ಕೊಕೊ ಗಾಫ್‌ಗೆ ಚೊಚ್ಚಲ ಫ್ರೆಂಚ್‌ ಓಪನ್‌ ಪ್ರಶಸ್ತಿ. ಫೈನಲ್‌ನಲ್ಲಿ ವಿಶ್ವ ನಂ. ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ ಗೆಲುವು. ವೃತ್ತಿಬದುಕಿನಲ್ಲಿ 2ನೇ ಗ್ರ್ಯಾನ್‌ ಸ್ಲಾಂ ಗೆದ್ದ ಕೊಕೊ. 2023ರಲ್ಲಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದ ಅಮೆರಿಕ ಆಟಗಾರ್ತಿ.

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಂ ಈ ವರ್ಷ ಹೊಸ ಚಾಂಪಿಯನ್‌ಗೆ ಸಾಕ್ಷಿಯಾಗಿದೆ. ಅಮೆರಿಕದ 21 ವರ್ಷದ ಕೊಕೊ ಗಾಫ್‌, ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ವಿಶ್ವ ನಂ.2 ಆಟಗಾರ್ತಿ ಕೊಕೊ, ವಿಶ್ವ ನಂ.1 ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ 6-7, 6-2, 6-4 ಸೆಟ್‌ಗಳಲ್ಲಿ ಗೆದ್ದು ಚೊಚ್ಚಲ ಫ್ರೆಂಚ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡರು.

ಭಾರೀ ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಕೊಕೊ, 10 ವರ್ಷ ಬಳಿಕ ಫ್ರೆಂಚ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಅಮೆರಿಕ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. 2015ರಲ್ಲಿ ಸೆರೆನಾ ವಿಲಿಯಮ್ಸ್‌ ಜಯ ಸಾಧಿಸಿದ್ದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಟೆನಿಸ್‌ ಆಟಗಾರ್ತಿಗೆ ಫ್ರೆಂಚ್‌ ಓಪನ್‌ ಒಲಿದಿದೆ.

78 ನಿಮಿಷಗಳ ಕಾಲ ನಡೆದ ಮೊದಲ ಸೆಟ್‌ ಟೈ ಬ್ರೇಕರ್‌ ಮೂಲಕ ನಿರ್ಧಾರಗೊಂಡಿತು. ಆರಂಭಿಕ ಮುನ್ನಡೆ ಪಡೆದ ಸಬಲೆಂಕಾ, ಚೊಚ್ಚಲ ಫ್ರೆಂಚ್‌ ಓಪನ್‌ ಜಯಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಆ ನಂತರದ 2 ಸೆಟ್‌ಗಳಲ್ಲಿ ಕೊಕೊ, ಪ್ರಾಬಲ್ಯ ಮೆರೆದು ಪ್ರಶಸ್ತಿಗೆ ಮುತ್ತಿಟ್ಟರು. ₹25 ಕೋಟಿ ಬಹುಮಾನ

ಫ್ರೆಂಚ್‌ ಓಪನ್‌ ಗೆದ್ದ ಕೊಕೊ ಗಾಫ್‌ 25 ಕೋಟಿ ರು. ಬಹುಮಾನ ಪಡೆದರು. ₹12.5 ಕೋಟಿ ಬಹುಮಾನ

ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆದ ಸಬಲೆಂಕಾಗೆ 12.5 ಕೋಟಿ ರು. ದೊರೆಯಿತು. --

ಕೊಕೊಗೆ 2ನೇ ಗ್ರ್ಯಾನ್‌ಸ್ಲಾಂ

2023ರಲ್ಲಿ ತಮ್ಮ 19ನೇ ವಯಸ್ಸಿನಲ್ಲೇ ಯುಎಸ್‌ ಓಪನ್ ಗೆದ್ದಿದ್ದ ಕೊಕೊ ಗಾಫ್‌, 2ನೇ ಬಾರಿಗೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. 2024ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಕೊಕೊ, 3 ಬಾರಿ ವಿಂಬಲ್ಡನ್‌ನಲ್ಲಿ 4ನೇ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಫ್ರೆಂಚ್‌ ಓಪನ್‌ ಗೆಲುವಿನ ಹೊರತಾಗಿಯೂ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕೊಕೊ 2ನೇ ಸ್ಥಾನದಲ್ಲೇ ಉಳಿಯಲಿದ್ದು, ಸಬಲೆಂಕಾ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದಾರೆ.