ಸಾರಾಂಶ
ನವದೆಹಲಿ: ಭಾರತೀಯ ಫುಟ್ಬಾಲ್‌ನ ಬಿಕ್ಕಟ್ಟು ಸರಿಯಾಗದಿದ್ದರೆ ತಮ್ಮ ತಂಡಗಳನ್ನೇ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎಂದು ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನ 11 ತಂಡಗಳು ಭಾರತೀಯ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್)ಕ್ಕೆ ಪತ್ರ ಬರೆದು ಎಚ್ಚರಿಸಿವೆ.
ಬೆಂಗಳೂರು ಎಫ್‌ಸಿ ಸೇರಿ 11 ಐಎಸ್‌ಎಲ್ ತಂಡಗಳು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ ಪತ್ರ ಬರೆದಿವೆ. ‘ಈಗಿನ ಬಿಕ್ಕಟ್ಟಿನಿಂದ ಎಲ್ಲವೂ ಕುಸಿತದ ಆತಂಕದಲ್ಲಿವೆ. ತಂಡಗಳು ಮುಚ್ಚಿಹೋಗುವ ಭೀತಿಯಲ್ಲಿವೆ. ಈಗಾಗಲೇ ಸರಿಯಾದ ವೇತನ ಪಾವತಿಯಾಗದೆ ತಂಡಗಳು ಒದ್ದಾಡುತ್ತಿದ್ದು, ಇದರಿಂದಾಗಿ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ. 2000ಕ್ಕೂ ಹೆಚ್ಚಿನ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ.
ಹೀಗಾಗಿ ಅಧ್ಯಕ್ಷರು ಕೂಡಲೇ ಇದಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿವೆ. ಆದರೆ ಈ ಪತ್ರಕ್ಕೆ ಕೋಲ್ಕತಾದ ಮೋಹನ್ ಬಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಸಹಿ ಹಾಕಿಲ್ಲ.ಮತ್ತೊಂದೆಡೆ ಈ ಬಿಕ್ಕಟ್ಟು ಭಾರತದ ಫುಟ್ಬಾಲ್ ತಂಡದ ಮೇಲೆಯೂ ದುಷ್ಪರಿಣಾಮ ಬೀರಲಿದೆ ಎಂದು ಕ್ಲಬ್‌ಗಳು ಎಚ್ಚರಿಸಿವೆ. ‘ಐಎಸ್‌ಎಲ್ ನಡೆಯದಿದ್ದರೆ ನಮಗೆ ಕನಿಷ್ಠ ಪಂದ್ಯಗಳನ್ನು ಆಡುವ ಅವಕಾಶ ಸಿಗುವುದಿಲ್ಲ. ಇದರಿಂದ ಎಎಫ್‌ಸಿ ಟೂರ್ನಿಗಳಲ್ಲಿ ಭಾರತದ ಕ್ಲಬ್‌ಗಳು ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಎಎಫ್‌ಸಿ, ಫಿಫಾ ಟೂರ್ನಗಳಿಂದಲೇ ಭಾರತ ಅನರ್ಹಗೊಳ್ಳುವ ಸಾಧ್ಯತೆಯಿದೆ’ ಎಂದಿವೆ.