ಸಾರಾಂಶ
ದೋಹಾ: 2026ರ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ವಿಶ್ವಾಸದಲ್ಲಿರುವ ಭಾರತ ತಂಡ, 2ನೇ ಸುತ್ತಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಕತಾರ್ ವಿರುದ್ಧ ಸೆಣಸಲಿದೆ.
ಸುನಿಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿರುವ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.
ಗುಂಪಿನಿಂದ ಅಗ್ರ-2 ಸ್ಥಾನ ಪಡೆದು 3ನೇ ಸುತ್ತಿಗೇರಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಸೋತರೆ ಕನಸು ಭಗ್ನಗೊಳ್ಳಲಿದ್ದು, ಡ್ರಾಗೊಂಡರೆ ಅತ್ತ ಆಫ್ಘನ್-ಕುವೈತ್ ಪಂದ್ಯದ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗಲಿದೆ.
ಪಂದ್ಯ: ರಾತ್ರಿ 9.15ಕ್ಕೆ
ಒಲಿಂಪಿಕ್ಸ್‌ನಲ್ಲಿ ನಗಾಲ್ ಸ್ಪರ್ಧೆ ಬಹುತೇಕ ಖಚಿತ
ನವದೆಹಲಿ: ಜರ್ಮನಿಯ ಎಟಿಪಿ 100 ಹ್ರೀಲ್‌ಬ್ರಾನ್ ಚಾಲೆಂಜರ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ 77ನೇ ಸ್ಥಾನಕ್ಕೇರಿರುವ ಭಾರತದ ಅಗ್ರ ಟೆನಿಸಿ ಸುಮಿತ್ ನಗಾಲ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ ಅಗ್ರ-56 ಸ್ಥಾನಗಳಲ್ಲಿರುವವರು ಒಲಿಂಪಿಕ್ಸ್ ಅರ್ಹತೆ ಪಡೆಯಲಿದ್ದಾರೆ.
ಆದರೆ ಒಂದು ದೇಶದಿಂದ 4 ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ರ್‍ಯಾಂಕಿಂಗ್‌ನಲ್ಲಿ 56ರಿಂದ ಕೆಳಗಿರುವವರಿಗೂ ಒಲಿಂಪಿಕ್ಸ್ ಪ್ರವೇಶಿಸಲು ಅವಕಾಶವಿದೆ. ಸದ್ಯದ ಲೆಕ್ಕಾಚಾರ ಪ್ರಕಾರ ನಗಾಲ್ ಒಲಿಂಪಿಕ್ಸ್ ಪ್ರವೇಶಿಸಲಿದ್ದು, ಶೀಘ್ರದಲ್ಲೇ ಅಧಿಕೃತಗೊಳ್ಳುವ ನಿರೀಕ್ಷೆಯಿದೆ. ಕೊನೆ ಬಾರಿ ಭಾರತದ ಸೋಮ್‌ದೇವ್ ದೇವ್‌ವರ್ಮನ್ 2012ರಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.