ಭಾರತೀಯರಿಗೆ ಶುರುವಾಗಿದೆ ಇಂಗ್ಲಿಷ್‌ ಸ್ಪಿನ್ನರ್‌ಗಳ ಭೀತಿ!

| Published : Feb 14 2024, 02:17 AM IST

ಭಾರತೀಯರಿಗೆ ಶುರುವಾಗಿದೆ ಇಂಗ್ಲಿಷ್‌ ಸ್ಪಿನ್ನರ್‌ಗಳ ಭೀತಿ!
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲೆಂಡ್‌ ತಂಡ ಈ ಬಾರಿ ಭಾರತಕ್ಕೆ ಬರುವ ಮೊದಲೂ, ಅಶ್ವಿನ್‌, ಜಡೇಜಾ ಹಾಗೂ ಇನ್ನುಳಿದ ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಶರಣಾಗಲಿದೆ ಎನ್ನುವ ಭಾವನೆ ಎಲ್ಲರಲ್ಲೂ ಇತ್ತು. ಆದರೆ, ಮೊದಲೆರಡು ಟೆಸ್ಟ್‌ಗಳಲ್ಲಿ ಭಾರತೀಯ ಸ್ಪಿನ್ನರ್‌ಗಳಿಗಿಂತ ಇಂಗ್ಲೆಂಡ್‌ ಸ್ಪಿನ್ನರ್ಸ್‌ ಹೆಚ್ಚು ಪರಿಣಾಮಕಾರಿಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ರಾಜ್‌ಕೋಟ್‌: ಕಳೆದ 12 ವರ್ಷಗಳಲ್ಲಿ ಭಾರತ ತಂಡ ತವರಿನಲ್ಲಿ ಟೆಸ್ಟ್‌ ಸರಣಿ ಸೋಲದಿರಲು ಪ್ರಮುಖ ಕಾರಣ ಸ್ಪಿನ್ನರ್‌ಗಳು. ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಭಾರತ ಪ್ರವಾಸ ಕೈಗೊಂಡ ಬಹುತೇಕ ಎಲ್ಲಾ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ.ಇಂಗ್ಲೆಂಡ್‌ ತಂಡ ಈ ಬಾರಿ ಭಾರತಕ್ಕೆ ಬರುವ ಮೊದಲೂ, ಅಶ್ವಿನ್‌, ಜಡೇಜಾ ಹಾಗೂ ಇನ್ನುಳಿದ ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಶರಣಾಗಲಿದೆ ಎನ್ನುವ ಭಾವನೆ ಎಲ್ಲರಲ್ಲೂ ಇತ್ತು. ಆದರೆ, ಮೊದಲೆರಡು ಟೆಸ್ಟ್‌ಗಳಲ್ಲಿ ಭಾರತೀಯ ಸ್ಪಿನ್ನರ್‌ಗಳಿಗಿಂತ ಇಂಗ್ಲೆಂಡ್‌ ಸ್ಪಿನ್ನರ್ಸ್‌ ಹೆಚ್ಚು ಪರಿಣಾಮಕಾರಿಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಮೊದಲೆರಡು ಪಂದ್ಯಗಳಿಂದ ಅಶ್ವಿನ್‌, ಜಡೇಜಾ, ಅಕ್ಷರ್‌ ಪಟೇಲ್‌ ಹಾಗೂ ಕುಲ್ದೀಪ್‌ ಯಾದವ್‌ ಸೇರಿ ಒಟ್ಟು 23 ವಿಕೆಟ್‌ ಕಿತ್ತಿದ್ದಾರೆ. ಮತ್ತೊಂದೆಡೆ ಜ್ಯಾಕ್‌ ಲೀಚ್‌, ಟಾಮ್‌ ಹಾರ್ಟ್ಲಿ, ರೆಹಾನ್‌ ಅಹ್ಮದ್‌, ಜೋ ರೂಟ್‌ ಹಾಗೂ ಶೋಯಬ್‌ ಬಷೀರ್‌ ಸೇರಿ ಒಟ್ಟು 33 ವಿಕೆಟ್‌ ಕಬಳಿಸಿದ್ದು, ಭಾರತೀಯ ಬ್ಯಾಟರ್‌ಗಳನ್ನು ಬಲವಾಗಿ ಕಾಡಿದ್ದಾರೆ.ಇದೀಗ 3ನೇ ಟೆಸ್ಟ್‌ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ಭಾರತದ ಅನನುಭವಿ ಬ್ಯಾಟಿಂಗ್‌ ಪಡೆಗೆ ಇಂಗ್ಲೆಂಡ್‌ ಸ್ಪಿನ್ನರ್‌ಗಳ ಭೀತಿ ಶುರುವಾಗಿದೆ. ಸ್ಪಿನ್‌ ಪಿಚ್‌ ಸಿದ್ಧಗೊಳಿಸಿ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದ ಭಾರತದ ತಂತ್ರಕ್ಕೆ ಈ ಬಾರಿ ಇಂಗ್ಲೆಂಡ್‌ ಬಲವಾದ ತಿರುಗೇಟು ನೀಡುತ್ತಿದ್ದು, ಬಿಸಿಸಿಐ ಅನ್ನು ಭಾರಿ ಗೊಂದಲಕ್ಕೆ ಸಿಲುಕಿಸಿದೆ.

ಹೇಗಿರಲಿದೆ ಪಿಚ್‌?ರಾಜ್‌ಕೋಟ್‌ನ ಪಿಚ್‌ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಶುರುವಾಗಿದೆ. ಇಲ್ಲಿನ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ ಸ್ನೇಹಿಯಾಗಿರಲಿದ್ದು, ದೊಡ್ಡ ಮೊತ್ತ ದಾಖಲಾದ ಉದಾಹರಣೆಯೇ ಹೆಚ್ಚು. ಇಲ್ಲಿ ನಡೆದಿರುವ 20ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳ ಇನ್ನಿಂಗ್ಸ್‌ಗಳಲ್ಲಿ 500ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಇದೇ ವೇಳೆ ಪಿಚ್‌ ಹಲವು ಬಾರಿ ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ನೆರವಾದ ಉದಾಹರಣೆಯೂ ಇದ್ದು, 20 ಇನ್ನಿಂಗ್ಸ್‌ಗಳಲ್ಲಿ ತಂಡಗಳು 150 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಆಗಿವೆ. ಹೀಗಾಗಿ, ಭಾರತ-ಇಂಗ್ಲೆಂಡ್‌ 3ನೇ ಟೆಸ್ಟ್‌ಗೆ ಸಿದ್ಧಗೊಂಡಿರುವ ಪಿಚ್‌ ಹೇಗೆ ವರ್ತಿಸಲಿದೆ? ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.