ಬ್ರಿಡ್ಜ್‌ಟೌನ್‌(ಬಾರ್ಬಡೊಸ್‌): ವಿಶ್ವ ಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್‌, ವೆಸ್ಟ್‌ಇಂಡೀಸ್‌ನ ದಿಗ್ಗಜ ಆಟಗಾರ ಸರ್‌ ಗಾರ್ಫೀಲ್ಡ್ ಸೋಬರ್ಸ್ ಶುಕ್ರವಾರ ನಿಧನರಾಗಿದ್ದಾರೆ. ತಮ್ಮ 90ನೇ ಹುಟ್ಟುಹಬ್ಬಕ್ಕೆ 11 ದಿನ ಬಾಕಿ ಇರುವಾಗ ಅವರು ವಯೋಸಹಜ ಕಾಯಿಲೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

1936ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಜನಿಸಿದ್ದ ಸೋಬರ್ಸ್‌, ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್‌ ಎಂದೇ ಪರಿಗಣಿಸಲಾಗುತ್ತದೆ. ಬಾರ್ಬಡೋಸ್‌ನಿಂದ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಸೋಬರ್ಸ್ 1965ರಿಂದ 1972 ರವರೆಗೆ ವೆಸ್ಟ್‌ಇಂಡೀಸ್‌ ತಂಡದ ನಾಯಕತ್ವ ವಹಿಸಿದ್ದರು. ಅವರು 1952ರಲ್ಲಿ ಪ್ರಥಮ ದರ್ಜೆ, 1954ರಲ್ಲಿ ವೆಸ್ಟ್ ಇಂಡೀಸ್ ಪರ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಟೆಸ್ಟ್ ಕ್ರಿಕೆಟ್‌ಅನ್ನು ಸ್ಮರಣೀಯಗೊಳಿಸಿದ್ದರು.

1958ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಅವರು 365 ರನ್‌ ಸಿಡಿಸಿದ್ದು, ಆ ಕಾಲದ ಗರಿಷ್ಠ ಸ್ಕೋರ್‌ ಎನಿಸಿಕೊಂಡಿತ್ತು. ಒಟ್ಟಾರೆ ಅವರು 1954ರಿಂದ 1974ರ ವರೆಗೆ 93 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 8032 ರನ್‌ ಗಳಿಸಿ, 235 ವಿಕೆಟ್‌ ಪಡೆದಿದ್ದಾರೆ. 26 ಶತಕ, 30 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಒಂದು ಏಕದಿನ ಪಂದ್ಯದಲ್ಲೂ ಕಣಕ್ಕಿಳಿದಿದ್ದಾರೆ. 383 ಪ್ರಥಮ ದರ್ಜೆ ಪಂದ್ಯಗಳಲ್ಲಿ 86 ಶತಕ, 121 ಅರ್ಧಶತಕ ಸೇರಿದಂತೆ ಒಟ್ಟು 28,314 ರನ್‌ ಗಳಿಸಿ, 1043 ವಿಕೆಟ್‌ ಪಡೆದಿದ್ದಾರೆ.


ಅವರ ಗೌರವಾರ್ಥ ವೆಸ್ಟ್‌ಇಂಡೀಸ್‌ನಲ್ಲಿ ಶ್ರೇಷ್ಠ ಕ್ರಿಕೆಟಿಗರಿಗೆ ನೀಡಲಾಗುವ ಪ್ರಶಸ್ತಿಗೆ ಸರ್‌ ಗಾರ್ಫೀಲ್ಡ್‌ ಸೋಬರ್ಸ್‌ ಅವಾರ್ಡ್‌ ಎಂಬ ಹೆಸರಿಡಲಾಗಿದೆ.

ಸತತ 6 ಸಿಕ್ಸರ್‌ ಸಿಡಿಸಿದ ಮೊದಲಿಗ

ಯಾವುದೇ ಮಾದರಿ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಬ್ಯಾಟರ್‌ ಎಂಬ ದಾಖಲೆ ಸೋಬರ್ಸ್‌ ಅವರ ಹೆಸರಿನಲ್ಲಿದೆ. 1968ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೋರ್ಗನ್‌ ವಿರುದ್ಧ ಪಂದ್ಯದಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ ಪರ ಅವರು ಈ ಸಾಧನೆ ಮಾಡಿದ್ದರು.

ಸೋಬರ್ಸರ್‌ ಕ್ರಿಕೆಟ್‌ ಐಕಾನ್‌: ಬಿಸಿಸಿಐ

ಸೋಬರ್ಸ್‌ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದೆ. ಅವರನ್ನು ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್‌ ಹಾಗೂ ಕ್ರಿಕೆಟ್‌ ಲೋಕದ ಐಕಾನ್‌ ಎಂದು ಬಣ್ಣಿಸಿದೆ. ಅಲ್ಲದೆ, ಹಲವು ಮಾಜಿ ಕ್ರಿಕೆಟಿಗರು ಕೂಡಾ ಸೋಬರ್ಸ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.