12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಆಟಗಾರರ ಹರಾಜಿಗೂ ಮುನ್ನ 12 ಫ್ರಾಂಚೈಸಿಗಳು ಒಟ್ಟು 83 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ.

ರುಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಆಟಗಾರರ ಹರಾಜಿಗೂ ಮುನ್ನ 12 ಫ್ರಾಂಚೈಸಿಗಳು ಒಟ್ಟು 83 ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಶನಿವಾರ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಆಯೋಜಕರು ಪ್ರಕಟಗೊಳಿಸಿದರು. ಬೆಂಗಳೂರು ಬುಲ್ಸ್ ನಾಲ್ವರು ಯುವ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಗಮನ ಸೆಳೆದಿದ್ದ ರೈಡರ್‌ ಪಂಕಜ್‌ ಜೊತೆಗೆ, ಮನ್‌ಜೀತ್‌, ಲಕ್ಕಿ ಕುಮಾರ್‌ ಹಾಗೂ ಚಂದ್ರನಾಯ್ಕ್‌ರನ್ನು ಉಳಿಸಿಕೊಂಡಿದೆ. ಕಳೆದ ವರ್ಷ ತಂಡವನ್ನು ಮುನ್ನಡೆಸಿದ್ದ ಹಿರಿಯ ಆಟಗಾರ ಪ್ರದೀಪ್‌ ನರ್ವಾಲ್‌ರನ್ನು ಕೈಬಿಡಲಾಗಿದೆ.

ಇದೇ ವೇಳೆ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಪವನ್‌ ಶೆರಾವತ್‌ ಮತ್ತೊಮ್ಮೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಇನ್ನು ದಬಾಂಗ್‌ ಡೆಲ್ಲಿಯ ನಾಯಕರಾಗಿದ್ದ ನವೀನ್‌ ಕುಮಾರ್ ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ . ನವೀನ್‌, ಪ್ರೊ ಕಬಡ್ಡಿಯಲ್ಲಿ 1000ಕ್ಕೂ ಹೆಚ್ಚು ರೈಡ್‌ ಅಂಕ ಗಳಿಸಿದ್ದಾರೆ.

ಆಟಗಾರರ ಹರಾಜು ಪ್ರಕ್ರಿಯೆ ಮೇ 31 ಹಾಗೂ ಜೂ.1ರಂದು ಮುಂಬೈನಲ್ಲಿ ನಡೆಯಲಿದೆ. ಪ್ರತಿ ತಂಡ ಆಟಗಾರರ ಖರೀದಿಗೆ ಒಟ್ಟು 5 ಕೋಟಿ ರು. ಖರ್ಚು ಮಾಡಬಹುದಾಗಿದೆ. ಈಗಾಗಲೇ ರೀಟೈನ್‌ ಮಾಡಿಕೊಂಡಿರುವ ಆಟಗಾರರಿಗೆ ನೀಡುವ ವೇತನವನ್ನು ಕಳೆದು ಉಳಿದ ಹಣವನ್ನು ಹರಾಜಿನಲ್ಲಿ ಬಳಸಬಹುದು.

ವಿಶ್ವ ಅಥ್ಲೆಟಿಕ್ಸ್‌ ಕೂಟಕ್ಕೆ ಪಾರುಲ್‌ಗೆ ಅರ್ಹತೆ

ದೋಹಾ: ಭಾರತದ ತಾರಾ ಅಥ್ಲೀಟ್‌ ಪಾರುಲ್‌ ಚೌಧರಿ ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ 3000 ಮೀ. ಸ್ಟೀಪಲ್‌ ಚೇಸ್‌ ಓಟವನ್ನು 9 ನಿಮಿಷ 13.39 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ರಾಷ್ಟ್ರೀಯ ದಾಖಲೆ ಬರೆದರು. ಓಟವನ್ನು 6ನೇ ಸ್ಥಾನದಲ್ಲಿ ಮುಗಿಸಿದ ಪಾರುಲ್‌, ಈ ವರ್ಷ ಸೆಪ್ಟೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು. ಪಾರುಲ್‌ 2 ವರ್ಷ ಹಿಂದೆ ಹಂಗೇರಿಯ ಬುಡಾಪೆಸ್ಟ್‌ನಲ್ಲಿ 9 ನಿಮಿಷ 15.31 ಸೆಕೆಂಡ್‌ಗಳ ಓಟ ಪೂರ್ತಿಗೊಳಿಸಿ ಬರೆದಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಟಿಟಿ ವಿಶ್ವ ಕೂಟ: 1ನೇ ಸುತ್ತಲ್ಲೇ ಶ್ರೀಜಾ ಔಟ್‌

ದೋಹಾ: ಇಲ್ಲಿ ಶನಿವಾರ ಆರಂಭಗೊಂಡ ಟೇಬಲ್‌ ಟೆನಿಸ್‌ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ನಂ.1 ಆಟಗಾರ್ತಿ ಶ್ರೀಜಾ ಅಕುಲಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ವಿಶ್ವ ನಂ.84, ಥಾಯ್ಲೆಂಡ್‌ನ ಸುಥಾಸಿನಿ ವಿರುದ್ಧ 1-4 (11-9, 8-11, 6-11, 5-11, 2-11)ರಲ್ಲಿ ಸೋಲುಂಡರು. ಆದರೆ ಡಬಲ್ಸ್‌ನಲ್ಲಿ ಭಾರತಕ್ಕೆ ಯಶಸ್ಸು ದೊರೆಯಿತು. ಮಹಿಳಾ ಡಬಲ್ಸ್‌ನಲ್ಲಿ ಐಹಿಕಾ ಹಾಗೂ ಸುತೀರ್ಥ ಮುಖರ್ಜಿ, ದಿವ್ಯಾ ಛಿತ್ತಾಲೆ ಹಾಗೂ ಯಶಸ್ವಿನಿ ಗೋಡ್ಪಡೆ, ಪುರುಷರ ಡಬಲ್ಸ್‌ನಲ್ಲಿ ಮಾನವ್‌ ಥಾಕ್ಕರ್‌ ಹಾಗೂ ಮನುಷ್‌ ಶಾ 2ನೇ ಸುತ್ತಿಗೇರಿದರು.

ಸ್ಯಾಫ್‌: ಭಾರತ-ಬಾಂಗ್ಲಾ ಫೈನಲ್‌ ಪಂದ್ಯ ಇಂದು

ಯೂಪಿಯಾ(ಅರುಣಾಚಲ ಪ್ರದೇಶ): ದಕ್ಷಿಣ ಏಷ್ಯಾ ಫುಟ್ಬಾಲ್‌ ಫೆಡರೇಶನ್‌(ಸ್ಯಾಫ್‌) ಅಂಡರ್‌-19 ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ಸೆಣಸಲಿವೆ. ಗುಂಪು ಹಂತದಲ್ಲಿ ಶ್ರೀಲಂಕಾವನ್ನು 8-0, ನೇಪಾಳವನ್ನು 4-0 ಅಂತರದಲ್ಲಿ ಸೋಲಿಸಿದ್ದ ಭಾರತ, ಸೆಮೀಸ್‌ನಲ್ಲಿ ಮಾಲ್ಡೀವ್ಸ್‌ ವಿರುದ್ಧ 3-0 ಅಂತರದಲ್ಲಿ ಜಯಿಸಿತ್ತು. ಟೂರ್ನಿಯಲ್ಲಿ ಬಾಂಗ್ಲಾ ಸಹ ಅಜೇಯವಾಗಿ ಉಳಿದಿದ್ದು, ಮಾಲ್ಡೀವ್ಸ್‌ ವಿರುದ್ಧ 2-2 ಡ್ರಾ, ಭೂತಾನ್‌ ವಿರುದ್ಧ 3-0, ಸೆಮೀಸ್‌ನಲ್ಲಿ ನೇಪಾಳ ವಿರುದ್ಧ 2-1ರಲ್ಲಿ ಗೆದ್ದು ಫೈನಲ್‌ಗೇರಿತ್ತು.

ವಿಂಡೀಸ್‌ ಟೆಸ್ಟ್‌ ತಂಡಕ್ಕೆ ರೋಸ್ಟನ್‌ ಚೇಸ್‌ ನಾಯಕ

ಟ್ರಿನಿಡಾಡ್‌: ವೆಸ್ಟ್‌ಇಂಡೀಸ್‌ ಟೆಸ್ಟ್‌ ತಂಡದ ನೂತನ ನಾಯಕರಾಗಿ ರೋಸ್ಟನ್‌ ಚೇಸ್‌ ನೇಮಕಗೊಂಡಿದ್ದಾರೆ. ಚೇಸ್‌ ಟೆಸ್ಟ್‌ ಪಂದ್ಯವನ್ನಾಡಿ ಸುಮಾರು 2 ವರ್ಷವಾಗಿದೆ. ಅವರು ಈವರೆಗೂ 49 ಟೆಸ್ಟ್‌ಗಳನ್ನು ಆಡಿದ್ದಾರೆ. ಈ ಮೊದಲು ಚೇಸ್‌ ವಿಂಡೀಸ್‌ ತಂಡವನ್ನು ತಲಾ 1 ಏಕದಿನ, ಟಿ20 ಪಂದ್ಯದಲ್ಲಿ ಮುನ್ನಡೆಸಿದ್ದಾರೆ. ಜೂ.25ರಿಂದ ತವರಿನಲ್ಲಿ ಆಸ್ಟ್ರೆಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಚೇಸ್‌ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಸರಣಿ ಆಗಲಿದೆ. ಈ ವರ್ಷ ಮಾರ್ಚ್‌ನಲ್ಲಿ ಕ್ರೇಗ್‌ ಬ್ರಾಥ್‌ವೇಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರು 39 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ವಿಂಡೀಸ್‌ 10 ಜಯ, 22 ಸೋಲು, 7 ಡ್ರಾಗಳನ್ನು ಕಂಡಿತ್ತು.