ಸಾರಾಂಶ
ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭಗೊಳ್ಳಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯಲಿದ್ದಾರೆ. ಇದನ್ನು ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಖಚಿತಪಡಿಸಿದ್ದಾರೆ.
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭಗೊಳ್ಳಲಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯಲಿದ್ದಾರೆ. ಇದನ್ನು ಭಾರತದ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಖಚಿತಪಡಿಸಿದ್ದಾರೆ.
ಕಾರ್ಯದೊತ್ತಡ ನಿಭಾಯಿಸುವ ನಿಟ್ಟಿನಲ್ಲಿ ಬೂಮ್ರಾ ಈ ಸರಣಿಯ 5 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಆಡಲಿದ್ದಾರೆ. 1 ಮತ್ತು 3ನೇ ಟೆಸ್ಟ್‌ನಲ್ಲಿ ಆಡಿರುವ ಬೂಮ್ರಾ, ಉಳಿದ 2 ಟೆಸ್ಟ್‌ಗಳ ಪೈಕಿ ಒಂದರಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಯಾವ ಟೆಸ್ಟ್‌ನಲ್ಲಿ ಅವರಿಗೆ ಸ್ಥಾನ ಸಿಗಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಸಿರಾಜ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನನಗೆ ಗೊತ್ತಿರುವ ಹಾಗೆ ಬೂಮ್ರಾ ಈ ಪಂದ್ಯದಲ್ಲಿ ಆಡಲಿದ್ದಾರೆ. ಗಾಯದ ಕಾರಣದಿಂದ ನಮ್ಮ ತಂಡದ ಸಂಯೋಜನೆ ಬದಲಾಗುತ್ತಿದೆ’ ಎಂದರು. ಆದರೆ ತೊಡೆಸಂಧು ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿರುವ ವೇಗಿ ಆಕಾಶ್‌ದೀಪ್ 4ನೇ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಸಿರಾಜ್ ಖಚಿತ ಮಾಹಿತಿ ನೀಡಿಲ್ಲ.
‘ಆಕಾಶ್‌ದೀಪ್ ಗಾಯದ ಬಗ್ಗೆ ಫಿಸಿಯೋಗಳು ಪರಿಶೀಲಿಸುತ್ತಿದ್ದಾರೆ. ಅವರಿಂದ ಇನ್ನಷ್ಟೇ ವರದಿ ಬರಬೇಕಿದೆ. ಆದರೆ ಬೆಳಗ್ಗಿನ ಅಭ್ಯಾಸ ಶಿಬಿರದಲ್ಲಿ ಅವರು ಬೌಲ್ ಮಾಡಿದ್ದಾರೆ’ ಎಂದರು. ‘ಅರ್ಶ್‌ದೀಪ್ ಸಿಂಗ್ ಗಾಯಗೊಂಡಿದ್ದರಿಂದ ಅನ್ಶುಲ್ ಕಂಬೋಜ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಶುಭ ಹಾರೈಕೆಗಳು’ ಎಂದು ಸಿರಾಜ್ ಹೇಳಿದ್ದಾರೆ.
ರಿಷಭ್ ಕೀಪಿಂಗ್ ಅಭ್ಯಾಸ:
ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ರಿಷಭ್ ಪಂತ್ 4ನೇ ಟೆಸ್ಟ್‌ನಲ್ಲಿ ತಜ್ಞ ಬ್ಯಾಟರ್ ಆಗಿ ಕಣಕ್ಕಿಳಿದು, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಹೊಣೆ ನಿಭಾಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸೋಮವಾರ ರಿಷಭ್ ಕೀಪಿಂಗ್ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಇದರೊಂದಿಗೆ ಅವರು 4ನೇ ಟೆಸ್ಟ್‌ನಲ್ಲಿ ವಿಕೆಟ್ ಕೀಪರ್ ಆಗಿಯೇ ಆಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪ್ರಸಿದ್ಧ್, ಕರುಣ್‌ಗೆ ಮತ್ತೆ ಅವಕಾಶ?
ಆಕಾಶ್‌ದೀಪ್ 4ನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಾಗಿಲ್ಲ. ಹೀಗಾಗಿ 3ನೇ ವೇಗಿ ಸ್ಥಾನಕ್ಕೆ ಅನುಭವಿ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಬಹುದು. ಅವರ ಬದಲು ಯುವ ವೇಗಿ ಅನ್ಶುಲ್ ಕಂಬೋಜ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ. ಇನ್ನು, ಆಲ್ರೌಂಡರ್ ನಿತೀಶ್ ಕುಮಾರ್ ಗಾಯಗೊಂಡು ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲವಿದೆ. ಸಾಯಿ ಸುದರ್ಶನ್‌ರನ್ನು ಕಣಕ್ಕಿಳಿಸುವುದರ ಜೊತೆಗೆ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಕೊಡುವ ಸಾಧ್ಯತೆಯೂ ಇದೆ.
ಇಂಗ್ಲೆಂಡ್ ಆಡುವ 11ರಲ್ಲಿ ಬದಲಾವಣೆ
4ನೇ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗವನ್ನು ಇಂಗ್ಲೆಂಡ್ ಪ್ರಕಟಿಸಿದೆ. ಶೋಯೆಬ್ ಬಶೀರ್ ಸ್ಥಾನಕ್ಕೆ ಮತ್ತೋರ್ವ ಸ್ಪಿನ್ನರ್ ಲಿಯಾಮ್ ಡಾವ್ಸನ್ ಆಯ್ಕೆಯಾಗಿದ್ದಾರೆ.
ಆಡುವ 11: ಕ್ರಾವ್ಲಿ, ಡಕೆಟ್, ಪೋಪ್, ರೂಟ್, ಬ್ರೂಕ್, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್, ಡಾವ್ಸನ್, ವೋಕ್ಸ್, ಬ್ರೈಡನ್ ಕಾರ್ಸ್, ಆರ್ಚರ್.