ಸಾರಾಂಶ
5 ಬಾರಿ ಚಾಂಪಿಯನ್ ಎಂಬ ಖ್ಯಾತಿಯೊಂದಿಗೆ 18ನೇ ಆವೃತ್ತಿ ಐಪಿಎಲ್‌ಗೆ ಕಾಲಿಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಯಾನ ಲೀಗ್ ಹಂತದಲ್ಲೇ ಕೊನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಎಂ.ಎಸ್.ಧೋನಿ ನಾಯಕತ್ವದ ಸಿಎಸ್‌ಕೆ ಈ ಸಲ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳ ಪೈಕಿ 7ರಲ್ಲಿ ಎದುರಾಳಿಗೆ ಶರಣಾಗಿದೆ.
ಚೆನ್ನೈ: 5 ಬಾರಿ ಚಾಂಪಿಯನ್ ಎಂಬ ಖ್ಯಾತಿಯೊಂದಿಗೆ 18ನೇ ಆವೃತ್ತಿ ಐಪಿಎಲ್‌ಗೆ ಕಾಲಿಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಯಾನ ಲೀಗ್ ಹಂತದಲ್ಲೇ ಕೊನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಎಂ.ಎಸ್.ಧೋನಿ ನಾಯಕತ್ವದ ಸಿಎಸ್‌ಕೆ ಈ ಸಲ ಟೂರ್ನಿಯಲ್ಲಿ ಆಡಿರುವ 9 ಪಂದ್ಯಗಳ ಪೈಕಿ 7ರಲ್ಲಿ ಎದುರಾಳಿಗೆ ಶರಣಾಗಿದೆ. ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ ಸೋಲುಂಡ ಚೆನ್ನೈ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಭದ್ರಪಡಿಸಿಕೊಂಡಿತು. ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿ ಸನ್‌ರೈಸರ್ಸ್, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಮಂಜಿನಿಂದಾಗಿ ಚೇಸಿಂಗ್ ಸುಲಭವಾಗುವ ಕಾರಣಕ್ಕೆ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಕಲೆಹಾಕಿದ್ದು ಕೇವಲ 154 ರನ್. ತಂಡದ ಬ್ಯಾಟರ್‌ಗಳು ಮತ್ತೆ ವಿಫಲರಾದರು. ತಂಡ 19.5 ಓವರಲ್ಲಿ ಆಲೌಟಾಯಿತು. ಸ್ಪರ್ಧಾತ್ಮಕ ಗುರಿಯನ್ನು ಹೈದರಾಬಾದ್ 18.4 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು.
ಸನ್‌ರೈಸರ್ಸ್‌ನ ಆರಂಭ ಸಿಎಸ್‌ಕೆಗಿಂತ ಕಳಪೆಯಾಗಿತ್ತು. ಪವರ್-ಪ್ಲೇನಲ್ಲಿ 37 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. 9ನೇ ಓವರಲ್ಲಿ ಕ್ಲಾಸೆನ್ ಕೂಡಾ ಔಟಾದರು. 10 ಓವರಲ್ಲಿ ತಂಡದ ಸ್ಕೋರ್ 3 ವಿಕೆಟ್‌ಗೆ 69. ಆದರೆ ಇಶಾನ್ ಕಿಶನ್ ಜವಾಬ್ದಾರಿಯುತ ಆಟವಾಡಿದರು. 34 ಎಸೆತಕ್ಕೆ 44 ರನ್ ಗಳಿಸಿ ನೆರವಾದರು. ಕೊನೆಯಲ್ಲಿ ಕಮಿಂಡು ಮೆಂಡಿಸ್ 22 ಎಸೆತಕ್ಕೆ ಔಟಾಗದೆ 32 ಹಾಗೂ ನಿತೀಶ್ ರೆಡ್ಡಿ ಔಟಾಗದೆ 19 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಕಳಪೆ ಆಟ: ಇದಕ್ಕೂ ಮುನ್ನ ಚೆನ್ನೈ ಬ್ಯಾಟಿಂಗ್ ನೀರಸವಾಗಿತ್ತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಶೇಖ್ ರಶೀದ್‌ರನ್ನು ಶಮಿ ಔಟ್ ಮಾಡಿದರು. ಆಯುಶ್ ಮಾಥ್ರೆ 19 ಎಸೆತಕ್ಕೆ 30 ರನ್ ಗಳಿಸಿ ತಂಡಕ್ಕೆ ನೆರವಾದರು. ಪವರ್-ಪ್ಲೇನಲ್ಲಿ ತಂಡದ ಸ್ಕೋರ್ 50. ಬಳಿಕ ತಂಡಕ್ಕೆ ನೆರವಾಗಿದ್ದು ಡೆವಾಲ್ಡ್ ಬ್ರೆವಿಸ್. ಕಮಿಂಡು ಮೆಂಡಿಸ್ ಎಸೆದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ 3 ಸಿಕ್ಸರ್ ಸೇರಿದಂತೆ 25 ಎಸೆತಗಳಲ್ಲಿ 42 ರನ್ ಸಿಡಿಸಿದರು. ಆದರೆ 13ನೇ ಓವರ್‌ನಲ್ಲಿ ಬ್ರೆವಿಸ್ ಔಟಾದ ಬಳಿಕ ತಂಡ ಮತ್ತೆ ಕುಸಿಯಿತು. ದೀಪಕ್ ಹೂಡಾ 22 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಿದರು. ಹರ್ಷಲ್ ಪಟೇಲ್ 4 ವಿಕೆಟ್ ಕಿತ್ತರು.
ಸ್ಕೋರ್: ಚೆನ್ನೈ 19.5 ಓವರ್‌ಗಳಲ್ಲಿ 154/10 (ಬ್ರೆವಿಸ್ 42, ಆಯುಶ್ 30, ಹರ್ಷಲ್ 4-28, ಕಮಿನ್ಸ್ 2-21, ಉನಾದ್ಕಟ್ 2-21), ಹೈದರಾಬಾದ್ 18.4 ಓವರ್‌ಗಳಲ್ಲಿ 155/5 (ಇಶಾನ್ 44, ಕಮಿಂಡು 32, ನೂರ್ 2-42)
ಪಂದ್ಯಶ್ರೇಷ್ಠ:
ಪವರ್-ಪ್ಲೇನಲ್ಲಿ ಸಿಕ್ಸರ್
ಇಲ್ಲದ ಮೊದಲ ಪಂದ್ಯ!
ಶುಕ್ರವಾರದ ಪಂದ್ಯದಲ್ಲಿ ಪವರ್-ಪ್ಲೇನ 6 ಓವರ್‌ಗಳಲ್ಲಿ ಚೆನ್ನೈ ಹಾಗೂ ಹೈದರಾಬಾದ್ ತಂಡಗಳಿಂದ ಒಂದೂ ಸಿಕ್ಸರ್ ದಾಖಲಾಗಲಿಲ್ಲ. ಎರಡೂ ತಂಡಗಳು ಪವರ್-ಪ್ಲೇನಲ್ಲಿ ಕನಿಷ್ಠ ಒಂದಾದರೂ ಸಿಕ್ಸರ್ ಬಾರಿಸದೇ ಇದ್ದ 2025ರ ಆವೃತ್ತಿಯ ಮೊದಲ ಪಂದ್ಯ ಇದು.
ಮೊದಲ ಎಸೆತಕ್ಕೆ 4
ವಿಕೆಟ್: ಶಮಿ ದಾಖಲೆ
ಐಪಿಎಲ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಅತಿ ಹೆಚ್ಚು ಬಾರಿ(4) ವಿಕೆಟ್ ಕಿತ್ತ ದಾಖಲೆಯನ್ನು ಶಮಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಶೋಕ್ ದಿಂಡಾ, ಮಾಲಿಂಗಾ, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಭುವನೇಶ್ವರ್, ಟ್ರೆಂಟ್ ಬೌಲ್ಟ್ ತಲಾ 3 ಬಾರಿ ಈ ಸಾಧನೆ ಮಾಡಿದ್ದಾರೆ.
-01ನೇ ಜಯ
ಸಿಎಸ್‌ಕೆ ವಿರುದ್ಧ ಚೆಪಾಕ್‌ನಲ್ಲಿ ಸನ್‌ರೈಸರ್ಸ್ ಮೊದಲ ಗೆಲುವು ದಾಖಲಿಸಿತು. ಮೊದಲ 5ರಲ್ಲಿ ಸೋತಿತ್ತು.
04ನೇ ಸೋಲು
ಸಿಎಸ್‌ಕೆ ಚೆಪಾಕ್‌ನಲ್ಲಿ ಸತತ 4ನೇ ಸೋಲುಂಡಿತು. ಆವೃತ್ತಿಯೊಂದರಲ್ಲಿ ತಂಡ ಸತತವಾಗಿ ಇಷ್ಟು ಸೋತಿದ್ದು ಇದೇ ಮೊದಲು.