ಸಾರಾಂಶ
ಬೆಂಗಳೂರು : ಅಂತಾರಾಷ್ಟ್ರೀಯ ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿ, ಬೆಂಗಳೂರಿನ ಅಶ್ವಿನಿ ಗಣಪತಿ ಭಟ್, ಬ್ಯಾಕ್‌ಯಾರ್ಡ್ ಅಲ್ಟ್ರಾ ರನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಮೇ 10-11ರಂದು ಬೆಂಗಳೂರಿನ ಕನಕಪುರ ಬಳಿ ನಡೆದ ಬಿಗ್‌ಫೂಟ್ ಬ್ಯಾಕ್‌ಯಾರ್ಡ್ ಅಲ್ಟ್ರಾ ಓಟದಲ್ಲಿ 39 ವರ್ಷದ ಅಶ್ವಿನಿ ಅವರು 28 ಗಂಟೆ ಕಾಲ 187.6 ಕಿ.ಮೀ ಓಡಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೆಹಲಿಯ ಅಪರ್ಣಾ ಚೌಧರಿ 27 ಗಂಟೆ ಕಾಲ ಓಡಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಮೇ 10ರ ಬೆಳಗ್ಗೆ 6 ಗಂಟೆಗೆ ಸ್ಪರ್ಧೆ ಆರಂಭಿಸಿದ್ದ ಅಶ್ವಿನಿ, ಮೇ 11ರ ಬೆಳಗ್ಗೆ 11 ಗಂಟೆಗೆ ಓಟ ಮುಕ್ತಾಯಗೊಳಿಸಿದರು. ಒಟ್ಟು 20 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಶ್ವಿನಿ ಅವರಿಗಿಂತ 1 ಗಂಟೆ, 6.7 ಕಿ.ಮೀ ಹೆಚ್ಚಿಗೆ ಓಡಿದ ಮಣಿಪುರದ ಓಪೆಂದ್ರೋ ಸಿಂಗ್ ವಿಜೇತರಾದರು.
ಏನಿದು ಬ್ಯಾಕ್‌ಯಾರ್ಡ್ ಅಲ್ಟ್ರಾ?
ಪೂರ್ಣ ಮ್ಯಾರಥಾನ್ 42.195 ಕಿ.ಮೀ. ಓಟವನ್ನು ಒಳಗೊಂಡಿರುತ್ತದೆ. ಇದಕ್ಕಿಂತ ಹೆಚ್ಚು ಓಡುವ ಸ್ಪರ್ಧೆಯೇ ಅಲ್ಟ್ರಾ ಮ್ಯಾರಥಾನ್. ಬ್ಯಾಕ್‌ಯಾರ್ಡ್ ಅಲ್ಟ್ರಾದಲ್ಲಿ ನಿರ್ದಿಷ್ಟ ಪಥದಲ್ಲಿ ಒಂದು ಗಂಟೆಗೆ 6.7 ಕಿ.ಮೀ. ಓಡಬೇಕು. ಓಟಗಾರರು ಎಷ್ಟು ಬೇಗ ಈ ದೂರವನ್ನು ಮುಗಿಸುತ್ತಾರೋ ಅಷ್ಟು ವಿಶ್ರಾಂತಿ ಸಿಗಲಿದೆ. ಹೀಗೆ ಪ್ರತಿ ಗಂಟೆ ಸಾಗಿದಂತೆ ಸ್ಪರ್ಧಿಗಳು ಕಡಿಮೆಯಾಗುತ್ತಾ ಹೋಗುತ್ತಾರೆ. ಕೊನೆಯಲ್ಲಿ ಉಳಿಯುವ ಓಟಗಾರ/ಓಟಗಾರ್ತಿ ವಿಜೇತರಾಗಿ ಹೊರಹೊಮ್ಮುತ್ತಾರೆ. ಭಾರತದಲ್ಲಿ ಸುನಿಲ್ ಶರ್ಮಾ ಎನ್ನುವವರು 52 ಗಂಟೆ ಕಾಲ ಓಡಿ ಪುರುಷರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.