13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಮಂಗಳವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯದಲ್ಲಿಂದು ಪರಸ್ಪರ ಸೆಣಸಾಡಲಿವೆ.

ಗುವಾಹಟಿ: 13ನೇ ಆವೃತ್ತಿಯ ಬಹುನಿರೀಕ್ಷಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಮಂಗಳವಾರ ಚಾಲನೆ ಸಿಗಲಿದೆ. ಭಾರತ ಹಾಗೂ ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಈ ಎರಡು ತಂಡಗಳೇ ಉದ್ಘಾಟನಾ ಪಂದ್ಯದಲ್ಲಿಂದು ಪರಸ್ಪರ ಸೆಣಸಾಡಲಿವೆ. ಭಾರತವನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದು, ಶ್ರೀಲಂಕಾ ತಂಡಕ್ಕೆ ಚಾಮರಿ ಅಟ್ಟಪಟ್ಟು ನಾಯಕತ್ವ ವಹಿಸಲಿದ್ದಾರೆ.

ಟೂರ್ನಿ ನ.2ರ ವರೆಗೂ ನಡೆಯಲಿದ್ದು, ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ, ಲಂಕಾ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಟ್ರೋಫಿಗಾಗಿ ಕಾದಾಡಲಿವೆ. ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಭಾರತದ 4 ನಗರಗಳಾದ ನವಿ ಮುಂಬೈ, ಗುವಾಹಟಿ, ವಿಶಾಖಪಟ್ಟಣಂ, ಇಂದೋರ್‌ ಹಾಗೂ ಶ್ರೀಲಂಕಾದ ಕೊಲಂಬೊ ಆತಿಥ್ಯ ವಹಿಸಲಿವೆ. 28 ರೌಂಡ್‌ ರಾಬಿನ್‌ ಹಂತದ ಪಂದ್ಯಗಳ ಪೈಕಿ 11 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಸೆಮಿಫೈನಲ್‌ ಪಂದ್ಯಗಳು ನವಿ ಮುಂಬೈ, ಗುವಾಹಟಿ/ಕೊಲಂಬೊದಲ್ಲಿ, ಫೈನಲ್‌ ಪಂದ್ಯ ನವಿ ಮುಂಬೈ ಅಥವಾ ಕೊಲಂಬೊದಲ್ಲಿ ನಿಗದಿಯಾಗಿದೆ.

ಟೂರ್ನಿ ಮಾದರಿ ಹೇಗೆ?:

ಟೂರ್ನಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ. ಅಂದರೆ, ಗುಂಪುಗಳನ್ನಾಗಿ ವಿಂಗಡಿಸದೆ ಎಲ್ಲಾ 8 ತಂಡಗಳನ್ನು ಒಂದೇ ಗುಂಪಿನಲ್ಲಿಡಲಾಗಿದೆ. ಈ ಹಂತದಲ್ಲಿ ಪ್ರತಿ ತಂಡ ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಎಲ್ಲಾ ತಂಡಕ್ಕೂ ತಲಾ 7 ಪಂದ್ಯ. ಅಗ್ರ-4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಅದರಲ್ಲಿ ಗೆದ್ದ ತಂಡಗಳು ಫೈನಲ್‌ ಆಡಲಿವೆ.

47 ವರ್ಷದ ಕಪ್ ಬರ

ನೀಗಿಸುತ್ತಾ ಭಾರತ?

1973ರಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ನಡೆಯುತ್ತಿದೆ. ಭಾರತ 1978ರಿಂದ ವಿಶ್ವಕಪ್‌ನಲ್ಲಿ ಆಡುತ್ತಿದೆ. ಆದರೆ ಒಮ್ಮೆಯೂ ತಂಡ ಚಾಂಪಿಯನ್‌ ಆಗಿಲ್ಲ. 2 ಬಾರಿ(2005, 2017) ರನ್ನರ್‌-ಅಪ್‌ ಆಗಿದ್ದೇ ತಂಡದ ಸಾಧನೆ. ಆದರೆ ಈ ಬಾರಿ ತವರಿನಲ್ಲಿ ವಿಶ್ವಕಪ್‌ ನಡೆಯುತ್ತಿರುವುದರಿಂದ ಭಾರತ ತನ್ನ 47 ವರ್ಷಗಳ ಟ್ರೋಫಿ ಬರ ನೀಗಿಸಲು ಎದುರು ನೋಡುತ್ತಿದೆ. ತಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಚಾಂಪಿಯನ್‌ ಆಗಿಲ್ಲ. 2020ರಲ್ಲಿ ರನ್ನರ್‌-ಅಪ್‌ ಆಗಿತ್ತು.

ಭಾರತ ಪಂದ್ಯಗಳ ವೇಳಾಪಟ್ಟಿ

ಎದುರಾಳಿ ದಿನಾಂಕ ಸ್ಥಳ

ಶ್ರೀಲಂಕಾ ಸೆ.30 ಗುವಾಹಟಿ

ಪಾಕಿಸ್ತಾನ ಅ.5 ಕೊಲಂಬೊ

ದ.ಆಫ್ರಿಕಾ ಅ.9 ವಿಶಾಖಪಟ್ಟಣಂ

ಆಸ್ಟ್ರೇಲಿಯಾ ಅ.12 ವಿಶಾಖಪಟ್ಟಣಂ

ಇಂಗ್ಲೆಂಡ್‌ ಅ.19 ಇಂದೋರ್‌

ನ್ಯೂಜಿಲೆಂಡ್‌ ಅ.23 ನವಿ ಮುಂಬೈ

ಬಾಂಗ್ಲಾದೇಶ ಅ.26 ನವಿ ಮುಂಬೈ

ಗೆದ್ದ ತಂಡಕ್ಕೆ ₹40 ಕೋಟಿ!

ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 39.55 ಕೋಟಿ ರು. ನಗದು ಬಹುಮಾನ ಲಭಿಸಲಿದೆ. ಟೂರ್ನಿ ಒಟ್ಟು 122.5 ಕೋಟಿ ರು. ಬಹುಮಾನ ಮೊತ್ತ ಹೊಂದಿದೆ. ಇದು 2022ರ ವಿಶ್ವಕಪ್‌ಗೆ ಹೋಲಿಸಿದರೆ ಶೇಕಡಾ 297ರಷ್ಟು ಹೆಚ್ಚು. ಅಂದು ಒಟ್ಟು 31 ಕೋಟಿ ನಗದು ಬಹುಮಾನವಿತ್ತು. ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ₹11.65 ಕೋಟಿ ಲಭಿಸಿದ್ದರೆ, ರನ್ನರ್‌-ಅಪ್‌ ಇಂಗ್ಲೆಂಡ್‌ ₹5.30 ಕೋಟಿ ಪಡೆದಿತ್ತು.

(ಬಹುತೇಕ ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭ. ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ

ನಂಬರ್‌ ಗೇಮ್ಸ್‌

07 ಬಾರಿ

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ(07) ಚಾಂಪಿಯನ್‌ ಆದ ತಂಡ ಆಸ್ಟ್ರೇಲಿಯಾ.

04 ಬಾರಿ

ಭಾರತದ ಆತಿಥ್ಯದಲ್ಲಿ 4ನೇ ಬಾರಿ ಐಸಿಸಿ ಮಹಿಳಾ ವಿಶ್ವಕಪ್‌ ಆಯೋಜನೆಗೊಳ್ಳಲಿದೆ.

07 ಪಂದ್ಯ

ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ತಲಾ 7 ಪಂದ್ಯಗಳನ್ನಾಡಲಿವೆ.