ಭಾರತದ ತಾರಾ ಆಟಗಾರ ರಿಷಭ್‌ ಪಂತ್‌, ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 7ನೇ ಸ್ಥಾನಕ್ಕೇರಿದ್ದಾರೆ.

ದುಬೈ: ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಭಾರತದ ತಾರಾ ಆಟಗಾರ ರಿಷಭ್‌ ಪಂತ್‌, ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 7ನೇ ಸ್ಥಾನಕ್ಕೇರಿದ್ದಾರೆ.ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ನಲ್ಲಿ 27 ವರ್ಷದ ರಿಷಭ್‌ 801 ರೇಟಿಂಗ್‌ ಅಂಕ ಹೊಂದಿದ್ದು, 1 ಸ್ಥಾನ ಮೇಲಕ್ಕೇರಿದರು. 

ಈ ಮೂಲಕ 800 ರೇಟಿಂಗ್‌ ಅಂಕ ಪಡೆದ ಭಾರತದ ಮೊದಲ ವಿಕೆಟ್‌ ಕೀಪರ್‌ ಎಂಬ ಖ್ಯಾತಿಗೆ ಪಾತ್ರರಾದರು. ಉಳಿದಂತೆ ಯಶಸ್ವಿ ಜೈಸ್ವಾಲ್‌ 4ನೇ ಸ್ಥಾನದಲ್ಲೇ ಇದ್ದು, ನಾಯಕ ಶುಭ್‌ಮನ್‌ ಗಿಲ್‌ 5 ಸ್ಥಾನ ಮೇಲೇರಿ 20ನೇ ಸ್ಥಾನ ತಲುಪಿದ್ದಾರೆ.

 ಕರ್ನಾಟಕದ ಕೆ.ಎಲ್‌.ರಾಹುಲ್‌ 10 ಸ್ಥಾನ ಪ್ರಗತಿ ಸಾಧಿಸಿ 38ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌ ಹಾಗೂ ಹ್ಯಾರಿ ಬ್ರೂಕ್‌ ಕ್ರಮವಾಗಿ ನಂಬರ್ 1 ಹಾಗೂ 2 ಸ್ಥಾನಗಳಲ್ಲೇ ಮುಂದುವರಿದಿದ್ದಾರೆ. ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ 3ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.