ಪ್ರೊ ಕಬಡ್ಡಿ: ಪ್ಲೇ-ಆಫ್‌ ಪ್ರವೇಶಿಸಿದ ಪಾಟ್ನಾ

| Published : Feb 14 2024, 02:17 AM IST

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್‌ ಹಂತಕ್ಕೆ ಪಾಟ್ನಾ ಪೈರೇಟ್ಸ್‌ ಪ್ರವೇಶಿಸಿದೆ. ಮಂಗಳವಾರ ತೆಲುಗು ಟೈಟಾನ್ಸ್‌ ವಿರುದ್ಧ 38-36 ಅಂಕಗಳ ರೋಚಕ ಗೆಲುವು ಸಾಧಿಸಿದ ಪಾಟ್ನಾ, ಪ್ಲೇ-ಆಫ್‌ಗೇರಿದ 5ನೇ ತಂಡ ಎನಿಸಿತು.

ಕೋಲ್ಕತಾ: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್‌ ಹಂತಕ್ಕೆ ಪಾಟ್ನಾ ಪೈರೇಟ್ಸ್‌ ಪ್ರವೇಶಿಸಿದೆ. ಮಂಗಳವಾರ ತೆಲುಗು ಟೈಟಾನ್ಸ್‌ ವಿರುದ್ಧ 38-36 ಅಂಕಗಳ ರೋಚಕ ಗೆಲುವು ಸಾಧಿಸಿದ ಪಾಟ್ನಾ, ಪ್ಲೇ-ಆಫ್‌ಗೇರಿದ 5ನೇ ತಂಡ ಎನಿಸಿತು.

ಮೊದಲಾರ್ಧದ ಆರಂಭದಲ್ಲೇ ಆಲೌಟ್‌ ಆಗಿ 7 ಅಂಕಗಳ ಹಿನ್ನಡೆ ಅನುಭವಿಸಿದರೂ, ಕುಗ್ಗದ ಪಾಟ್ನಾ 20 ನಿಮಿಷಗಳ ಆಟದ ಮುಕ್ತಾಯಕ್ಕೆ ಅಂತರವನ್ನು ಕೇವಲ 2 ಅಂಕಗಳಿಗೆ (20-22) ಇಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಟೈಟಾನ್ಸ್‌ ಮೇಲೆ ಸವಾರಿ ಮಾಡಿದ ಪೈರೇಟ್ಸ್‌, ನಿರ್ಣಾಯಕ ಹಂತದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿ ಮುನ್ನಡೆ ಪಡೆಯಿತು. ಕೊನೆಯಲ್ಲಿ ಸಮಯೋಚಿತ ಆಟವಾಡಿ ಪಂದ್ಯ ಕೈ ಜಾರದಂತೆಯೂ ಎಚ್ಚರ ವಹಿಸಿತು.ಪವನ್‌ ಶೆರಾವತ್‌ರ 16 ಅಂಕಗಳ ಸಾಹಸ ಟೈಟಾನ್ಸ್‌ ಪಡೆಯನ್ನು 18ನೇ ಸೋಲಿನಿಂದ ಪಾರು ಮಾಡಲಿಲ್ಲ. ಸದ್ಯ ಪುಣೆ, ಜೈಪುರ, ಡೆಲ್ಲಿ, ಗುಜರಾತ್‌ ಹಾಗೂ ಪಾಟ್ನಾ ತಂಡಗಳು ಪ್ಲೇ-ಆಫ್‌ಗೇರಿದ್ದು ಇನ್ನೊಂದು ಸ್ಥಾನಕ್ಕೆ ಹರ್ಯಾಣ ಹಾಗೂ ಬೆಂಗಾಲ್‌ ನಡುವೆ ಪೈಪೋಟಿ ಇದೆ.ಬೆಂಗಾಲ್‌ ಬಾಕಿ ಇರುವ 2 ಪಂದ್ಯ ಗೆದ್ದರೂ ಗರಿಷ್ಠ 64 ಅಂಕ ತಲುಪಬಹುದು. ಹರ್ಯಾಣಕ್ಕೆ 4 ಪಂದ್ಯ ಬಾಕಿ ಇದ್ದು, ತಂಡ 60 ಅಂಕ ಗಳಿಸಿದೆ. 4ರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇ-ಆಫ್‌ ಸ್ಥಾನ ಖಚಿತವಾಗಲಿದೆ.