ಸಾರಾಂಶ
ಪುಣೆ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು ಆಸ್ಟ್ರೇಲಿಯಾ ಸರಣಿಗೂ ಮುನ್ನ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ. ಆಸೀಸ್ ವಿರುದ್ಧ 5 ಪಂದ್ಯಗಳ ಸರಣಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದ್ದು, ಹಲವು ಹೊಸ ಮುಖಗಳಿವೆ.
ಆದರೆ ಕಿವೀಸ್ ಸರಣಿಯಲ್ಲಿ ಹಿರಿಯ ಆಟಗಾರರೇ ವೈಫಲ್ಯ ಅನುಭವಿಸಿದ್ದು ತಂಡವನ್ನು ಮಾನಸಿಕವಾಗಿ ಕುಗ್ಗಿಸಿದೆ.ತಂಡಕ್ಕೆ ತವರಿನಲ್ಲೇ ಸರಣಿ ಸೋತಿರುವ ಆಘಾತ ಒಂದೆಡೆಯಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಬಹುತೇಕ ಎಲ್ಲಾ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಮತ್ತೊಂದೆಡೆ.
ಜೊತೆಗೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಳಪೆ ಲಯದಲ್ಲಿದ್ದಾರೆ. ಬೆಂಗಳೂರಿನಲ್ಲಿ ಕಿವೀಸ್‌ನ ವೇಗದ ಬೌಲಿಂಗ್ ಮುಂದೆ ತತ್ತರಿಸಿ ಹೋಗಿದ್ದ ಭಾರತ ತಂಡ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ಹೀಗಾಗಿ ಆಟಗಾರರು ಆಸೀಸ್ ಪ್ರವಾಸಕ್ಕೂ ಮುನ್ನ ಮಾನಸಿಕವಾಗಿ ಸಜ್ಜುಗೊಳ್ಳಬೇಕಾದ ಅನಿವಾರ್ಯತೆಯಿದೆ.
ಮಹಿಳಾ ಟಿ 20 : ಕರ್ನಾಟಕ ತಂಡದ 4ನೇ ಪಂದ್ಯ ರದ್ದು!
ಕೋಲ್ಕತಾ: ಹಿರಿಯ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕದ 4ನೇ ಪಂದ್ಯ ಮಳೆಗೆ ಆಹುತಿಯಾಗಿದೆ. ಶನಿವಾರ ನಡೆಯಬೇಕಿದ್ದ ಕರ್ನಾಟಕ ಹಾಗೂ ಪುದುಚೇರಿ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಇದರಿಂದ ಇತ್ತಂಡಕ್ಕೆ ತಲಾ 2 ಅಂಕ ಲಭಿಸಿತು. ಸದ್ಯ ರಾಜ್ಯ 6 ಪಂದ್ಯಗಳಲ್ಲಿ 16 ಅಂಕ ಗಳಿಸಿ, ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಛತ್ತೀಸ್‌ಗಢ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ ವಿರುದ್ಧ ಪಂದ್ಯವೂ ಮಳೆಗೆ ರದ್ದಾಗಿತ್ತು. ಮುಂದಿನ ಪಂದ್ಯದಲ್ಲಿ ಅ.28ಕ್ಕೆ ಮಹಾರಾಷ್ಟ್ರ ವಿರುದ್ಧ ಸೆಣಸಾಡಲಿದೆ.