ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಬುಧವಾರ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ನೀಡಿದ್ದಾರೆ.

 ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಬುಧವಾರ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಯ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ನೀಡಿದ್ದಾರೆ. ಕಾರ್ಯದರ್ಶಿ ಹುದ್ದೆಯನ್ನು ಎ. ಶಂಕರ್, ಖಜಾಂಚಿ ಹುದ್ದೆಯನ್ನು ಇ.ಎಸ್.ಜಯರಾಂ ತೊರೆದಿದ್ದು, ‘ಕಾಲ್ತುಳಿತ ಘಟನೆಯಲ್ಲಿ ನಮ್ಮ ಪಾತ್ರ ಇಲ್ಲದಿದ್ದರೂ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಕೆಎಸ್‌ಸಿಎ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶನಿವಾರ ಸಂಜೆ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆಯಿತು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭಟ್‌, ‘ಶಂಕರ್‌ ಹಾಗೂ ಜಯರಾಂರ ರಾಜೀನಾಮೆ ಅಂಗೀಕರಿಸಲಾಗಿದೆ. ಅವರಿಬ್ಬರಿಂದ ತೆರವಾಗಿರುವ ಸ್ಥಾನಗಳಿಗೆ ಇನ್ನೂ ಯಾರನ್ನೂ ನೇಮಿಸಿಲ್ಲ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಈಗ ಏನನ್ನೂ ಮಾತನಾಡುವುದಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದರು.

ಮೂಲಗಳ ಪ್ರಕಾರ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್‌.ವಿನಯ, ಕೆ.ವಿ. ಮಂಜುನಾಥ್‌ ರಾಜು ಅವರನ್ನು ತೆರವಾಗಿರುವ ಹುದ್ದೆಗಳಿಗೆ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.