ಚಾಂಪಿಯನ್ಸ್‌ ಟ್ರೋಫಿ ಹಿಂದೆ ರೋಚಕ ಇತಿಹಾಸ - 8 ವರ್ಷಗಳಲ್ಲಿ ಇದೇ ಮೊದಲ ಬಾರಿ ಟೂರ್ನಿ

| N/A | Published : Feb 16 2025, 12:10 PM IST

success-story-of-1xBet-supporting-promoting-sports-in-India

ಸಾರಾಂಶ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭಗೊಂಡು ಎರಡೂವರೆ ದಶಕ ಕಳೆದರೂ, ಕಳೆದ 8 ವರ್ಷಗಳಲ್ಲಿ ಇದೇ ಮೊದಲ ಬಾರಿ ಟೂರ್ನಿ ನಡೆಯುತ್ತಿದೆ.

ಚಾಂಪಿಯನ್ಸ್‌ ಟ್ರೋಫಿ ಹಿಂದೆ ರೋಚಕ ಇತಿಹಾಸ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭಗೊಂಡು ಎರಡೂವರೆ ದಶಕ ಕಳೆದರೂ, ಕಳೆದ 8 ವರ್ಷಗಳಲ್ಲಿ ಇದೇ ಮೊದಲ ಬಾರಿ ಟೂರ್ನಿ ನಡೆಯುತ್ತಿದೆ. ಮಿನಿ ಏಕದಿನ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಆರಂಭಿಸಿದ್ದು ಏಕೆ? ಯಾವಾಗ? ಈ ವರೆಗೂ ಎಷ್ಟು ಬಾರಿ ಟೂರ್ನಿ ನಡೆದಿದೆ. ಪಾಲ್ಗೊಂಡಿರುವ ರಾಷ್ಟ್ರಗಳು ಯಾವ್ಯಾವು? ಚಾಂಪಿಯನ್‌ ಆಗಿರುವ ರಾಷ್ಟ್ರಗಳು ಯಾವ್ಯಾವು? ಯಾವ್ಯಾವ ರಾಷ್ಟ್ರಗಳಿಗೆ ಆತಿಥ್ಯ ಹಕ್ಕು ಸಿಕ್ಕಿದೆ ಎಂದು ಸಂಪೂರ್ಣ ಮಾಹಿತಿ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

ಐಸಿಸಿಗೆ ಹಣ ಸಂಗ್ರಹಕ್ಕಾಗಿ

ಆರಂಭಗೊಂಡಿದ್ದ ಟೂರ್ನಿ!

ಕ್ರಿಕೆಟ್‌ ಈಗ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಯಾವುದೇ ಕ್ರಿಕೆಟ್‌ ಟೂರ್ನಿ ಇದ್ದರೂ ಅಲ್ಲಿ ದುಡ್ಡಿನ ಹೊಳೆಯೇ ಹರಿಯುತ್ತದೆ. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ದುಡ್ಡು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರಲಿಲ್ಲ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹೊರತಾಗಿ ಇತರ ಕೆಲ ದೇಶ ಆದಾಯದ ಕೊರತೆ ಎದುರಿಸುತ್ತಿತ್ತು. ಐಸಿಸಿಗೆ ಕೂಡಾ ನಿರೀಕ್ಷಿಸಿದಷ್ಟು ದುಡ್ಡು ಸಿಗುತ್ತಿರಲಿಲ್ಲ. ಇದನ್ನು ಇಲ್ಲವಾಗಿಸಲು ಐಸಿಸಿ ಮಾಡಿದ ಯೋಜನೆಯೇ ‘ಚಾಂಪಿಯನ್ಸ್‌ ಟ್ರೋಫಿ’.

ಕ್ರಿಕೆಟ್ ಪ್ರಿಯ ದೇಶಗಳಲ್ಲಿ ಕ್ರೀಡೆಗೆ ಉತ್ತೇಜನ ಹಾಗೂ ಐಸಿಸಿಗೆ ಹಣ ಸಂಗ್ರಹಕ್ಕಾಗಿ 1998ರಲ್ಲಿ ಮೊದಲ ಬಾರಿ ಟೂರ್ನಿ ಪರಿಚಯಿಸಲಾಯಿತು. ಚೊಚ್ಚಲ ಆವೃತ್ತಿ ಟೂರ್ನಿ ಆಯೋಜನೆಗೊಂಡಿದ್ದು ಬಾಂಗ್ಲಾದೇಶದಲ್ಲಿ.

ಅಂದು ನಾಕೌಟ್‌ ಟ್ರೋಫಿ,

ಈಗ ಚಾಂಪಿಯನ್ಸ್‌ ಟ್ರೋಫಿ

ಈಗ ಚಾಂಪಿಯನ್ಸ್‌ ಟ್ರೋಫಿ ಎಂದು ಕರೆಸಿಕೊಳ್ಳುವ ಟೂರ್ನಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಶುರುವಾಗಿತ್ತು. 1998ರ ಟೂರ್ನಿಯ ಹೆಸರು ‘ಐಸಿಸಿ ನಾಕೌಟ್‌ ಟ್ರೋಫಿ’ ಎಂದಾಗಿತ್ತು. ಏಕದಿನ ವಿಶ್ವಕಪ್‌ನ ಖ್ಯಾತಿ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಕಿರು ಟೂರ್ನಿಯನ್ನಾಗಿ ನಾಕೌಟ್‌ ಟ್ರೋಫಿ ಆಯೋಜಿಸಲಾಗುತ್ತಿತ್ತು. ಆದರೆ 2002ರಲ್ಲಿ ಟೂರ್ನಿಗೆ ಚಾಂಪಿಯನ್ಸ್‌ ಟ್ರೋಫಿ ಎಂದು ಮರುನಾಮಕರಣ ಮಾಡಲಾಯಿತು. ಇದರೊಂದಿಗೆ ಟೂರ್ನಿ ‘ಮಿನಿ ವಿಶ್ವಕಪ್‌’ ಎಂದೂ ಕರೆಸಿಕೊಂಡಿತು.

ಟೂರ್ನಿಯ ಹುಟ್ಟಿನ ಹಿಂದೆ

ಭಾರತೀಯ ಜಗಮೋಹನ

ಚಾಂಪಿಯನ್ಸ್‌ ಟ್ರೋಫಿ ಎಂಬುದು 1990ರ ದಶಕದ ಅಂತ್ಯದಲ್ಲಿ ಐಸಿಸಿ ಅಧ್ಯಕ್ಷರಾಗಿದ್ದ, ಭಾರತದ ಖ್ಯಾತ ಉದ್ಯಮಿ ಜಗಮೋಹನ್ ದಾಲ್ಮಿಯಾ ಅವರ ಕನಸಿನ ಕೂಸು. ಉದಯೋನ್ಮುಖ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಬೆಳೆಸಲು ಹಾಗೂ ಐಸಿಸಿಗೆ ಹಣ ಸಂಗ್ರಹಿಸಲು ವಿಶ್ವಕಪ್‌ನ ಹೊರತಾಗಿ ಮತ್ತೊಂದು ಐಸಿಸಿ ಟೂರ್ನಿಗೆ ಯೋಜನೆ ರೂಪಿಸಿದ್ದೇ ದಾಲ್ಮಿಯಾ. ಅವರು 1997ರಿಂದ 2000ರ ವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲೇ 1998ರಲ್ಲಿ ಟೂರ್ನಿಗೆ ಚಾಲನೆ ಲಭಿಸಿತು.

1ನೇ ಆವೃತ್ತಿ ಟೂರ್ನಿಯಲ್ಲಿ

9 ತಂಡ, ಕೇವಲ 8 ಪಂದ್ಯ

ಮೊದಲ ಆವೃತ್ತಿಯ ನಾಕೌಟ್ ಟ್ರೋಫಿ ಹೆಸರೇ ಸೂಚಿಸುವಂತೆ ಕಿರು ಟೂರ್ನಿಯಾಗಿತ್ತು. ಭಾರತ ಸೇರಿ 9 ತಂಡಗಳು ಪಾಲ್ಗೊಂಡಿದ್ದವು. 1 ಪ್ರಿ ಕ್ವಾರ್ಟರ್‌, 4 ಕ್ವಾರ್ಟರ್ ಫೈನಲ್‌, 2 ಸೆಮಿಫೈನಲ್‌, 1 ಫೈನಲ್‌ ಸೇರಿ ಒಟ್ಟು 8 ಪಂದ್ಯಗಳು ಮಾತ್ರ ಟೂರ್ನಿಯಲ್ಲಿ ನಡೆದಿದ್ದವು.

ಟಿ20 ಅಬ್ಬರಕ್ಕೆ ಮೌಲ್ಯ

ಕಳೆದುಕೊಂಡಿದ್ದ ಟೂರ್ನಿ

1998, 2000ರ ಟೂರ್ನಿ ಐಸಿಸಿಗೆ ದುಡ್ಡು ಗಳಿಸಿಕೊಟ್ಟರೂ, ಪ್ರೇಕ್ಷಕರ ಕೊರತೆ ಎದುರಾಗಿತ್ತು. ಬಳಿಕ 2002ರ(ಶ್ರೀಲಂಕಾ ಆತಿಥ್ಯ) ಟೂರ್ನಿ 2003ರ ಏಕದಿನ ವಿಶ್ವಕಪ್‌ಗೆ 5 ತಿಂಗಳು ಮೊದಲು ಆಯೋಜನೆಗೊಂಡ ಕಾರಣ, ಆದಾಯದ ಕೊರತೆ ಜೊತೆ ಪ್ರೇಕ್ಷಕರೂ ಆಸಕ್ತಿ ಕಳೆದುಕೊಳ್ಳುವಂತಾಯಿತು. ಹೀಗಾಗಿ ಟೆಸ್ಟ್‌ ಆಡುವ ಪ್ರಮುಖ ದೇಶಗಳಲ್ಲಿ ಟೂರ್ನಿ ಆಯೋಜಿಸಬೇಕಾದ ಅನಿವಾರ್ಯತೆಗೆ ಐಸಿಸಿ ಸಿಲುಕಿತು. 2004ರ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿ ಆಡಿಸಲಾಯಿತು. 2006ರಲ್ಲಿ ಭಾರತದಲ್ಲಿ ಟೂರ್ನಿ ನಡೆದರೂ, ಚಾಂಪಿಯನ್ಸ್‌ ಟ್ರೋಫಿ ಬಗ್ಗೆ ಟೀಕೆಗಳು ವ್ಯಕ್ತವಾಗತೊಡಗಿದವು. ಈ ನಡುವೆ ಟಿ20 ಮಾದರಿ ಕ್ರಿಕೆಟ್‌ನ ಕ್ಷಿಪ್ರ ಬೆಳವಣಿಯೂ ಚಾಂಪಿಯನ್ಸ್‌ ಟ್ರೋಫಿಗೆ ಮತ್ತಷ್ಟು ಹೊಡೆತ ನೀಡಿತು. ಹೀಗಾಗಿ ಟಿ20 ವಿಶ್ವಕಪ್‌ ಆಯೋಜನೆ ಕೈಗೆತ್ತಿಗೊಂಡ ಐಸಿಸಿ, ಚಾಂಪಿಯನ್ಸ್‌ ಟ್ರೋಫಿಯನ್ನು ಕೈ ಬಿಟ್ಟಿತ್ತು.

ಈ ಹಿಂದೆ ಟೂರ್ನಿ ನಡೆದಿದ್ದೆಲ್ಲಿ? ಚಾಂಪಿಯನ್ ಆಗಿದ್ದು ಯಾರು?

1998: ಬಾಂಗ್ಲಾದೇಶ

ತಂಡಗಳು: 09 । ಪಂದ್ಯ: 08

ಚಾಂಪಿಯನ್‌: ದಕ್ಷಿಣ ಆಫ್ರಿಕಾ

ರನ್ನರ್‌-ಅಪ್‌: ವೆಸ್ಟ್‌ಇಂಡೀಸ್‌

2000: ಕೀನ್ಯಾ

ತಂಡಗಳು: 11 । ಪಂದ್ಯ: 10

ಚಾಂಪಿಯನ್‌: ನ್ಯೂಜಿಲೆಂಡ್‌

ರನ್ನರ್‌-ಅಪ್‌: ಭಾರತ

2002: ಶ್ರೀಲಂಕಾ

ತಂಡಗಳು: 12 । ಪಂದ್ಯ: 15

ಚಾಂಪಿಯನ್‌: ಭಾರತ-ಶ್ರೀಲಂಕಾ

ಫೈನಲ್‌ ಪಂದ್ಯ ಮಳೆಗೆ ರದ್ದು

2004: ಇಂಗ್ಲೆಂಡ್‌

ತಂಡಗಳು: 12 । ಪಂದ್ಯ: 15

ಚಾಂಪಿಯನ್‌: ವೆಸ್ಟ್‌ಇಂಡೀಸ್‌

ರನ್ನರ್‌-ಅಪ್‌: ಇಂಗ್ಲೆಂಡ್‌

2006: ಭಾರತ

ತಂಡಗಳು: 10 । ಪಂದ್ಯ: 21

ಚಾಂಪಿಯನ್‌: ಆಸ್ಟ್ರೇಲಿಯಾ

ರನ್ನರ್‌-ಅಪ್‌: ವೆಸ್ಟ್‌ಇಂಡೀಸ್‌

2009: ದಕ್ಷಿಣ ಆಫ್ರಿಕಾ

ತಂಡಗಳು: 08 । ಪಂದ್ಯ: 15

ಚಾಂಪಿಯನ್‌: ಆಸ್ಟ್ರೇಲಿಯಾ

ರನ್ನರ್‌-ಅಪ್‌: ನ್ಯೂಜಿಲೆಂಡ್‌

2013: ಇಂಗ್ಲೆಂಡ್‌

ತಂಡಗಳು: 08 । ಪಂದ್ಯ: 15

ಚಾಂಪಿಯನ್‌: ಭಾರತ

ರನ್ನರ್‌-ಅಪ್‌: ಇಂಗ್ಲೆಂಡ್‌

2017: ಇಂಗ್ಲೆಂಡ್‌

ತಂಡಗಳು: 08 । ಪಂದ್ಯ: 15

ಚಾಂಪಿಯನ್‌: ಪಾಕಿಸ್ತಾನ

ರನ್ನರ್‌-ಅಪ್‌: ಭಾರತ