ಆರ್‌ಸಿಬಿ: ಹೊಸ ಅಧ್ಯಾಯ, ಅದೇ ಹಳೆ ಗೋಳು!

| Published : Mar 31 2024, 02:03 AM IST / Updated: Mar 31 2024, 04:49 AM IST

ಸಾರಾಂಶ

ಈ ಬಾರಿಯೂ ಬದಲಾಗದ ತಂಡದ ಚಾರ್ಮ್‌. ಮೂರೇ ಪಂದ್ಯಕ್ಕೆ ದೌರ್ಬಲ್ಯ ಜಗಜ್ಜಾಹೀರು. ಈ ಸಲವೂ ಕಪ್‌ ಇಲ್ಲ ಅಂತಿದ್ದಾರೆ ಫ್ಯಾನ್ಸ್‌. ಸಾಮಾಜಿಕ ತಾಣಗಳಲ್ಲಿ ತಂಡದ ವಿರುದ್ಧ ಆಕ್ರೋಶ.

 ಬೆಂಗಳೂರು: ಆರ್‌ಸಿಬಿ ವನಿತೆಯರು ಕಪ್‌ ಗೆದ್ದಿದ್ದರಿಂದ ಈ ಬಾರಿ ಪುರುಷರ ತಂಡದ ಅದೃಷ್ಟ ಕೂಡಾ ಬದಲಾಗಬಹುದು, ಹೊಸ ಅಧ್ಯಾಯ ಆರಂಭವಾಗಬಹುದು ಎಂದು ನಂಬಿದ್ದ ಅಭಿಮಾನಿಗಳೇ ಹೆಚ್ಚು. ಆದರೆ 17ನೇ ಆವೃತ್ತಿ ಐಪಿಎಲ್‌ನ ಆರಂಭಿಕ 3 ಪಂದ್ಯಗಳ ಆರ್‌ಸಿಬಿಯ ಆಟ ನೋಡಿದವರಿಗೆ ತಂಡದ ಬಗೆಗಿನ ಅಭಿಪ್ರಾಯ ಬದಲಾಗಿರುವುದಂತೂ ನಿಜ.ಕಪ್‌ ಗೆಲ್ಲಲೇಬೇಕೆಂಬ ಛಲದೊಂದಿಗೆ ಕಣಕ್ಕಿಳಿದರೂ ತಾನು ಇಷ್ಟು ವರ್ಷ ಎದುರಿಸಿದ್ದ ಸಮಸ್ಯೆಗಳನ್ನೆಲ್ಲಾ ಆರ್‌ಸಿಬಿ ಈ ಬಾರಿಯೂ ತನ್ನ ಒಡಲಲ್ಲಿಟ್ಟುಕೊಂಡಿದೆ ಎಂಬುದು ಸತ್ಯ. ಹೊಸ ಅಧ್ಯಾಯ ಬರೀ ಘೋಷಣೆಗೆ ಸೀಮಿತವಾಗಿದ್ದು, ಪ್ರದರ್ಶನ ಮಾತ್ರ ಅದೇ ರಾಗ, ಅದೇ ಹಾಡು ಎಂಬಂತಾಗಿದೆ. ಬ್ಯಾಟರ್‌ಗಳ ಸ್ವರ್ಗ, ತವರಿನ ಚಿನ್ನಸ್ವಾಮಿಯಲ್ಲೇ ತಂಡದ ಕಳಪೆ ಆಟ ಚಿಂತೆಗೆ ಕಾರಣವಾಗಿದೆ.

ಕೊಹ್ಲಿ ಒನ್‌ ಮ್ಯಾನ್‌ ಶೋ

ಕಳೆದ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿ, ವಿರಾಟ್‌ ಕೊಹ್ಲಿ, ಮ್ಯಾಕ್ಸ್‌ವೆಲ್‌ ಮೇಲೆ ಅವಲಂಬಿತಗೊಂಡಿತ್ತು. ಕಪ್‌ ಗೆಲ್ಲಬೇಕಿದ್ದರೆ ಈ ಬಾರಿ ಸಂಘಟಿತ ಪ್ರದರ್ಶನ ನೀಡಬೇಕಿದ್ದ ತಂಡ ಒನ್ ಮ್ಯಾನ್‌ ಶೋಗೆ ಸೀಮಿತವಾಗಿದೆ. ತಂಡ 3 ಪಂದ್ಯದಲ್ಲಿ ಒಮ್ಮೆಯೂ 190 ರನ್‌ ಗಡಿ ದಾಟಿಲ್ಲ. ವಿರಾಟ್‌ ಮಾತ್ರ ಅಬ್ಬರಿಸುತ್ತಿದ್ದು, 3 ಪಂದ್ಯಗಳಲ್ಲಿ 187 ರನ್‌ ಕಲೆಹಾಕಿದ್ದಾರೆ. ದಿನೇಶ್‌ ಕಾರ್ತಿಕ್‌ ಕೊನೆ ಓವರ್‌ಗಳಲ್ಲಿ ಮಿಂಚುತ್ತಿದ್ದು, 3 ಪಂದ್ಯದಲ್ಲಿ 46 ಎಸೆತದಲ್ಲಿ 86 ರನ್‌ ಸಿಡಿಸಿದ್ದಾರೆ. ಆದರೆ ಡುಪ್ಲೆಸಿ, ಮ್ಯಾಕ್ಸಿ ಯಾವುದೇ ಮ್ಯಾಜಿಕ್‌ ಮಾಡುತ್ತಿಲ್ಲ. ಆರಂಭಿಕ 3 ಪಂದ್ಯಗಳಲ್ಲಿ ಡುಪ್ಲೆಸಿ 46, ಮ್ಯಾಕ್ಸ್‌ವೆಲ್‌ 31 ಗಳಿಸಿದ್ದಾರೆ. ಇನ್ನು ಇದೇ ರಜತ್‌ ಪಾಟೀದಾರ್‌ ಬಗ್ಗೆನಾ ಅಭಿಮಾನಿಗಳು ಅಷ್ಟೊಂದು ನಿರೀಕ್ಷೆ ಇಟ್ಟುಕೊಂಡಿದ್ದು ಎನ್ನುವ ಅನುಮಾನ ಮೂಡದೆ ಇರಲು ಸಾಧ್ಯವಿಲ್ಲ. 3 ಪಂದ್ಯಗಳಲ್ಲಿ ಅವರ ಗಳಿಕೆ ಕೇವಲ 21 ರನ್‌. ಮೊದಲ ಪಂದ್ಯದಲ್ಲಿ ಮಿಂಚಿದ್ದ ಅನುಜ್‌ ರಾವತ್‌ ಕೂಡಾ ಬಳಿಕ 2 ಪಂದ್ಯದಲ್ಲಿ ಮಂಕಾಗಿದ್ದಾರೆ.

ಕೈ ಹಿಡಿಯದ ಕಾಸ್ಟ್ಲಿ ಗ್ರೀನ್‌ 

ಟೂರ್ನಿಗೂ ಮುನ್ನ ಕ್ಯಾಮರೂನ್ ಗ್ರೀನ್‌ರನ್ನು ಆರ್‌ಸಿಬಿ ₹17.5 ಕೋಟಿಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ ಗ್ರೀನ್‌ರಿಂದ ಯಾವ ನೆರವೂ ಸಿಗುತ್ತಿಲ್ಲ. 3 ಪಂದ್ಯದಲ್ಲಿ ಕಲೆಹಾಕಿದ್ದು 54 ರನ್‌ ಮಾತ್ರ. ಬೌಲಿಂಗ್‌ನಲ್ಲೂ ಸಾಧನೆ ಅಷ್ಟಕ್ಕಷ್ಟೇ. ಮೊದಲ ಪಂದ್ಯದಲ್ಲಿ 2 ವಿಕೆಟ್‌ ಕಿತ್ತಿದ್ದೇ ಸಾಧನೆ. ಬಳಿಕ 2 ಪಂದ್ಯದಲ್ಲೂ ಯಾವುದೇ ವಿಕೆಟ್‌ ಪಡೆಯಲಿಲ್ಲ.

ವೇಗಿಗಳದ್ದೇ ತಲೆನೋವು : ಆರ್‌ಸಿಬಿ ಬ್ಯಾಟಿಂಗ್‌ ವಿಭಾಗದ ಬಗ್ಗೆ ತಲೆಕೆಡಿಸಿಕೊಂಡಷ್ಟು ಬೌಲಿಂಗ್‌ ವಿಭಾಗವನ್ನೂ ಪರಿಗಣಿಸಿದ್ದರೆ ಇಷ್ಟೊತ್ತಿಗೆ ಒಂದೆರಡು ಕಪ್‌ ಆದರೂ ತಂಡಕ್ಕೆ ಸಿಗುತ್ತಿತ್ತೇನೋ. ಪ್ರತಿ ವರ್ಷದಂತೆ ಈ ಬಾರಿಯೂ ವೇಗಿಗಳ ಸಮಸ್ಯೆ ಎದುರಾಗಿದ್ದು, ಯಾರೊಬ್ಬರೂ ಮೊನಚು ದಾಳಿ ಸಂಘಟಿಸುತ್ತಿಲ್ಲ. ಬೌಲರ್‌ಗಳು 3 ಪಂದ್ಯದಲ್ಲಿ ಪಡೆದಿರುವ ವಿಕೆಟ್‌ ಕೇವಲ 13.ಮೊಹಮದ್ ಸಿರಾಜ್‌ರ ದಾಳಿ ಎದುರಾಳಿ ಬ್ಯಾಟರ್‌ಗಳ ಮೇಲೆ ಪರಿಣಾಮ ಬೀರುತ್ತಿಲ್ಲ. 3 ಪಂದ್ಯದಲ್ಲಿ 11 ಓವರ್‌ನಲ್ಲಿ 110 ರನ್‌ ನೀಡಿರುವ ಸಿರಾಜ್‌ ಪಡೆದಿರುವುದು 2 ವಿಕೆಟ್‌. ಹರಾಜಿನಲ್ಲಿ ₹11 ಕೋಟಿ ಪಡೆದಿದ್ದ ಅಲ್ಜಾರಿ ಜೋಸೆಫ್‌ 115 ರನ್‌ ನೀಡಿ ಕೇವಲ 1 ವಿಕೆಟ್‌ ಎಗರಿಸಿದ್ದಾರೆ. ಯಶ್‌ ದಯಾಳ್‌ಗೆ 3 ವಿಕೆಟ್‌ ಲಭಿಸಿದೆ. ಕೆಕೆಆರ್‌ ವಿರುದ್ಧ ಮಾತ್ರ ಆಡಿರುವ ವೈಶಾಖ್‌ಗೆ 1 ವಿಕೆಟ್‌ ಸಿಕ್ಕಿದೆ. ಬೌಲಿಂಗ್‌ ವಿಭಾಗದಲ್ಲಿ ಮುಂದಿನ ಪಂದ್ಯಗಳಲ್ಲಾದರೂ ಬದಲಾವಣೆ ಮಾಡದಿದ್ದರೆ ತಂಡದ ಸೋಲಿನ ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಕಡಿಮೆ.

ಜಾದೂ ಮಾಡಬಲ್ಲ ಸ್ಪಿನ್ನರ್ಸ್‌ ಇಲ್ಲ!

ಚಹಲ್‌ರನ್ನು ಕೈಬಿಟ್ಟ ಬಳಿಕ ಆರ್‌ಸಿಬಿ ತಜ್ಞ ಸ್ಪಿನ್ನರ್‌ನ ಕೊರತೆ ಎದುರಿಸುತ್ತಲೇ ಇದೆ. ಕರ್ಣ್‌ ಶರ್ಮಾ, ಮಯಾಂಕ್‌ ಡಾಗರ್‌, ಮ್ಯಾಕ್ಸ್‌ವೆಲ್‌ ಸ್ಪಿನ್‌ ವಿಭಾಗವನ್ನು ನೋಡಿಕೊಳ್ಳುತ್ತಿದ್ದರೂ ಯಾರೊಬ್ಬರೂ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಕರ್ಣ್‌ 1 ವಿಕೆಟ್‌ ಪಡೆದಿದ್ದರೆ, ಮಯಾಂಕ್‌ 3 ಪಂದ್ಯದಲ್ಲಿ ಕೇವಲ 1 ವಿಕೆಟ್‌ ಕಬಳಿಸಿದ್ದಾರೆ. ಮ್ಯಾಕ್ಸ್‌ವೆಲ್‌ ಪಂಜಾಬ್‌ ವಿರುದ್ಧ ಮಾತ್ರ 2 ವಿಕೆಟ್‌ ಪಡೆದಿದ್ದರು.

‘ಕನ್ನಡಪ್ರಭ’ದೊಂದಿಗೆ ಅಳಲುತೋಡಿಕೊಂಡ ಅಭಿಮಾನಿಗಳು!

ಆರ್‌ಸಿಬಿಯ ಈ ಬಾರಿಯ ಆಟ ನೋಡಿ ತಂಡದ ಅಭಿಮಾನಿಗಳೇ ಕೆಂಡಾಮಂಡಲವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇನ್ನು ಕೆಕೆಆರ್‌ ವಿರುದ್ಧದ ಸೋಲಿನ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳನ್ನು ‘ಕನ್ನಡಪ್ರಭ’ ಮಾತನಾಡಿಸಿದಾಗ, ಅಭಿಮಾನಿಗಳು ತಂಡದಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಿದರು. ಇನ್ನು ಮುಂದಿನ ಪಂದ್ಯಗಳಲ್ಲಿ ಆಗಬೇಕಿರುವ ಬದಲಾವಣೆಗಳೇನು ಎನ್ನುವುದನ್ನೂ ಅಭಿಮಾನಿಗಳು ಎಳೆ ಎಳೆಯಾಗಿ ವಿವರಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಫ್ಯಾನ್ಸ್‌ ಈಗಾಗಲೇ ‘ಈ ಸಲವೂ ಕಪ್‌ ನಮ್ದಲ್ಲ’ ಎನ್ನಲು ಶುರು ಮಾಡಿದ್ದಾರೆ. ಮೂರೇ ಪಂದ್ಯಕ್ಕೆ ಅಭಿಮಾನಿಗಳಿಗೆ ಈ ಪಾಟಿ ನೋವು ನೀಡಿರುವ ಆರ್‌ಸಿಬಿ ಪುಟಿದೇಳುತ್ತಾ, ಕಾದು ನೋಡಬೇಕು.