ಇಂದು ಭಾರತ vs ಕೆನಡಾ ಫೈಟ್‌: ಪಂದ್ಯವೇ ಮಳೆಗಾಹುತಿಯಾಗುವ ಭೀತಿ

| Published : Jun 15 2024, 01:07 AM IST / Updated: Jun 15 2024, 05:04 AM IST

ಸಾರಾಂಶ

ಇಂದು ಗುಂಪು ಹಂತದಲ್ಲಿ ಕೊನೆ ಪಂದ್ಯವಾಡಲಿರುವ ಟೀಂ ಇಂಡಿಯಾ. ಫ್ಲೋರಿಡಾದಲ್ಲಿ ಪ್ರವಾಹ ಪರಿಸ್ಥಿತಿ, ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ. ಫಾರ್ಮ್‌ಗೆ ಮರಳಲು ಕಾಯುತ್ತಿರುವ ಕೊಹ್ಲಿ. ಸೂಪರ್‌-8ಕ್ಕೆ ಮುನ್ನ ದೊಡ್ಡ ಜಯದ ಕಾತರದಲ್ಲಿರುವ ಭಾರತಕ್ಕೆ ಶಾಕ್‌ ನೀಡುತ್ತಾ ಕೆನಡಾ?

ಲಾಡೆರ್‌ಹಿಲ್‌(ಫ್ಲೋರಿಡಾ): ಆರಂಭಿಕ 3 ಪಂದ್ಯದಲ್ಲಿ ಬೌಲರ್‌ಗಳ ಬಲದಿಂದಲೇ ಗೆದ್ದಿರುವ ಟೀಂ ಇಂಡಿಯಾ, ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್‌-8ರ ಪಂದ್ಯಗಳಿಗೂ ಮುನ್ನ ಬ್ಯಾಟಿಂಗ್‌ ವಿಭಾಗದಲ್ಲಿ ಅಬ್ಬರಿಸಲು ಎದುರು ನೋಡುತ್ತಿದೆ. 

ತಂಡ ಗುಂಪು ಹಂತದ ಕೊನೆ ಪಂದ್ಯದಲ್ಲಿ ಶನಿವಾರ ಕೆನಡಾ ವಿರುದ್ಧ ಸೆಣಸಲಿದ್ದು, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಪಂದ್ಯಕ್ಕೆ ಫ್ಲೋರಿಡಾದ ಲಾಡೆರ್‌ಹಿಲ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಭಾರಿ ಮಳೆ ಭೀತಿ ಎದುರಾಗಿದೆ.

ಐರ್ಲೆಂಡ್‌, ಪಾಕಿಸ್ತಾನ ಹಾಗೂ ಕೆನಡಾವನ್ನು ಸೋಲಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಪಾಲಿಗೆ ಶನಿವಾರದ್ದು ಸೂಪರ್‌-8ರ ರಿಹರ್ಸಲ್‌ ಪಂದ್ಯ. ತಂಡದಲ್ಲಿರುವ ಸಮಸ್ಯೆಗಳಿಗೆ ಮುಂದಿನ ಸುತ್ತಿನ ಪ್ರಮುಖ ಪಂದ್ಯಗಳಿಗೂ ಮುನ್ನ ಪರಿಹಾರ ಕಂಡುಕೊಳ್ಳಬೇಕಿದೆ. ಮುಖ್ಯವಾಗಿ ಟೂರ್ನಿಯ 3 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 1, 4 ಹಾಗೂ ಸೊನ್ನೆಗೆ ಔಟಾಗಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. 

ತನ್ನ ಎಂದಿನ 3ನೇ ಕ್ರಮಾಂಕದಲ್ಲಿ ಆಡದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ, ಈ ಪಂದ್ಯದಲ್ಲಾದರೂ ಅಬ್ಬರಿಸಬಲ್ಲರೇ ಎಂಬ ಕುತೂಹಲವಿದೆ.ರಿಷಭ್ ಪಂತ್‌ ಹಾಗೂ ಸೂರ್ಯಕುಮಾರ್‌ ಮಿಂಚುತ್ತಿದ್ದು, ಶಿವಂ ದುಬೆ ಕೂಡಾ ಕಳೆದ ಪಂದ್ಯದಲ್ಲಿ ತಂಡದ ಕೈ ಹಿಡಿದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಪ್ರದರ್ಶನ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ. ಜಡೇಜಾ ಮೈ ಚಳಿ ಬಿಟ್ಟು ಆಡಿದರಷ್ಟೇ ಗೆಲುವು ಸುಲಭವಾಗಲಿದೆ. ಬೌಲಿಂಗ್‌ ವಿಭಾಗದಲ್ಲಿ ಬೂಮ್ರಾ, ಅರ್ಶ್‌ದೀಪ್‌ ಅಮೋಘ ಪ್ರದರ್ಶನ ನೀಡುತ್ತಿದ್ದು, ಮೊಹಮದ್ ಸಿರಾಜ್‌ ಕೂಡಾ ಸೂಕ್ತ ಬೆಂಬಲ ನೀಡಬೇಕಿದೆ.

ಔಪಚಾರಿಕ ಪಂದ್ಯ: ಮತ್ತೊಂದೆಡೆ ಕೆನಡಾ ಪಾಲಿಗೆ ಇದು ಕೇವಲ ಓಪಚಾರಿಕ ಪಂದ್ಯ. ತಂಡ ಆಡಿರುವ 3 ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 2 ಅಂಕ ಸಂಪಾದಿಸಿದ್ದು, ಈ ಪಂದ್ಯದಲ್ಲಿ ಗೆದ್ದರೂ ಸೂಪರ್‌-8ಕ್ಕೇರುವುದು ಅಸಾಧ್ಯ. ಒಂದು ವೇಳೆ ತಂಡ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಕರ್ನಾಟಕದ ಮೂಲದ ಶ್ರೇಯಸ್‌ ಮೋವಾ, ಆ್ಯರನ್‌ ಜಾನ್ಸನ್‌ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ (ನಾಯಕ), ವಿರಾಟ್‌ ಕೊಹ್ಲಿ, ಪಂತ್‌, ಸೂರ್ಯ, ದುಬೆ, ಹಾರ್ದಿಕ್‌, ಅಕ್ಷರ್, ಜಡೇಜಾ, ಬೂಮ್ರಾ, ಸಿರಾಜ್‌, ಅರ್ಶ್‌ದೀಪ್‌.ಕೆನಡಾ: ಜಾನ್ಸನ್‌, ನವ್‌ನೀತ್‌, ಪರ್ಗತ್‌, ಕಿರ್ಟನ್‌, ಶ್ರೇಯಸ್‌ ಮೋವಾ, ಸಾದ್‌ ಬಿನ್‌ ಝಫರ್‌(ನಾಯಕ), ರವೀಂದರ್‌ಪಾಲ್‌, ಹೇಲಿಗರ್‌, ಕಲೀಂ, ಜುನೈದ್‌, ಗಾರ್ಡನ್‌. 

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌: ಲಾಡೆರ್‌ಹಿಲ್‌ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ಕಳೆದೆರಡು ವರ್ಷಗಳಲ್ಲಿ ನಡೆದ 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲೂ ಮೊದಲು ಬ್ಯಾಟ್‌ ಮಾಡಿದ ತಂಡಗಳು 165+ ರನ್‌ ಕಲೆಹಾಕಿವೆ. ಹೀಗಾಗಿ ಈ ಬಾರಿಯೂ ದೊಡ್ಡ ಮೊತ್ತ ನಿರೀಕ್ಷಿಸಬಹುದು.

ಮಳೆಯಿಂದ ಪಂದ್ಯ ರದ್ದಾಗುವ ಸಾಧ್ಯತೆ

ಫ್ಲೋರಿಡಾದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪಂದ್ಯ ನಡೆಯಲಿರುವ ಲಾಡೆರ್‌ಹಿಲ್‌ನಲ್ಲಿ ಶನಿವಾರವೂ ಮಳೆ ಮುನ್ಸೂಚನೆ ಇದೆ. ಈಗಾಗಲೇ ಜೂ.12ರಂದು ನಡೆಯಬೇಕಿದ್ದ ನೇಪಾಳ-ಶ್ರೀಲಂಕಾ ಪಂದ್ಯ ಈಗಾಗಲೇ ಮಳೆಯಿಂದಾಗಿ ರದ್ದುಗೊಂಡಿದೆ. ಶುಕ್ರವಾರ ಐರ್ಲೆಂಡ್‌-ಅಮೆರಿಕ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದ್ದು, ಭಾರತದ ಪಂದ್ಯ ಕೂಡಾ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.