐವಿ ದ್ರಾವಣ, ಐವಿ ಆ್ಯಂಬಿಬಯೋಟಿಕ್‌ ಹೆಚ್ಚಾಗಿ ಬೇಕು. ನಾವು ಏನು ಮಾಡಬೇಕು? ಔಷಧ ಹೊರಗೆ ತೆಗೆದುಕೊಳ್ಳಲು ಬರೆದರೆ ಸಾರ್ವಜನಿಕರು ಗಲಾಟೆ ಮಾಡುತ್ತಾರೆ. ಸರ್ಕಾರದಿಂದ ಸರಬರಾಜು ಆಗದಿದ್ದರೆ ನಾವು ಎನು ಮಾಡಬೇಕು?

- ಎಬಿ-ಎಆರ್‌ಕೆ ಅನುದಾನದಿಂದ ಖರೀದಿಗೆ ಅವಕಾಶ ನೀಡಿದ್ದೇವೆ ಎನ್ನುತ್ತಾರೆ?

ಎಬಿ-ಎಆರ್‌ಕೆ ಅನುದಾನ ಕೇವಲ ಔಷಧ ಖರೀದಿಗೆ ಅಲ್ಲ. ನಿರ್ವಹಣೆ, ಸಣ್ಣ ಪುಟ್ಟ ರಿಪೇರಿ ಸೇರಿದಂತೆ ಹಲವು ವೆಚ್ಚಗಳು ಇರುತ್ತವೆ. ಈವರೆಗೆ ತಾತ್ಕಾಲಿಕವಾಗಿ ಖರೀದಿ ಮಾಡಿಯೇ ತೊಂದರೆ ಇಲ್ಲದಂತೆ ನಿರ್ವಹಣೆ ಮಾಡುತ್ತಿದ್ದೇವೆ. ಪರಿಸ್ಥಿತಿ ನಮ್ಮ ಕೈ ಮೀರಿದರೆ ಕಷ್ಟ ಆಗಲ್ಲವೇ? ಔಷಧ ಕೊರತೆಗೆ ಕೆಎಸ್ಎಂಎಸ್‌ಸಿಎಲ್‌ ಹೊಣೆ ಹೊರಬೇಕಲ್ಲವೇ?

- ಏನೇ ಆದರೂ ಇದು ಜನರ ಜೀವನದ ಪ್ರಶ್ನೆ. ಹೀಗಿದ್ದಾಗ ಮುಷ್ಕರ ಸಮಂಜಸವೇ?

ಜೀವಿಸುವ ಹಕ್ಕು ನಮಗೂ ಇದೆಯಲ್ಲವೇ? ಕೋವಿಡ್‌ ವಾರಿಯರ್ಸ್ ಎಂದು ಹೊಗಳಿದಿರಿ. ಆಗ ಜೀವದ ಆಸೆ ತೊರೆದು ನಮ್ಮ ವೈದ್ಯರು ಸೇವೆ ನೀಡಿದರು. 65 ಮಂದಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೋವಿಡ್‌ಗೆ ಬಲಿಯಾದರು. ಆದರೂ ನಮಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿದ್ದರೆ ಹೇಗೆ? ವೈದ್ಯೋ ನಾರಾಯಣೋ ಹರಿ ಎನ್ನುವುದು ಬೇಡ ನಮ್ಮನ್ನು ಕನಿಷ್ಠ ಮನುಷ್ಯರನ್ನಾಗಿ ಆದರೂ ನೋಡಬೇಕಲ್ಲವೇ? ಹೀಗಾಗಿ ಎಲ್ಲಾ ಹಂತದ ಪದಾಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ಈ ನಿರ್ಧಾರ ಮಾಡಿದ್ದೇವೆ.

- ನಿಮ್ಮ ಈ ಆಕ್ರೋಶಕ್ಕೆ ಇಲಾಖೆಯಲ್ಲಿನ ‘ಐಎಎಸ್‌’ ಹಾವಳಿಯೂ ಕಾರಣ ಎನ್ನಲಾಗುತ್ತಿದೆಯಲ್ಲಾ?

ಹೌದು, ಇಲಾಖೆಯಲ್ಲಿ ಎಲ್ಲದಕ್ಕೂ ಐಎಎಸ್‌ ಅಧಿಕಾರಿಗಳೇ ಬೇಕು. ತಾಂತ್ರಿಕ, ವೈದ್ಯಕೀಯ ಅನುಭವ ಇರುವ ಇಲಾಖೆಯ ವೈದ್ಯಾಧಿಕಾರಿಗಳು ಲೆಕ್ಕಕ್ಕೇ ಇಲ್ಲ. ಆರೋಗ್ಯ ಇಲಾಖೆ ಒಂದರಲ್ಲೇ ಆರು ಮಂದಿ ಐಎಎಸ್‌ ಅಧಿಕಾರಿಗಳು ಇದ್ದಾರೆ. ಕೇರಳ, ತಮಿಳುನಾಡು ಮಾದರಿ ಎನ್ನುತ್ತಾರೆ. ಅಲ್ಲಿ ಬರೀ ಇಬ್ಬರು ಐಎಎಸ್‌ಗಳು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಇಲ್ಲಿ ದಿನಕ್ಕೆ ನಾಲ್ಕೈದು ಅಹವಾಲು ಆಲಿಸುವ ಒಂಬುಡ್ಸ್‌ಮನ್‌ ಹುದ್ದೆಗೂ ಐಎಎಸ್‌ ನೇಮಿಸಿದರೆ ಏನು ಹೇಳಬೇಕು?

- ಐಎಎಸ್ ಅಧಿಕಾರಿಗಳನ್ನು ನೇಮಿಸಿದರೆ ಸಮಸ್ಯೆಯೇನು?

ಯಾವ ಹುದ್ದೆಗೆ ನೇಮಿಸಬೇಕು, ಯಾವ ಜವಾಬ್ದಾರಿ ವಹಿಸಬೇಕು ಎಂಬುದು ಬೇಡವೇ? ತಾಂತ್ರಿಕ, ವೈದ್ಯಕೀಯ ಹುದ್ದೆಗಳಿಗೂ ಅವರನ್ನೇ ನೇಮಿಸಿದರೆ ಹೇಗೆ? ತಾಯಿ- ಮರಣ ಪ್ರಮಾಣ (ಎಂಎಂಆರ್‌) ಶೇ.68 ರಷ್ಟಿದೆ. ಅದನ್ನು ಶೂನ್ಯಕ್ಕೆ ಇಳಿಸಲು 139.53 ಕೋಟಿ ರು. ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಲು ಸಮಿತಿ ರಚಿಸಿದ್ದಾರೆ. ಎಲ್ಲರೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳೇ. ವಾಣಿವಿಲಾಸ್‌ ಆಸ್ಪತ್ರೆಯಲ್ಲಿ ತಿಂಗಳಿಗೆ 20,000 ಸಾವಿರ ಹೆರಿಗೆ ಆಗುತ್ತದೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಇವರಿಗೆ ಏನು ಗೊತ್ತಿರುತ್ತದೆ? ಇಲಾಖೆಯ ವಿಷಯ ತಜ್ಞರು ಸಮಿತಿಯಲ್ಲಿ ಬೇಡವೇ? 16ನೇ ತಾರೀಖು ಮುಷ್ಕರಕ್ಕೆ ಹೋಗುತ್ತೇವೆ. ತಾಯಿ-ಮರಣ ಪ್ರಮಾಣ ಶೂನ್ಯಕ್ಕೆ ತರಲು ಹೊರಟಿರುವ ಇವರೇ ಜನರ ಜೀವ ಉಳಿಸಲಿ ಬಿಡಿ. ಹೀಗಾಗಿಯೇ ಮುಷ್ಕರಕ್ಕೆ ಇಲಾಖೆ ಮುಖ್ಯಸ್ಥರೇ ಹೊಣೆ ಎಂದು ಹೇಳುತ್ತಿದ್ದೇನೆ.

* ನಿಮ್ಮ ಹೋರಾಟ ಸರ್ಕಾರದ ವಿರುದ್ಧವೇ? ಸಚಿವರ ವಿರುದ್ಧವೇ ಅಥವಾ ಇಲಾಖೆ ಮುಖ್ಯಸ್ಥರ ವಿರುದ್ಧವೇ?

ಇಲಾಖೆಯ ಮುಖ್ಯಸ್ಥರ ವಿರುದ್ಧ. ಐಎಎಸ್‌ಗಳಿಗೆ ಡಿ.31 ಸಂಜೆಗೆ ಸರಿಯಾಗಿ ಬಡ್ತಿ ಆದೇಶ ದೊರೆಯುತ್ತದೆ. ಹುದ್ದೆ ಇಲ್ಲದಿದ್ದರೂ ಉಸ್ತುವಾರಿ ವಹಿಸಿ ಬಡ್ತಿ ಆದೇಶ ಹೊರಡಿಸಿಬಿಡುತ್ತಾರೆ. ನಮಗೆ ಮಾತ್ರ ಹತ್ತಾರು ವರ್ಷ ಕಾದರೂ ಯಾಕೆ ಬಡ್ತಿ ಆದೇಶ ನೀಡಲ್ಲ? ಐಎಎಸ್‌ಗಳು ಮಾತ್ರ ಅಧಿಕಾರಿಗಳೇ? ನಾವು ಅಧಿಕಾರಿಗಳಲ್ಲವೇ?

ಸರ್ಕಾರಿ ವೈದ್ಯರು ಕರ್ತವ್ಯದ ಅವಧಿ ಬಳಿಕ ಖಾಸಗಿ ಆಗಿ ಒಳ ರೋಗಿಗೆ ಚಿಕಿತ್ಸೆ ನೀಡಬಾರದೆಂಬ ನಿಯಮವೂ ನಿಮ್ಮ ಆಕ್ರೋಶಕ್ಕೆ ಕಾರಣವೇ?

ಖಂಡಿತಾ ಹೌದು. ಕರ್ತವ್ಯದ ಅವಧಿ ಬಿಟ್ಟು ಬೇರೆ ಕಡೆ ಪ್ರಾಕ್ಟಿಸ್‌ ಮೊದಲಿನಿಂದಲೂ ಅವಕಾಶವಿದೆ. ಇದರಿಂದ ಜನರಿಗೂ ಅನುಕೂಲ ಆಗುತ್ತದೆ. ಆದರೆ ಓಪಿಡಿ ಮಾತ್ರ ನೀಡಬೇಕು, ಒಳ ರೋಗಿಗೆ ಚಿಕಿತ್ಸೆ ನೀಡಬಾರದು ಎಂದರೆ ಹೇಗೆ? ಓಪಿಡಿಯಲ್ಲಿ ನಾವು ಚಿಕಿತ್ಸೆ ನೀಡಿರುತ್ತೇವೆ. ರೋಗಿಯ ಸಮಸ್ಯೆ ಗೊತ್ತಿರುತ್ತದೆ. ಅವರು ಒಳ ರೋಗಿ ಆದ ತಕ್ಷಣ ಚಿಕಿತ್ಸೆ ನೀಡಬಾರದು ಎಂದರೆ ಕ್ಷುಲ್ಲಕ ಅಲ್ಲವೇ? ಉದಾ: ಗರ್ಭಿಣಿಗೆ 9 ತಿಂಗಳು ಚಿಕಿತ್ಸೆ ನೀಡಿರುತ್ತಾರೆ. ಹೆರಿಗೆ ಮಾತ್ರ ಮಾಡಬಾರದು ಎಂದರೆ ಹೇಗೆ? ಓಪಿಡಿಯಲ್ಲಿ ರೋಗಿಯನ್ನು ಅಟೆಂಡ್‌ ಮಾಡಿ ಒಳರೋಗಿ ಆದ ಮೇಲೆ ಚಿಕಿತ್ಸೆ ನೀಡದೆ ಹೆಚ್ಚು ಕಡಿಮೆ ಆದರೆ ವೈದ್ಯರನ್ನು ಸಾರ್ವಜನಿಕರು ಸುಮ್ಮನೆ ಬಿಡುತ್ತಾರಾ? ಈ ಅಧಿಕಾರಿಗಳಿಗೆ ಪ್ರಾಕ್ಟಿಕಲ್‌ ಸಮಸ್ಯೆ ಗೊತ್ತಿದ್ದರೆ ಈ ರೀತಿ ಆದೇಶ ಮಾಡುತ್ತಾರಾ?

- ಇತಿಹಾಸದಲ್ಲೇ ಮೊದಲ ಬಾರಿಗೆ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ, ವರ್ಗಾವಣೆಯಲ್ಲಿ ಪಾರದರ್ಶಕತೆ ತಂದಿರಿರುವುದಾಗಿ ಇಲಾಖೆ ಹೇಳುತ್ತಿದೆ?

ಇತಿಹಾಸದಲ್ಲೇ ಮೊದಲು ಎನ್ನುತ್ತಾರೆ. ಇದು ಮೊದಲೇನೂ ಅಲ್ಲ. ಹಿಂದೆ ಎಲ್ಲಾ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಆಗಿದೆ. ನೇಮಕಾತಿ ನಿರ್ದೇಶನಾಲಯ ಎರಡೂವರೆ ದಶಕದಿಂದ ಇದೆ. 24 ಗಂಟೆಗಳ ಕ್ರಿಟಿಕಲ್‌ ಕೇರ್‌ ಸೇವೆಗೆ 3 ವೈದ್ಯರನ್ನು ನೀಡುತ್ತೇವೆ ಎಂದು ಅದಲು ಬದಲು ಮಾಡಿದರು. ಆದರೆ, ಎಲ್ಲೂ ಮೂರು ವೈದ್ಯರು ಇಲ್ಲ.

ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ವೇಳೆ ಗಂಡ-ಹೆಂಡತಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಅವಕಾಶ ನೀಡಿದ್ದಾರಲ್ಲ?

ಅಂಗವಿಕಲರಿಗೆ ವಿನಾಯಿತಿ ನೀಡಿ, ಕ್ಯಾನ್ಸರ್‌ ರೋಗಿಗಳಿಗೆ ವಿನಾಯಿತಿ ನೀಡಿ, ಅನಾರೋಗ್ಯ ಸಮಸ್ಯೆ, ವೈಯಕ್ತಿಕ ಸಮಸ್ಯೆಗಳಿಂದ ಬರುವವರಿಗೆ ಸಹಾಯ ಮಾಡಲು ಅವಕಾಶ ಮಾಡಿಕೊಡಿ. ಮ್ಯೂಚುಯಲ್‌ ಆಯ್ಕೆ ತೆರೆದಿಡಿ ಎಂದಿದ್ದೆವು. ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ನಮ್ಮ ಸಂಘ ಸಂಪೂರ್ಣ ಸಹಕಾರ ಘೋಷಿಸಿದ್ದೆವು. ಆದರೆ, ರಾತ್ರೋರಾತ್ರಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

- ರಾತ್ರೋರಾತ್ರಿ ವ್ಯತಿರಿಕ್ತ ಆದೇಶ ಮಾಡುತ್ತಾರೆ ಎಂದಿದ್ದೀರಿ, ಯಾವು ಅವು?

ಗೂಗಲ್‌ ಮೀಟ್‌ನಲ್ಲಿ ಇಬ್ಬರು ಮೂವರು ಕೂರಿಸಿಕೊಂಡು ಬೇಕಾಬಿಟ್ಟಿ ಆದೇಶಗಳನ್ನು ಮಾಡುತ್ತಾರೆ. ವರ್ಗಾವಣೆ ಕೌನ್ಸೆಲಿಂಗ್‌ ನೀತಿ ಬಗ್ಗೆ ನಮ್ಮ ಸಲಹೆ ಪರಿಗಣಿಸುವುದಾಗಿ ಹೇಳಿದ್ದರು. ಆದರೆ ರಾತ್ರೋರಾತ್ರಿ ಅಡ್ವೊಕೇಟ್‌ ಜನರಲ್‌ ಭೇಟಿ ಮಾಡಿ ಆದೇಶ ಮಾಡಿದರು. ಸುಗ್ರೀವಾಜ್ಞೆ ಮೂಲಕ ಆದೇಶ ಮಾಡುವ ತುರ್ತು ಏನಿತ್ತು? ಬೆನ್ನಲ್ಲೇ ಜಿಬಿಎ ಸೇರಿಸಿ ಹೊಸ ಆದೇಶ ಮಾಡಿದರು. ಇದಕ್ಕೆ ಇರುವ ಆತುರ ನಮ್ಮ ವೃಂದ ಮತ್ತು ನೇಮಕಾತಿ ನಿಯಮ, ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ಯಾಕಿಲ್ಲ? ಆಡಳಿತಾತ್ಮಕ ಹುದ್ದೆಗಳನ್ನೂ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಿ ಎನ್ನುತ್ತಿದ್ದೇವೆ. ಅದರಲ್ಲಿ ಯಾಕೆ ಪಾರದರ್ಶಕತೆ ಬೇಕಿಲ್ಲ?