ಸ್ಪೇನ್‌ನ ಬಾರ್ಸಿಲೋನಾ ಅಕಾಡೆಮಿಯಲ್ಲಿದ್ದ ಯುವ ಪ್ರತಿಭೆ । ಪುಟ್ಟ ಬಾಲಕ ಮೆಸ್ಸಿ ಬಗ್ಗೆ ಅರ್ಜೆಂಟೀನಾ ನಿರ್ಲಕ್ಷ್ಯ, ಸ್ಪೇನ್‌ ಕೋಚ್‌ಗಳ ಉತ್ಸುಕವಿಡಿಯೋ ಟೇಪ್‌ನಲ್ಲಿ ಆಟ ಕಂಡು ಎಚ್ಚೆತ್ತ ಅರ್ಜೆಂಟೀನಾ । ಅಜ್ಜಿ, ಚಿಕ್ಕಪ್ಪ ಬಳಿಕ ಮೆಸ್ಸಿಯ ತಂದೆಯನ್ನು ಸಂಪರ್ಕಿಸಿ ಯಶಸ್ಸು ಕಂಡ ಕೋಚ್‌ಗಳು

ಸ್ಪೇನ್‌ನ ಬಾರ್ಸಿಲೋನಾ ಅಕಾಡೆಮಿಯಲ್ಲಿದ್ದ ಯುವ ಪ್ರತಿಭೆ । ಪುಟ್ಟ ಬಾಲಕ ಮೆಸ್ಸಿ ಬಗ್ಗೆ ಅರ್ಜೆಂಟೀನಾ ನಿರ್ಲಕ್ಷ್ಯ, ಸ್ಪೇನ್‌ ಕೋಚ್‌ಗಳ ಉತ್ಸುಕವಿಡಿಯೋ ಟೇಪ್‌ನಲ್ಲಿ ಆಟ ಕಂಡು ಎಚ್ಚೆತ್ತ ಅರ್ಜೆಂಟೀನಾ । ಅಜ್ಜಿ, ಚಿಕ್ಕಪ್ಪ ಬಳಿಕ ಮೆಸ್ಸಿಯ ತಂದೆಯನ್ನು ಸಂಪರ್ಕಿಸಿ ಯಶಸ್ಸು ಕಂಡ ಕೋಚ್‌ಗಳು

 ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಲಿಯೋನಲ್‌ ಮೆಸ್ಸಿ ಅರ್ಜೆಂಟೀನಾ ವಿರುದ್ಧ, ಸ್ಪೇನ್‌ ತಂಡದ ಪರ ಆಡಿ ಟ್ರೋಫಿ ಎತ್ತಿ ಹಿಡಿಯುವುದನ್ನು ನೀವೊಮ್ಮೆ ಊಹಿಸಿ ನೋಡಿ. ದಶಕಗಳ ಹಿಂದೆ ಅರ್ಜೆಂಟೀನಾ ಯುವ ತಂಡದ ಕೋಚ್‌ಗಳು ಮೆಸ್ಸಿ ಎಂಬ ಪ್ರತಿಭಾವಂತ ಬಾಲಕನ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದ್ದಿದ್ದರೆ ನಿಮ್ಮ ಊಹೆ ಸರಿಯಾಗಿರುತ್ತಿತ್ತು. ಇಂದು ದಿಗ್ಗಜ ಮೆಸ್ಸಿ ಅರ್ಜೆಂಟೀನಾ ಬದಲು ಸ್ಪೇನ್‌ ತಂಡದಲ್ಲಿರುತ್ತಿದ್ದರು. ಆದರೆ ಒಂದು ಕ್ಯಾಸೆಟ್‌ ಟೇಪ್‌, ಸತತ ಪ್ರಯತ್ನಗಳ ಬಳಿಕ ಕನೆಕ್ಟ್‌ ಆದ ಟೆಲಿಫೋನ್‌ ಕರೆ, ‘LEONEL MECCI’ ಎಂದು ತಪ್ಪಾಗಿ ಬರೆಯಲಾಗಿದ್ದ ಫ್ಯಾಕ್ಸ್‌ ಇಂದು ಮೆಸ್ಸಿಯನ್ನು ಅರ್ಜೆಂಟೀನಾದ ದಿಗ್ಗಜನನ್ನಾಗಿ ಬೆಳೆಸಿದೆ.

1987ರಲ್ಲಿ ಮೆಸ್ಸಿ ಹುಟ್ಟಿದ್ದು ಅರ್ಜೆಂಟೀನಾದ ರೊಸಾರಿಯೊ ನಗರದಲ್ಲಿ. 2000ದಲ್ಲಿ ತಮ್ಮ 13ನೇ ವರ್ಷದಲ್ಲಿ ಮೆಸ್ಸಿ ‘ಲಾ ಮಾಸಿಯಾ’ ಎಂಬ ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ನ ಯುವ ಅಕಾಡೆಮಿಗೆ ಸೇರ್ಪಡೆಗೊಳ್ಳುತ್ತಾರೆ. ಲಾ ಮಾಸಿಯಾಗೆ ಸೇರ್ಪಡೆಗೊಂಡ ಕೆಲವೇ ತಿಂಗಳುಗಳ ನಂತರ, ಅಲ್ಲಿನ ಯುವ ತಂಡದ ಕೋಚ್‌ ಅಲೆಕ್ಸ್ ಗಾರ್ಸಿಯಾ ಅವರಿಗೆ ಒಂದು ಪ್ರಶ್ನೆ ಕಾಡಿತ್ತು. ‘ಅರ್ಜೆಂಟೀನಾ ಏಕೆ ಮೆಸ್ಸಿಯ ಪ್ರತಿಭೆಯನ್ನು ಗುರುತಿಸಿಲ್ಲ? ಆತನನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ?’. ಕೂಡಲೇ ಸ್ಪೇನ್‌ನ ರಾಷ್ಟ್ರೀಯ ಕಿರಿಯರ ತಂಡದ ಕೋಚ್‌ ಗಿನೆಸ್ ಮೆಲೆಂಡೆಜ್ ಅವರಿಗೆ ಕರೆ ಮಾಡಿದ ಗಾರ್ಸಿಯಾ, ‘ಇಲ್ಲಿ ಅರ್ಜೆಂಟೀನಾದ ಒಬ್ಬ ಹುಡುಗನಿದ್ದಾನೆ. ಆದರೆ ಅರ್ಜೆಂಟೀನಾದವರು ಅವನನ್ನು ತಂಡಕ್ಕೆ ಸೇರಿಸಿಲ್ಲ. ಬಹುಶಃ ಹುಡುಗ ಸ್ಪೇನ್ ಪರ ಆಡಲು ಬಯಸುವ ಸಾಧ್ಯತೆಯಿದೆ’ ಎಂದಿದ್ದರು.

‘ಈ ಹುಡುಗನೇ ನಮ್ಮ ಭವಿಷ್ಯ’

ಮೆಸ್ಸಿಯ ಬಹುತೇಕ ಸಹ ಆಟಗಾರರು ಕಿರಿಯರ ತಂಡದ ಭಾಗವಾಗಿದ್ದರು. ಪ್ರತಿಭಾನ್ವೇಷಕರು ನಿರಂತರವಾಗಿ ಅವರ ಮೇಲೆ ನಿಗಾ ಇರಿಸಿದ್ದರು. ಆದರೆ ಯಾರೂ ಮೆಸ್ಸಿಯತ್ತ ಗಮನ ಹರಿಸಿರಲಿಲ್ಲ. ಒಂದು ದಿನ ಅಕಾಡೆಮಿಗೆ ಬಂದ ಮೆಲೆಂಡೆಜ್‌ ಅವರು ಮೆಸ್ಸಿಯ ಆಟವನ್ನು ನೋಡಿ, ‘ಆತನ(ಮೆಸ್ಸಿ) ಪೋಷಕರನ್ನು ಅಥವಾ ಏಜೆಂಟ್‌ಗಳನ್ನು ಒಪ್ಪಿಸಿ. ಈ ಹುಡುಗನೇ ನಮ್ಮ ಭವಿಷ್ಯ’ ಎಂದಿದ್ದರು. ಈ ಬಗ್ಗೆ ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಲೆಂಡೆಜ್, ‘ಲಿಯೋ(ಮೆಸ್ಸಿ) ಇಲ್ಲದಿರುವುದೇ ನಮ್ಮ ತಂಡದ ಏಕೈಕ ಕೊರತೆ. ನಮ್ಮ ತಂಡದಲ್ಲಿ ಅವರನ್ನು ನಾನು ಕಲ್ಪಿಸಿಕೊಂಡಿದ್ದೆ. ಮೆಸ್ಸಿ ಇದ್ದಿದ್ದರೆ ನಮ್ಮ ರಾಷ್ಟ್ರೀಯ ತಂಡವು ಸಂಪೂರ್ಣ ಅಜೇಯವಾಗಿರುತ್ತಿತ್ತು’ ಎಂದು ಹೇಳಿದ್ದರು.

ತಂದೆಗೆ ಕೆಲಸ, ಮೆಸ್ಸಿಗೆ ಇಂಜೆಕ್ಷನ್‌ ದುಡ್ಡು!

ತಮ್ಮ 11ನೇ ವಯಸ್ಸಿನಲ್ಲಿ ಮತ್ತು ಕೇವಲ 4 ಅಡಿ 4 ಇಂಚು ಎತ್ತರವಿದ್ದರು. ಅವರಿಗೆ ಬೆಳವಣಿಗೆಯ ಹಾರ್ಮೋನ್ ಕೊರತೆ ಇತ್ತು. ಹೀಗಾಗಿ ಪ್ರತಿ ತಿಂಗಳು ಹಾರ್ಮೋನ್‌ ಚುಚ್ಚುಮದ್ದಿಗೆ 1000 ಡಾಲರ್ ವೆಚ್ಚವಾಗುತ್ತಿತ್ತು. ಈ ವೆಚ್ಚದ ಕಾರಣಕ್ಕೇ ಅರ್ಜೆಂಟೀನಾದ ಅನೇಕ ಕ್ಲಬ್‌ಗಳು ಮೆಸ್ಸಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದವು. ಆದರೆ ಬಾರ್ಸಿಲೋನಾ ಕ್ಲಬ್‌ ತಮ್ಮ ಯುವ ಆಟಗಾರ ಮೆಸ್ಸಿಯ ಇಂಜೆಕ್ಷನ್‌ಗಾಗಿ ಹಣ ಪಾವತಿಸುತ್ತಿತ್ತು. ಮೆಸ್ಸಿಯನ್ನು ಕ್ಲಬ್‌ನಲ್ಲೇ ಇಟ್ಟುಕೊಳ್ಳಲು ಅವರ ತಂದೆಗೆ ಉದ್ಯೋಗವನ್ನು ಕಲ್ಪಿಸಿ ವಾರ್ಷಿಕವಾಗಿ ಸುಮಾರು 70000 ಡಾಲರ್(₹67 ಲಕ್ಷ) ವೇತನ ನೀಡುತ್ತಿತ್ತು. ಈ ಮೂಲಕ ಮೆಸ್ಸಿಯನ್ನು ಸ್ಪೇನ್‌ ತಂಡದ ಪರ ಆಡಿಸಲು ಒಪ್ಪಿಸುವ ಪ್ರಯತ್ನವನ್ನು ಕ್ಲಬ್‌ ಮಾಡುತ್ತಿತ್ತು.

‘ಆಡುವುದಿದ್ದರೆ ಅರ್ಜೆಂಟೀನಾಕ್ಕೆ ಮಾತ್ರ’

ಆದರೆ 13ನೇ ವಯಸ್ಸಿಗೇ ಮೆಸ್ಸಿ ತಮ್ಮ ರಾಷ್ಟ್ರೀಯ ತಂಡದ ಆಯ್ಕೆ ವಿಚಾರದಲ್ಲಿ ಸ್ಪಷ್ಟತೆ ಹೊಂದಿದ್ದರು. ‘ಆಡುವುದಿದ್ದರೆ ಅರ್ಜೆಂಟೀನಾಕ್ಕೆ ಮಾತ್ರ’ ಎಂಬುದು ಅವರ ನಿರ್ಧಾರವಾಗಿತ್ತು. ಈ ಬಗ್ಗೆ ಅರ್ಜೆಂಟೀನಾ ಪತ್ರಿಕೆಯೊಂದಕ್ಕೆ ಬರೆದಿದ್ದ ಮೆಸ್ಸಿ, ‘ನಾನು ಸ್ಪೇನ್ ಪರ ಆಡಲು ಬಯಸುತ್ತೇನೆಯೇ ಎಂದು ತಿಳಿಯಲು ಅನೌಪಚಾರಿಕವಾಗಿ ಹಲವರು ಸಂಪರ್ಕಿಸಿದ್ದರು. ಆದರೆ ನಾನು ಅರ್ಜೆಂಟೀನಾ ಪರ ಆಡಲು ಬಯಸುವುದಾಗಿ ಹೇಳುತ್ತಿದ್ದೆ. ಈ ಬಣ್ಣಗಳ(ತಿಳಿ ನೀಲಿ, ಬಿಳಿ) ಬಗ್ಗೆ ಮಾತ್ರ ಭಾವನಾತ್ಮಕ ಒಲವು ಹೊಂದಿದ್ದೇನೆ’ ಎಂದು ಉತ್ತರಿಸಿದ್ದರು.

ಏಜೆಂಟ್‌ನ ಮೊರೆ ಹೋದ ಬಾರ್ಸಿಲೋನಾಮೆಸ್ಸಿ ಸ್ಪೇನ್‌ ಪರವೇ ಆಡಬೇಕೆಂದು ಬಯಸಿದ್ದ ಬಾರ್ಸಿಲೋನಾ ಕೋಚ್‌ಗಳು, ಮೆಸ್ಸಿಯ ಏಜೆಂಟ್ ಹೊರಾಶಿಯೊ ಗ್ಯಾಗಿಯೊಲಿ ಅವರ ಮೊರೆ ಹೋಗಿದ್ದರು. ಮೆಸ್ಸಿಯ ಕುಟುಂಬವನ್ನು ಒಪ್ಪಿಸಲು ಅವರು ಮನವಿ ಮಾಡಿದ್ದರು. ಆದರೆ ಅದರಿಂದ ಫಲ ಸಿಗಲಿಲ್ಲ.

ಆದರೆ ವರ್ಷದ ನಂತರ, ಅರ್ಜೆಂಟೀನಾ ತಂಡದ ಕೋಚ್‌ ಮಾರ್ಸೆಲೊ ಬಿಯೆಲ್ಸಾ ಮತ್ತು ಅವರ ಸಹಾಯಕ ಕ್ಲಾಡಿಯೊ ವಿವಾಸ್ ಸೀನಿಯರ್‌ ತಂಡಗಳ ಆಟವನ್ನು ನೋಡಲು ಸ್ಪೇನ್‌ಗೆ ಆಗಮಿಸಿದ್ದರು. ಇದೇ ಸೂಕ್ತ ಸಮಯ ಎಂದು ಭಾವಿಸಿದ ಏಜೆಂಟ್‌ ಗ್ಯಾಗಿಯೊಲಿ, ಮೆಸ್ಸಿಯ ಆಟವನ್ನು ಚಿತ್ರೀಕರಿಸಿದ್ದ ವಿಎಚ್‌ಎಸ್ ಟೇಪ್ಅನ್ನು ತಮಗೆ ನೀಡುವಂತೆ ಮೆಸ್ಸಿಯ ತಂದೆಯಲ್ಲಿ ಕೇಳಿದ್ದರು. ಅದನ್ನು ಗ್ಯಾಗಿಯೊಲಿ, ಕೋಚ್‌ಗಳಾದ ಮಾರ್ಸೆಲೊ ಹಾಗೂ ವಿವಾಸ್‌ಗೆ ನೀಡಿ, ಈ ಹುಡುಗನ ಆಟ ನೋಡುವಂತೆ ಮನವಿ ಮಾಡಿದ್ದರು. ಆದರೆ ಅವರು ಟೇಪ್‌ ವೀಕ್ಷಿಸದೆ ನಿರ್ಲಕ್ಷಿಸಿದ್ದರು. ಅದಕ್ಕಾಗಿ ಅವರಲ್ಲಿ ಸಮಯವೂ ಕಂಡುಕೊಳ್ಳಲಿಲ್ಲ.

ಅಂಡರ್‌-17 ವಿಭಾಗದಲ್ಲಿ ಗೆದ್ದ ಸ್ಪೇನ್‌ ತಂಡವನ್ನು ಅಭಿನಂದಿಸಲು ಅರ್ಜೆಂಟೀನಾ ಕಿರಿಯರ ತಂಡದ ಕೋಚ್‌ ಹ್ಯೂಗೋ ಟೊಕಾಲ್ಲಿ ತೆರಳಿದ್ದರು. ಆಗ ಸ್ಪೇನ್‌ ತಂಡದ ಸೆಸ್‌ ಫ್ಯಾಬ್ರೆಗಾಸ್, ‘ನೀವು ನಿಮ್ಮ ಅತ್ಯುತ್ತಮ ಆಟಗಾರನನ್ನು ಆಡಿಸದಿದ್ದರಿಂದ ಸೋತಿದ್ದೀರಿ’ ಎಂದರು. ಯಾರು ಎಂಬ ಪ್ರಶ್ನೆಗೆ, ಫ್ರಾಬ್ರೆಗಾಸ್‌ ‘ಲಿಯೋನೆಲ್ ಮೆಸ್ಸಿ’ ಎಂದು ಉತ್ತರಿಸಿದ್ದರು.

ಸ್ಪೀಡ್‌ ಇದ್ದಿದ್ದು ಕ್ಯಾಸೆಟ್‌ ಅಲ್ಲ, ಮೆಸ್ಸಿ

ಫ್ಯಾಬ್ರೆಗಾಸ್‌ರ ಮಾತು ಕೇಳಿದ ಟೊಕಾಲ್ಲಿಗೆ ವಿಎಚ್‌ಎಸ್ ಟೇಪ್ ನೆನಪಾಗಿದೆ. ಕೂಡಲೇ ಅದನ್ನು ಪ್ಲೇ ಮಾಡಿ ನೋಡಿದ ಅವರು, ‘ಟೇಪ್‌ ವೇಗವಾಗಿ ಪ್ಲೇ ಮಾಡಬೇಡಿ. ಸಾಮಾನ್ಯ ವೇಗದಲ್ಲಿರಲಿ’ ಎಂದಿದ್ದಾರೆ. ಆದರೆ ವೇಗವಾಗಿದ್ದು ಟೇಪ್‌ ಅಲ್ಲ, ಮೆಸ್ಸಿಯ ಆಟ ಎಂಬುದು ಗೊತ್ತಾಗಲು ಅವರಿಗೆ ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ.

ಯುವ ಪ್ರತಿಭೆಯ ಆಟವನ್ನು ನೋಡಿದ ಕೂಡಲೇ ಎಚ್ಚೆತ್ತ ಕೋಚ್‌, ಮೆಸ್ಸಿಯ ಪೋಷಕರನ್ನು ಹುಡುಕುವ ಪ್ರಯತ್ನಕ್ಕಿಳಿದರು. ಈ ಜವಾಬ್ದಾರಿ ರಾಷ್ಟ್ರೀಯ ತಂಡದ ವ್ಯವಸ್ಥಾಪಕ ಒಮರ್ ಸೌಟೊ ಅವರ ಹೆಗಲಿಗೆ ಬಿತ್ತು. ತಕ್ಷಣವೇ ಒಂದು ಸಾರ್ವಜನಿಕ ದೂರವಾಣಿ ಬೂತ್‌ಗೆ ತೆರಳಿ, ‘ಮೆಸ್ಸಿ’ ಎಂಬ ಉಪನಾಮವಿರುವ ಎಲ್ಲರಿಗೂ ಕರೆ ಮಾಡಿದರು. ಆದರೆ ಅವರಿಗೆ ಆ ಹುಡುಗನ ಮೊದಲ ಹೆಸರು(ಲಿಯೋನಲ್‌) ಕೂಡ ತಿಳಿದಿರಲಿಲ್ಲ. ಒಂದು ಗಂಟೆಯ ಪ್ರಯತ್ನದ ಬಳಿಕ ಮೆಸ್ಸಿಯ ಅಜ್ಜಿಗೆ ಕರೆ ಹೋಗಿದೆ. ಬಳಿಕ ಮೆಸ್ಸಿಯ ಚಿಕ್ಕಪ್ಪನನ್ನು ಸಂಪರ್ಕಿಸಿ, ನಂತರ ಮೆಸ್ಸಿಯ ತಂದೆ ಹೋಯೆ ಮೆಸ್ಸಿ ಅವರ ಸಂಪರ್ಕ ಸಿಕ್ಕಿದೆ. ಅವರ ಬಳಿ ಮೆಸ್ಸಿಯನ್ನು ಅರ್ಜೆಂಟೀನಾ ಪರ ಆಡುವಂತೆ ಮನವೊಲಿಸಿದ್ದಾರೆ.

ತಪ್ಪಾದ ಹೆಸರಲ್ಲಿ ಬಾರ್ಸಿಲೋನಾಗೆ ಫ್ಯಾಕ್ಸ್‌

ಪೋಷಕರ ಜೊತೆ ಮಾತುಕತೆಯ ಕೆಲ ದಿನಗಳ ಬಳಿಕ ಅರ್ಜೆಂಟೀನಾ ಫುಟ್ಬಾಲ್‌ ಸಂಸ್ಥೆ(ಎಎಫ್‌ಎ), ಮೆಸ್ಸಿಯನ್ನು ರಾಷ್ಟ್ರೀಯ ತಂಡಕ್ಕೆ ಕಳುಹಿಸಿಕೊಡಲು ಬಾರ್ಸಿಲೋನಾ ಕ್ಲಬ್‌ಗೆ ಫ್ಯಾಕ್ಸ್‌ ಕಳುಹಿಸಿತು. ಆದರೆ ತಮಾಷೆಯೆಂದರೆ, ಅದರಲ್ಲಿ ಅವರ ಹೆಸರನ್ನು ‘LEONEL MECCI’ ಎಂದು ತಪ್ಪಾಗಿ ಬರೆಯಲಾಗಿತ್ತು. ಅದಾಗಿ ಒಂದು ವರ್ಷದ ನಂತರ, ಮೆಸ್ಸಿ ಪರಗ್ವೆ ವಿರುದ್ಧ ಅರ್ಜೆಂಟೀನಾ ಯುವ ತಂಡದ ಪರವಾಗಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ.