ಹಾಲಿ ಚಾಂಪಿಯನ್‌ ಬೆಂಗಳೂರು vs ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಫೈಟ್‌ । ಉಭಯ ತಂಡಕ್ಕೂ 2ನೇ ಕಪ್‌ ಗುರಿಒಂದು ಟ್ರೋಫಿಗೆ ಬರೋಬ್ಬರಿ 18 ವರ್ಷ ಕಾದಿದ್ದ ಆರ್‌ಸಿಬಿಗೆ ಈಗ ಸತತ 2ನೇ ವರ್ಷವೂ ಚಾಂಪಿಯನ್‌ ಎನಿಸಿಕೊಳ್ಳುವ ಕಾತರ

ಅಹಮದಾಬಾದ್‌: ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಚೊಚ್ಚಲ ಕಪ್‌ ಗೆಲ್ಲಲು ಬರೋಬ್ಬರಿ 18 ವರ್ಷಗಳ ಕಾಲ ಕಾದಿತ್ತು. ಕಳೆದ ವರ್ಷ ತನ್ನ ಕನಸನ್ನು ನನಸು ಮಾಡಿಕೊಂಡಿದ್ದ ಬೆಂಗಳೂರು ತಂಡ ಈಗ ಮತ್ತೊಂದು ಟ್ರೋಫಿ ಗೆಲುವಿನ ಸನಿಹದಲ್ಲಿದೆ. ಸತತ 2ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ, ಭಾನುವಾರ ನಡೆಯಲಿರುವ 19ನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿರುವ ರಜತ್‌ ಪಾಟೀದಾರ್‌ ನಾಯಕತ್ವದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಪ್ಲೇ-ಆಫ್‌ ಪ್ರವೇಶಿಸಿತ್ತು. ಕ್ವಾಲಿಫೈಯರ್‌-1ರಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧವೇ ಗೆದ್ದು ನೇರವಾಗಿ ಫೈನಲ್‌ಗೇರಿದೆ. ಮತ್ತೊಂದೆಡೆ ಗುಜರಾತ್‌ ತಂಡವೂ ಅತ್ಯಂತ ಬಲಿಷ್ಠವಾಗಿದ್ದು, ಗುಂಪು ಹಂತದಲ್ಲಿ ಆರ್‌ಸಿಬಿಯಷ್ಟೇ ಅಂಕ ಪಡೆದಿದ್ದರೂ ನೆಟ್‌ ರನ್‌ರೇಟ್‌ ಕಡಿಮೆ ಇದ್ದ ಕಾರಣ 2ನೇ ಸ್ಥಾನಿಯಾಗಿತ್ತು. ಕ್ವಾಲಿಫೈಯರ್‌-1ರಲ್ಲಿ ಸೋತ ಬಳಿಕ ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆದ್ದು ಫೈನಲ್‌ ತಲುಪಿದೆ.

ರೋಚಕ ಪೈಪೋಟಿ ನಿರೀಕ್ಷೆ:

ಟೂರ್ನಿಯಲ್ಲಿ ನೀಡಿರುವ ಪ್ರದರ್ಶನ ಗಮನಿಸಿದರೆ ಉಭಯ ತಂಡಗಳಿಂದ ಫೈನಲ್‌ನಲ್ಲಿ ರೋಚಕ ಪೈಪೋಟಿ ನಿರೀಕ್ಷಿಸಬಹುದು. ಕ್ವಾಲಿಫೈಯರ್‌-1ರಲ್ಲಿ ತನ್ನ ವಿರುದ್ಧವೇ ಸೋತ ಹೊರತಾಗಿಯೂ ಗುಜರಾತ್‌ ತಂಡವನ್ನು ಆರ್‌ಸಿಬಿ ಲಘುವಾಗಿ ಪರಿಗಣಿಸುವಂತಿಲ್ಲ. ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ(600 ರನ್‌), ರಜತ್‌(486 ರನ್‌), ದೇವದತ್‌ ಪಡಿಕ್ಕಲ್(463 ರನ್‌) ಅಬ್ಬರಿಸುತ್ತಿದ್ದಾರೆ. ಅದರಲ್ಲೂ, ಕ್ವಾಲಿಫೈಯರ್‌-1ರಲ್ಲಿ ಗುಜರಾತ್‌ನ ವೇಗಿಗಳ ಮುಂದೆ ಕುಸಿಯುವ ಭೀತಿಯಲ್ಲಿದ್ದ ಆರ್‌ಸಿಬಿಯನ್ನು ರಜತ್‌(33 ಎಸೆತಕ್ಕೆ ಔಟಾಗದೆ 93)ಸ್ಫೋಟಕ ಆಟದ ಮೂಲಕ ಕಾಪಾಡಿದ್ದರು. ತಂಡ ಅವರಿಂದ ಮತ್ತೊಂದು ಸ್ಫೋಟಕ ಆಟವನ್ನು ನಿರೀಕ್ಷಿಸುತ್ತಿದೆ. ವೆಂಕಟೇಶ್‌ ಅಯ್ಯರ್‌, ಜಿತೇಶ್‌ ಶರ್ಮಾ, ಟಿಮ್‌ ಡೇವಿಡ್‌ ಕೂಡಾ ತಂಡವನ್ನು ನಿರ್ಣಾಯಕ ಪಂದ್ಯದಲ್ಲಿ ಕೈಹಿಡಿಯಬೇಕಿದೆ.

ಇನ್ನು ತಂಡದ ಬೌಲಿಂಗ್‌ ಪಡೆಯೂ ಮಾರಕ ದಾಳಿ ಸಂಘಟಿಸುತ್ತಿದೆ. ಭುವನೇಶ್ವರ್‌ ಕುಮಾರ್‌(26 ವಿಕೆಟ್‌), ಜೋಶ್‌ ಹೇಜಲ್‌ವುಡ್‌(13) ಜೊತೆಗೆ ರಸಿಕ್‌ ಸಲಾಂ(16) ವೇಗದ ಬೌಲಿಂಗ್‌ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೃನಾಲ್ ಪಾಂಡ್ಯ(13 ವಿಕೆಟ್‌, 225 ರನ್‌) ಆಲ್ರೌಂಡ್‌ ಆಟ ನಿರ್ಣಾಯಕವಾಗಿದೆ.

ಸೇಡು ತೀರಿಸುವ ಗುರಿ:

ಕ್ವಾಲಿಫೈಯರ್‌-1 ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್‌ ಅತ್ಯಂತ ಹೀನಾಯವಾಗಿ ಸೋತಿತ್ತು. ಆರ್‌ಸಿಬಿ 254 ರನ್‌ ಸಿಡಿಸಿದರೆ, ಗುಜರಾತ್‌ ಕೇವಲ 162 ರನ್‌ಗೆ ಸರ್ವಪತನ ಕಂಡಿತ್ತು. ಆದರೆ ಟೂರ್ನಿಯಲ್ಲಿ ಗುಜರಾತ್‌ನ ಒಟ್ಟಾರೆ ಪ್ರದರ್ಶನ ಗಮನಿಸಿದರೆ ಆರ್‌ಸಿಬಿ ವಿರುದ್ಧದ ಸೋಲು ತಂಡದ ಆತ್ಮವಿಶ್ವಾಸ ಕುಗ್ಗಿಸಲು ಸಾಧ್ಯವಿಲ್ಲ. ರಾಜಸ್ಥಾನ ವಿರುದ್ಧ ಎಲಿಮಿನೇಟರ್‌ನಲ್ಲಿ ಭರ್ಜರಿಯಾಗಿ ಗೆದ್ದಿರುವ ಜಿಟಿ, ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ನಾಯಕ ಶುಭ್‌ಮನ್‌ ಗಿಲ್‌(722 ರನ್‌), ಸಾಯಿ ಸುದರ್ಶನ್‌(710 ರನ್‌) ಜೋಡಿ ಅಮೋಘ ಆಟವಾಡುತ್ತಿದ್ದು, ತಂಡದ ಬ್ಯಾಟಿಂಗ್‌ ಪಡೆ ಇವರಿಬ್ಬರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಜೋಸ್‌ ಬಟ್ಲರ್‌ 507, ವಾಷಿಂಗ್ಟನ್‌ ಸುಂದರ್‌ 327 ರನ್‌ ಕಲೆಹಾಕಿದ್ದು, ಮಹತ್ವದ ಪಂದ್ಯದಲ್ಲೂ ಅಬ್ಬರಿಸಬೇಕಿದೆ.

ಇನ್ನು, ಗುಜರಾತ್‌ ಬೌಲಿಂಗ್‌ ವಿಭಾಗ ಪ್ರಚಂಡ ದಾಳಿ ನಡೆಸುತ್ತಿದೆ. ಕಗಿಸೊ ರಬಾಡ(28 ವಿಕೆಟ್‌) ಗರಿಷ್ಠ ವಿಕೆಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊಹಮ್ಮದ್‌ ಸಿರಾಜ್‌(18 ವಿಕೆಟ್‌) ಪವರ್‌-ಪ್ಲೇ ದಾಳಿ ಎದುರಿಸಲು ಎದುರಾಳಿಗಳು ಪರದಾಡುತ್ತಿದ್ದಾರೆ. ಇವರಿಬ್ಬರು ಕ್ರಮವಾಗಿ 165 ಮತ್ತು 162 ಎಸೆತ ಡಾಟ್‌ ಮಾಡಿದ್ದು, ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಅವರಿಗೆ ಉತ್ತಮ ಬೆಂಬಲ ನೀಡುತ್ತಿರುವ ರಶೀದ್‌ ಖಾನ್‌ 19, ಜೇಸನ್‌ ಹೋಲ್ಡರ್‌ 17, ಪ್ರಸಿದ್ಧ್ ಕೃಷ್ಣ 16, ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮೂಲಕ ಟ್ರೋಫಿ ತಮ್ಮದಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮುಖಾಮುಖಿ: 09

ಆರ್‌ಸಿಬಿ: 05

ಗುಜರಾತ್‌: 04

ಸಂಭಾವ್ಯ ಆಟಗಾರರ ಪಟ್ಟಿ:

ಆರ್‌ಸಿಬಿ: ಕೊಹ್ಲಿ, ಸಾಲ್ಟ್‌/ವೆಂಕಟೇಶ್‌, ಪಡಿಕ್ಕಲ್‌, ರಜತ್‌(ನಾಯಕ), ಜಿತೇಶ್‌, ಶೆಫರ್ಡ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಜೇಕಬ್ ಡಫಿ, ಹೇಜಲ್‌ವುಡ್‌, ರಸಿಕ್‌ ಸಲಾಂ.

ಗುಜರಾತ್‌: ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ವಾಷಿಂಗ್ಟನ್‌, ಜೇಸನ್‌ ಹೋಲ್ಡರ್‌, ರಾಹುಲ್‌ ತೆವಾಟಿಯಾ, ನಿಶಾಂತ್‌ ಸಿಂಧು, ರಶೀದ್‌, ಸಿರಾಜ್‌, ಪ್ರಸಿದ್ಧ್‌, ಸಾಯಿ ಕಿಶೋರ್‌, ರಬಾಡ.

ಪಿಚ್‌ ರಿಪೋರ್ಟ್‌

ಆರ್‌ಸಿಬಿ

ಬಲಿಷ್ಠ ಬ್ಯಾಟಿಂಗ್‌ ವಿಭಾಗ

ರಜತ್‌ ಸ್ಫೋಟಕ ಪ್ರದರ್ಶನವೇಗಿಗಳ ಮಾರಕ ದಾಳಿ

ಜಿತೇಶ್‌, ಶೆಫರ್ಡ್‌ ಲಯದಲ್ಲಿಲ್ಲ

ಟಿಮ್‌ ಡೇವಿಡ್‌ ಅಸ್ಥಿರ ಆಟ

ಭುವಿಗೆ ಸೂಕ್ತ ಬೆಂಬಲ ಸಿಗ್ತಿಲ್ಲ

ಗುಜರಾತ್‌

ಟಾಪ್‌-3 ಬಲಿಷ್ಠ ಬ್ಯಾಟರ್ಸ್‌ ಪ್ರಚಂಡ ವೇಗಿಗಳ ಪಡೆ

ಹೋಲ್ಡರ್ ಅಲ್ರೌಂಡ್ ಆಟ

ದೌರ್ಬಲ್ಯ..

ಆರಂಭಿಕರು ಮಾತ್ರ ಮಿಂಚು

ಮಧ್ಯಮ ಕ್ರಮಾಂಕ ದುರ್ಬಲ

ದುಬಾರಿಯಾಗುವ ಸ್ಪಿನ್ನರ್ಸ್‌

ಉಭಯ ತಂಡಗಳ ಫೈನಲ್‌ ಹಾದಿ

ಆರ್‌ಸಿಬಿ

- ಲೀಗ್‌ ಹಂತದಲ್ಲಿ 14 ಪಂದ್ಯದಲ್ಲಿ 9ರಲ್ಲಿ ಗೆಲುವು.

- ಗುಜರಾತ್‌ ವಿರುದ್ಧ 1 ಸೇರಿ 5 ಪಂದ್ಯದಲ್ಲಿ ಸೋಲು.

- 18 ಅಂಕ. ನೆಟ್‌ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನ.

- ಕ್ವಾಲಿಫೈಯರ್‌-1ರಲ್ಲಿ ಗುಜರಾತ್‌ನ ಸೋಲಿಸಿ ಫೈನಲ್‌ಗೆ

ಗುಜರಾತ್‌

- ಲೀಗ್‌ ಹಂತದಲ್ಲಿ 14 ಪಂದ್ಯದಲ್ಲಿ 9ರಲ್ಲಿ ಗೆಲುವು

- ನೆಟ್‌ ರನ್‌ರೇಟ್‌ ಕಡಿಮೆ ಇದ್ದ ಕಾರಣ 2ನೇ ಸ್ಥಾನ

- ಕ್ವಾಲಿಫೈಯರ್‌-1ರಲ್ಲಿ ಆರ್‌ಸಿಬಿ ವಿರುದ್ಧ ಸೋಲು.

- ಕ್ವಾಲಿಫೈಯರ್‌-2ರಲ್ಲಿ ರಾಯಲ್ಸ್‌ನ ಮಣಿಸಿ ಫೈನಲ್‌ಗೆ.

ಈ ಕ್ರೀಡಾಂಗಣದಲ್ಲೇ

ಲೀಗ್‌ ಹಂತದಲ್ಲಿ ಜಿಟಿಗೆ

ಶರಣಾಗಿತ್ತು ಆರ್‌ಸಿಬಿ!

ಈ ಬಾರಿ ಆರ್‌ಸಿಬಿ-ಗುಜರಾತ್‌ ತಂಡಗಳು 3 ಬಾರಿ ಮುಖಾಮುಖಿಯಾಗಿದೆ. ಕ್ವಾಲಿಫೈಯರ್‌-1 ಪಂದ್ಯಕ್ಕೂ ಮುನ್ನ ಲೀಗ್‌ ಹಂತದಲ್ಲಿ ಈ ತಂಡಗಳು 2 ಬಾರಿ ಸೆಣಸಾಡಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿದ್ದರೆ, ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಗುಜರಾತ್‌ ಸುಲಭದಲ್ಲಿ ಮಣಿಸಿತ್ತು. ಹೀಗಾಗಿ ಗುಜರಾತ್‌ ತಂಡ ತನ್ನ ತವರಿನಲ್ಲಿ ಮತ್ತೊಮ್ಮೆ ಆರ್‌ಸಿಬಿಯನ್ನು ಮಣಿಸುವ ವಿಶ್ವಾಸದಲ್ಲಿದೆ.

ಇದು ಆರ್‌ಸಿಬಿಗೆ 5ನೇ,

ಜಿಟಿಗೆ 3ನೇ ಫೈನಲ್‌

ಈ ಪಂದ್ಯ ಆರ್‌ಸಿಬಿಯ 5ನೇ ಫೈನಲ್‌ ಆಗಿರಲಿದೆ. ಈ ಹಿಂದೆ 2009, 2011, 2016ರ ಫೈನಲ್‌ನಲ್ಲಿ ಸೋತಿದ್ದ ಆರ್‌ಸಿಬಿ 2025ರಲ್ಲಿ ಪಂಜಾಬ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿತ್ತು. 2022ರಿಂದ ಐಪಿಎಲ್‌ ಆಡುತ್ತಿರುವ ಗುಜರಾತ್‌ಗೆ ಇದು 3ನೇ ಫೈನಲ್‌. 2022ರ ತನ್ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಚಾಂಪಿಯನ್‌ ಆಗಿದ್ದ ತಂಡ, 2023ರ ಫೈನಲ್‌ನಲ್ಲಿ ಚೆನ್ನೈ ವಿರುದ್ಧ ಸೋತಿತ್ತು.

2+ ಟ್ರೋಫಿ ಗೆದ್ದ 4ನೇ

ತಂಡ ಎಂಬ ಹೆಗ್ಗಳಿಕೆ

ಭಾನುವಾರದ ಫೈನಲ್‌ನಲ್ಲಿ ಯಾರೇ ಗೆದ್ದರೂ 2 ಅಥವಾ ಅದಕ್ಕಿಂತ ಹೆಚ್ಚು ಟ್ರೋಫಿ ಪಡೆದ 4ನೇ ತಂಡ ಎಂಬ ಖ್ಯಾತಿ ಗಳಿಸಲಿದೆ. ಈ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್‌ 5, ಮುಂಬೈ ಇಂಡಿಯನ್ಸ್‌ 5, ಕೋಲ್ಕತಾ ನೈಟ್ ರೈಡರ್ಸ್‌ 3 ಬಾರಿ ಚಾಂಪಿಯನ್‌ ಆಗಿವೆ.

ಚೆನ್ನೈ, ಮುಂಬೈ ಪಟ್ಟಿ

ಸೇರುತ್ತಾ ಆರ್‌ಸಿಬಿ?

ಐಪಿಎಲ್‌ನಲ್ಲಿ ಈವರೆಗೂ ಸತತವಾಗಿ 2 ಟ್ರೋಫಿ ಗೆದ್ದ ತಂಡಗಳು ಚೆನ್ನೈ ಹಾಗೂ ಮುಂಬೈ ಮಾತ್ರ. ಚೆನ್ನೈ 2010, 2011, ಮುಂಬೈ 2019, 2020ರಲ್ಲಿ ಸತತವಾಗಿ 2 ಬಾರಿ ಚಾಂಪಿಯನ್‌ ಆಗಿದ್ದವು. ಆರ್‌ಸಿಬಿಗೆ ಈ ದಾಖಲೆ ಬರೆಯುವ ಅವಕಾಶವಿದೆ.

ಮಳೆ ಬಂದರೆ ಪಂದ್ಯ

ನಾಳೆಗೆ ಮುಂದೂಡಿಕೆ

ಭಾನುವಾರದ ಫೈನಲ್‌ಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಮಳೆ ಅಡ್ಡಿಪಡಿಸಿದರೆ ಹೆಚ್ಚುವರಿ 2 ಗಂಟೆಗಳಲ್ಲಿ ಪಂದ್ಯ ಮುಗಿಸಲು ಪ್ರಯತ್ನಿಸಲಾಗುತ್ತದೆ. ಅದರಲ್ಲೂ ಪಂದ್ಯ ನಡೆಯದಿದ್ದರೆ ಸೋಮವಾರಕ್ಕೆ ಮುಂದೂಡಿಕೆಯಾಗಲಿದೆ. 2023ರಲ್ಲಿ ಗುಜರಾತ್‌-ಚೆನ್ನೈ ನಡುವೆ ಅಹಮದಾಬಾದ್‌ನಲ್ಲೇ ನಡೆದಿದ್ದ ಫೈನಲ್‌ ಪಂದ್ಯ ಮೀಸಲು ದಿನದಂದು ನಡೆದು, ಚೆನ್ನೈ ಚಾಂಪಿಯನ್ ಆಗಿತ್ತು.