ಸಾರಾಂಶ
ಕೋಲ್ಕತಾ: ಐಪಿಎಲ್‌ನಲ್ಲಿ ತನ್ನ 2ನೇ ಗರಿಷ್ಠ ಮೊತ್ತ ದಾಖಲಿಸಿದ ಲಖನೌ ಸೂಪರ್ ಜೈಂಟ್ಸ್, ಪವರ್-ಪ್ಲೇನಲ್ಲಿ ಕೋಲ್ಕತಾ ರೈಡರ್ಸ್‌ರಿಂದ 90 ರನ್ ಚಚ್ಚಿಸಿಕೊಂಡ ಹೊರತಾಗಿಯೂ 4 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
23 ರನ್‌ಗೆ 5 ವಿಕೆಟ್ ಕಳೆದುಕೊಂಡ ಕೆಕೆಆರ್, ತನ್ನ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ಸೋಲುಂಡು ನಿರಾಸೆಗೊಳಗಾಯಿತು.
ಮೊದಲು ಬ್ಯಾಟ್ ಮಾಡಿದ ಲಖನೌ ತನ್ನ ಮೂವರು ವಿದೇಶಿ ತಾರಾ ಬ್ಯಾಟರ್‌ಗಳ ಆರ್ಭಟದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 238 ರನ್ ಪೇರಿಸಿತು. ಕೆಕೆಆರ್‌ನ ಅಗ್ರ ಕ್ರಮಾಂಕ ಸ್ಫೋಟಕ ಆಟವಾಡಿ, ಕೊನೆಯಲ್ಲಿ ರಿಂಕು ಸಿಂಗ್ ಹೋರಾಟ ನಡೆಸಿದರೂ ತಂಡ 20 ಓವರಲ್ಲಿ 7 ವಿಕೆಟ್ ಕಳೆದುಕೊಂಡು ಗಳಿಸಿದ್ದು 234 ರನ್.
ಲಖನೌಗೆ ಏಡನ್ ಮಾರ್ಕ್‌ರಮ್ ಹಾಗೂ ಮಿಚೆಲ್ ಮಾರ್ಷ್ ಅಮೋಘ ಆರಂಭ ಒದಗಿಸಿದರು. 28 ಎಸೆತದಲ್ಲಿ 47 ರನ್ ಚಚ್ಚಿದ ಮಾರ್ಕ್‌ರಮ್ ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟದಲ್ಲಿ ಭಾಗಿಯಾದರು. ಮಾರ್ಷ್ 48 ಎಸೆತದಲ್ಲಿ 81 ರನ್ ಸಿಡಿಸಿದರೆ, ನಿಕೋಲಸ್ ಪೂರನ್ 36 ಎಸೆತದಲ್ಲಿ 7 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೆ 87 ರನ್ ಪೇರಿಸಿದರು.
ಕೆಕೆಆರ್ ಸಹ ಉತ್ತಮ ಆರಂಭ ಪಡೆಯಿತು. ಡಿ ಕಾಕ್ 15, ನರೈನ್ 30 ರನ್ ಚಚ್ಚಿದರು. ಅಜಿಂಕ್ಯ ರಹಾನೆ 35 ಎಸೆತದಲ್ಲಿ 61 ರನ್ ಸಿಡಿಸಿದರೆ, ವೆಂಕಟೇಶ್ ಅಯ್ಯರ್ 29 ಎಸೆತದಲ್ಲಿ 45 ರನ್ ಗಳಿಸಿ ತಂಡದ ಜಯದ ಆಸೆಯನ್ನು ಜೀವಂತವಾಗಿರಿಸಿದರು. ಆದರೆ, 13ನೇ ಓವರ್‌ನ ಕೊನೆಯ ಎಸೆತದಲ್ಲಿ ರಹಾನೆ ವಿಕೆಟ್ ಪತನಗೊಂಡಿತು. ಆ ಬಳಿಕ ಕೆಕೆಆರ್ 23 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು.
ಆ್ಯಂಡ್ರೆ ರಸೆಲ್‌ರನ್ನು ಕ್ರೀಸ್‌ಗಿಳಿಸಲು ತಡ ಮಾಡಿದ್ದು ಕೆಕೆಆರ್‌ಗೆ ಮುಳುವಾಯಿತು. ಕೊನೆಯಲ್ಲಿ ಹರ್ಷಿತ್ ರಾಣಾ 10 ರನ್ ಗಳಿಸಲು 9 ಎಸೆತ ವ್ಯರ್ಥ ಮಾಡಿದ್ದು ಸಹ ಸೋಲಿಗೆ ಕಾರಣವಾಯಿತು. ರಿಂಕು 15 ಎಸೆತದಲ್ಲಿ ಔಟಾಗದೆ 38 ರನ್ ಸಿಡಿಸಿದರೂ ಕೆಕೆಆರ್ ಗೆಲ್ಲಲಿಲ್ಲ. ಸ್ಕೋರ್: ಲಖನೌ 20 ಓವರಲ್ಲಿ 238/3 (ಪೂರನ್ 87, ಮಾರ್ಷ್ 81, ಹರ್ಷಿತ್ 2-51), ಕೆಕೆಆರ್ 20 ಓವರಲ್ಲಿ 234/7 (ರಹಾನೆ 61, ವೆಂಕಿ 45, ಶಾರ್ದೂಲ್ 2-52) ಪಂದ್ಯಶ್ರೇಷ್ಠ: ಪೂರನ್ 11 ಎಸೆತ
ಶಾರ್ದೂಲ್ ಸತತ 5 ವೈಡ್ ಎಸೆದು ಒಂದು ಓವರಲ್ಲಿ ಒಟ್ಟು 11 ಎಸೆತ ಬೌಲ್ ಮಾಡಿದರು.