ಸಾರಾಂಶ
ಲಖನೌ: 3ನೇ ಆವೃತ್ತಿಯ ಡಬ್ಲ್ಯುಪಿಎಲ್ ನಿರ್ಣಾಯಕ ಹಂತ ತಲುಪುತ್ತಿದ್ದು, ಗುಜರಾತ್ ಜೈಂಟ್ಸ್ ಭರ್ಜರಿ ಗೆಲುವಿನೊಂದಿಗೆ ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸೋಮವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಯು.ಪಿ.ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ 81 ರನ್‌ಗಳ ಅಮೋಘ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಯು.ಪಿ. ಕೊನೆಯ ಸ್ಥಾನಕ್ಕೆ ಜಾರಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಬೆಥ್ ಮೂನಿ ಅವರ ಅದ್ಭುತ ಇನ್ನಿಂಗ್ಸ್‌ನ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 186 ರನ್ ಗಳಿಸಿತು. ಮೂನಿ 59 ಎಸೆತದಲ್ಲಿ 17 ಬೌಂಡರಿಗಳೊಂದಿಗೆ 96 ರನ್ ಗಳಿಸಿ ಔಟಾಗದೆ ಉಳಿದರು. ಕೇವಲ 4 ರನ್‌ಗಳಿಂದ ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಚೊಚ್ಚಲ ಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು. ಹರ್ಲೀನ್ ದೇವಲ್ 45 ರನ್ ಕೊಡುಗೆ ನೀಡಿದರು.
ದೊಡ್ಡ ಗುರಿ ಬೆನ್ನತ್ತಿದ ಯು.ಪಿ. ಮೊದಲ ಓವರಲ್ಲೇ 2 ವಿಕೆಟ್ ಕಳೆದುಕೊಂಡಿತು. ಆನಂತರ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. 48 ರನ್‌ಗೆ 6 ವಿಕೆಟ್ ಕಳೆದುಕೊಂಡ ಯು.ಪಿ. ಹೀನಾಯ ಸೋಲಿನತ್ತ ಮುಖ ಮಾಡಿತು. ಶಿನೆಲ್ಲ್ ಹೆನ್ರಿ 28 ರನ್ ಗಳಿಸಿ ಸೋಲಿನ ಅಂತರವನ್ನು ತಗ್ಗಿಸುವ ಪ್ರಯತ್ನ ನಡೆಸಿದರು. ಆದರೂ 17.1 ಓವರಲ್ಲಿ ಯು.ಪಿ. ವಾರಿಯರ್ಸ್ 105 ರನ್‌ಗೆ ಆಲೌಟ್ ಆಯಿತು. ಕಾಶ್ವೀ ಗೌತಮ್ ಹಾಗೂ ತನುಜಾ ಕನ್ವರ್ ತಲಾ 3 ವಿಕೆಟ್ ಕಿತ್ತರು. ಸ್ಕೋರ್: ಗುಜರಾತ್ 20 ಓವರಲ್ಲಿ 186/5 (ಮೂನಿ 96*, ಹರ್ಲೀನ್ 45, ಸೋಫಿ 2-34), ಯು.ಪಿ. 17.1 ಓವರಲ್ಲಿ 105/10 (ಹೆನ್ರಿ 28, ಹ್ಯಾರಿಸ್ 25, ಕಾಶ್ವೀ 3-11)