ಸಾರಾಂಶ
ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ
ಮುಂಬೈ: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಅನುಭವಿ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಕನ್ನಡಿಗ ಕೆ.ಎಲ್.ರಾಹುಲ್ರನ್ನು ಹಿಂದಿಕ್ಕಿ ಯುವ ಸೂಪರ್ಸ್ಟಾರ್, ತಾರಾ ಬ್ಯಾಟರ್ ಶುಭ್ಮನ್ ಗಿಲ್ರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿದೆ.
ಜೂ.20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ ಶನಿವಾರ ಆಯ್ಕೆ ಸಮಿತಿಯು ಸುದ್ದಿಗೋಷ್ಠಿ ನಡೆಸಿ 18 ಆಟಗಾರರ ಭಾರತ ತಂಡ ಪ್ರಕಟಿಸಿತು. 25 ವರ್ಷದ ಶುಭ್ಮನ್ ಗಿಲ್ ನಿರೀಕ್ಷೆಯಂತೆಯೇ ತಂಡದ ನಾಯಕತ್ವ ವಹಿಸಲಿದ್ದು, ಮತ್ತೋರ್ವ ಯುವ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಈ ವರೆಗೂ 32 ಟೆಸ್ಟ್ ಆಡಿದ್ದು, 5 ಶತಕ ಸೇದಿಂತೆ 1893 ರನ್ ಗಳಿಸಿದ್ದಾರೆ. 27 ವರ್ಷದ ರಿಷಭ್ 43 ಟೆಸ್ಟ್ಗಳಲ್ಲಿ 6 ಶತಕಗಳನ್ನೊಳಗೊಂಡ 2948 ರನ್ ಕಲೆಹಾಕಿದ್ದಾರೆ.
ಶಮಿ ಔಟ್: ಸರಣಿಗೆ ಆಯ್ಕೆಯಾದ ತಂಡದಲ್ಲಿ ವೇಗಿ ಮೊಹಮ್ಮದ್ ಶಮಿಗೆ ಸ್ಥಾನ ಲಭಿಸಿಲ್ಲ. ತಂಡದ ಪ್ರಮುಖ ಬೌಲರ್ ಆಗಿದ್ದರೂ, ಗಾಯದ ಸಮಸ್ಯೆಯಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರನ್ನು ಹೊರಗಿಡಲಾಗಿದೆ. ‘ಶಮಿ ಸಂಪೂರ್ಣ ಫಿಟ್ ಆಗಿಲ್ಲ. ಅವರು ಇತ್ತೀಚೆಗಷ್ಟೇ ಎಂಆರ್ಐ ಸ್ಕ್ಯಾನ್ಗೆ ಒಳಗಾಗಿದ್ದಾರೆ. ವೈದ್ಯಕೀಯ ತಂಡದ ವರದಿ ಪ್ರಕಾರ ಅವರು ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಸಮಯಬೇಕು. ಹೀಗಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉಳಿದಂತೆ ಆಸ್ಟ್ರೇಲಿಯಾ ಸರಣಿಯಲ್ಲಿದ್ದ ಹರ್ಷಿತ್ ರಾಣಾ, ಸರ್ಫರಾಜ್ ಖಾನ್ ತಂಡದಿಂದ ಹೊರಬಿದ್ದಿದ್ದಾರೆ. ಅಭಿಮನ್ಯು ಈಶ್ವರನ್, ಶಾರ್ದೂಲ್ ಠಾಕೂರ್ ತಂಡಕ್ಕೆ ಮರಳಿದ್ದಾರೆ. ಕರುಣ್ ನಾಯರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ತಂಡ: ಶುಭ್ಮನ್ ಗಿಲ್(ನಾಯಕ), ರಿಷಭ್(ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸುದರ್ಶನ್, ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ದೀಪ್, ಅರ್ಶ್ದೀಪ್ ಸಿಂಗ್, ಕುಲ್ದೀಪ್.
3-4 ಟೆಸ್ಟ್ನಲ್ಲಿ ಮಾತ್ರ ಆಡಲಿದ್ದಾರೆ ಬೂಮ್ರಾ
ಫಿಟ್ನೆಸ್ ಕಾರಣಕ್ಕೆ ಬೂಮ್ರಾ ಸರಣಿಯ ಎಲ್ಲಾ 5 ಪಂದ್ಯಗಳಲ್ಲೂ ಆಡುವು ಸಾಧ್ಯತೆಯಿಲ್ಲ ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಬೂಮ್ರಾ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಅವರನ್ನು 3-4 ಪಂದ್ಯಗಳಲ್ಲಿ ಮಾತ್ರ ಆಡಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಗಿಲ್ ಭಾರತ ತಂಡದ 37ನೇ ಟೆಸ್ಟ್ ನಾಯಕ:
ಐದನೇ ಅತಿ ಕಿರಿಯ!
ಗಿಲ್ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿರುವ 37ನೇ ಆಟಗಾರ. 1932ರಲ್ಲಿ ಭಾರತ ತನ್ನ ಮೊದಲ ಟೆಸ್ಟ್ ಆಡಿದಾಗ ತಂಡಕ್ಕೆ ಸಿ.ಕೆ.ನಾಯ್ಡು ಅವರು ನಾಯಕತ್ವ ವಹಿಸಿದ್ದರು. ಆ ಬಳಿಕ ಧೋನಿ, ಕೊಹ್ಲಿ, ರೋಹಿತ್ ಸೇರಿದಂತೆ 35 ಆಟಗಾರರು ತಂಡವನ್ನು ಮುನ್ನಡೆಸಿದ್ದಾರೆ. ಇನ್ನು, ಗಿಲ್ ಭಾರತ ಟೆಸ್ಟ್ನ ನಾಯಕತ್ವ ವಹಿಸಲಿರುವ 5ನೇ ಅತಿ ಕಿರಿಯ ಆಟಗಾರ. ಮನ್ಸೂರ್ ಅಲಿ ಖಾನ್ ಪಟೌಡಿ 21ನೇ ವರ್ಷ, ಸಚಿನ್ ತೆಂಡುಲ್ಕರ್ 23, ಕಪಿಲ್ ದೇವ್ 24, ರವಿ ಶಾಸ್ತ್ರಿ 25ನೇ ವರ್ಷದಲ್ಲಿ ಭಾರತದ ನಾಯಕರಾಗಿ ಆಯ್ಕೆಯಾಗಿದ್ದರು.
ಆಸೀಸ್ ಸರಣಿಯಲ್ಲಿದ್ದ 5 ಆಟಗಾರರು ಹೊರಕ್ಕೆ
ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಆಡಿದ್ದ ಐವರು ಆಟಗಾರರು ಈ ಬಾರಿ ಸರಣಿಯಲ್ಲಿಲ್ಲ. ಬದಲಾಗಿ ಹೊಸ 5 ಆಟಗಾರರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕೊಹ್ಲಿ, ರೋಹಿತ್, ಆರ್.ಅಶ್ವಿನ್, ಹರ್ಷಿತ್ ರಾಣಾ, ಸರ್ಫರಾಜ್ ಆಸೀಸ್ ಸರಣಿಯಲ್ಲಿದ್ದರು. ಈ ಪೈಕಿ ಮೂವರು ನಿವೃತ್ತಿಯಾಗಿದ್ದರೆ, ಹರ್ಷಿತ್, ಸರ್ಫರಾಜ್ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಬದಲಾಗಿ ಕರುಣ್, ಸುದರ್ಶನ್, ಕುಲ್ದೀಪ್, ಶಾರ್ದೂಲ್, ಅರ್ಶ್ದೀಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅವಕಾಶಕ್ಕೆ ಅಂಗಲಾಚಿದ್ದ ಕರುಣ್ ಬರೋಬ್ಬರಿ ಎಂಟು ವರ್ಷದ ಬಳಿಕ ಕಮ್ಬ್ಯಾಕ್!
ಸದ್ಯ ದೇಸಿ ಕ್ರಿಕೆಟ್ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಆಟಗಾರ ಕರುಣ್ ನಾಯರ್ ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೀಂ ಇಂಡಿಯಾ ಪರ 6 ಟೆಸ್ಟ್ ಆಡಿರುವ ಕರುಣ್, 2017ರಲ್ಲಿ ಕೊನೆ ಬಾರಿ ತಂಡ ಪ್ರತಿನಿಧಿಸಿದ್ದರು. ಬಳಿಕ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. 2022ರಲ್ಲಿ ಕರುಣ್ ‘ಡಿಯರ್ ಕ್ರಿಕೆಟ್...ನನಗೆ ಮತ್ತೊಂದು ಅವಕಾಶ ಕೊಡು’ ಎಂದು ಟ್ವೀಟ್ ಮಾಡಿದ್ದರು. ಅದು ವೈರಲ್ ಆಗಿತ್ತು. 33 ವರ್ಷದ ಕರುಣ್ 2024-25ರ ರಣಜಿ ಟೂರ್ನಿಯ 9 ಪಂದ್ಯಗಳಲ್ಲಿ 4 ಶತಕ ಸೇರಿ 863, ವಿಜಯ್ ಹಜಾರೆಯಲ್ಲಿ 8 ಪಂದ್ಯಗಳಲ್ಲಿ 5 ಶತಕ ಒಳಗೊಂಡ 779 ರನ್ ಕಲೆಹಾಕಿದ್ದರು. ಇದು ಅವರಿಗೆ ಭಾರತ ತಂಡದ ಬಾಗಿಲು ಮತ್ತೆ ತೆರೆಯುವಂತೆ ಮಾಡಿದೆ.
ರಾಜ್ಯದ ಮೂವರಿಗೆ ತಂಡದಲ್ಲಿ ಅವಕಾಶ
ಭಾರತ ಟೆಸ್ಟ್ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಿದ್ದಾರೆ. ತಾರಾ ಬ್ಯಾಟರ್ ಕೆ.ಎಲ್.ರಾಹುಲ್, ಕರುಣ್ ನಾಯರ್, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸಾಯಿ ಸುದರ್ಶನ್, ಅರ್ಶ್ದೀಪ್ ಮೊದಲ ಬಾರಿ ಟೆಸ್ಟ್ ತಂಡಕ್ಕೆ
ಎಡಗೈ ಬ್ಯಾಟರ್ ಸಾಯಿ ಸುದರ್ಶನ್, ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ. ಸುದರ್ಶನ್ ಈ ಬಾರಿ ಐಪಿಎಲ್ನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ನಾಯಕನಾಗಿ ಗಿಲ್ ಆಯ್ಕೆ ಏಕೆ?
1. ಬೂಮ್ರಾ ಅನುಭವಿ ಹಾಗೂ ತಂಡದ ಹಿರಿಯ ಆಟಗಾರ. ನಾಯಕತ್ವದ ರೇಸ್ನಲ್ಲೂ ಇದ್ದರು. ಆದರೆ ಫಿಟ್ನೆಸ್ ಸಮಸ್ಯೆಯಿದೆ. ಹೀಗಾಗಿ ಅವರನ್ನು ಪರಿಗಣಿಸಲಾಗಲಿಲ್ಲ.
2. ಕೆ.ಎಲ್.ರಾಹುಲ್ ಕೂಡಾ ರೇಸ್ನಲ್ಲಿದ್ದರು. ನಾಯಕತ್ವದ ಅನುಭವವೂ ಇದೆ. ಆದರೆ ಅವರಿಗೆ ಈಗ 33 ವರ್ಷ. ದೀರ್ಘಕಾಲ ಆಡುವ ಸಾಧ್ಯತೆಯಿಲ್ಲ.
3. ಗಿಲ್ಗೆ ಈಗ 25 ವರ್ಷ. ಸ್ಥಿರ ಆಟದಿಂದಾಗಿ ತಂಡದಲ್ಲಿ ನಿರಂತರವಾಗಿ ಅವಕಾಶ ಪಡೆಯುತ್ತಿದ್ದಾರೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಗಿಲ್ಗೆ ನಾಯಕತ್ವ.