3ನೇ ಆವೃತ್ತಿ ಡಬ್ಲ್ಯುಪಿಎಲ್‌ಗೆ ವರ್ಣರಂಜಿತ ತೆರೆ : ಯಶಸ್ವಿಯಾಗಿ ಕೊನೆಗೊಂಡ ಟಿ 20 ಲೀಗ್‌

| N/A | Published : Mar 16 2025, 01:46 AM IST / Updated: Mar 16 2025, 04:13 AM IST

ಸಾರಾಂಶ

ಬೆಂಗ್ಳೂರು ಸೇರಿ 4 ನಗರದಲ್ಲಿ ಯಶಸ್ವಿಯಾಗಿ ನಡೆದ ವನಿತಾ ಟಿ20 ಲೀಗ್‌. ಎಲ್ಲಾ ಕಡೆಗಳಲ್ಲೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ. ಮುಂಬೈನಲ್ಲಿ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ. ನೋರಾ ಫತೇಹಿ ಸೇರಿ ಹಲವರಿಂದ ನೃತ್ಯ ಪ್ರದರ್ಶನ

ಮುಂಬೈ: 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ಗೆ ತೆರೆ ಬಿದ್ದಿದೆ. ಒಂದು ತಿಂಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ಟಿ20 ಟೂರ್ನಿ ಶನಿವಾರ ಮುಂಬೈನಲ್ಲಿ ಮುಕ್ತಾಯಗೊಂಡಿತು. ಫೆ.14ರಂದು ವಡೋದರಾದಲ್ಲಿ ಟೂರ್ನಿ ಆರಂಭಗೊಂಡಿತ್ತು.

 ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಫೈನಲ್‌ ಪಂದ್ಯಕ್ಕೂ ಮುನ್ನ ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರೋಪ ಸಮಾರಂಭ ನೆರವೇರಿತು. 

ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಜಾಗತಿಕ ಮಟ್ಟದ ಪ್ರಮುಖ ಕಲಾವಿದರು ಪ್ರದರ್ಶನ ನೀಡಿದರು. ಕೆನಡಾದ ಖ್ಯಾತ ನಟಿ, ನೃತ್ಯ ಪಟು ನೋರಾ ಫತೇಹಿ ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಮೊರಕ್ಕೋ-ಅಮೆರಿಕಾದ ಗಾಯಕ ಫ್ರೆಂಚ್‌ ಮೊಂಟಾನ, ಈಜಿಫ್ಟ್‌ನ ಪ್ರಸಿದ್ಧ ನಟ, ಗಾಯಕ ಮೊಹ್ಮಮದ್‌ ರಮದಾನ್‌, ಅಮೆರಿಕದ ಹಿನ್ನೆಲೆ ಗಾಯಕಿ ಜಾಸ್ಮೀನ್‌ ಸ್ಯಾಂಡ್ಲಸ್‌ ಸೇರಿ ಹಲವರು ಪ್ರದರ್ಶನ ನೀಡಿದರು.

 4 ನಗರಗಳಲ್ಲೂ ಭರ್ಜರಿ ಸ್ಪಂದನೆ

ಡಬ್ಲ್ಯುಪಿಎಲ್‌ನ ಈ ಬಾರಿ ಟೂರ್ನಿಗೂ ಅಭಿಮಾನಿಗಳಿಂದ ಅಭೂತಪೂರ್ವ ಸ್ಪಂದನೆ ದೊರಕಿತು. ಫೆ.14ರಂದು ವಡೋದರಾದಲ್ಲಿ ಟೂರ್ನಿ ಆರಂಭಗೊಂಡಿತ್ತು. ಬಹುತೇಕ ಎಲ್ಲಾ ಪಂದ್ಯಗಳಿಗೂ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಿದರು. ಬಳಿಕ ಫೆ.21ರಿಂದ ಮಾ.1ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದವು. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಿದರು. ಆರ್‌ಸಿಬಿ ಪಂದ್ಯಗಳು ಮಾತ್ರವಲ್ಲದೇ ಇತರ ತಂಡಗಳ ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗಿದ್ದವು. ಆರ್‌ಸಿಬಿ ತವರಿನಲ್ಲಿ ಆಡಿದ ಎಲ್ಲಾ 4 ಪಂದ್ಯದಲ್ಲಿ ಸೋಲುಂಡಿತು.

ಬಳಿಕ ಮಾ.3ರಿಂದ ಮಾ.8ರ ವರೆಗೆ ಟೂರ್ನಿಯ ಪಂದ್ಯಗಳಿಗೆ ಲಖನೌ ಕ್ರೀಡಾಂಗಣ ಆತಿಥ್ಯ ವಹಿಸಿತು. ಲೀಗ್‌ ಹಂತದ ಕೊನೆ 2 ಪಂದ್ಯ, ಎಲಿಮಿನೇಟರ್‌ ಹಾಗೂ ಫೈನಲ್‌ ಪಂದ್ಯ ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯಿತು.

ಮತ್ತೆ ಅಬ್ಬರಿಸಿದ ವಿದೇಶಿ ಕ್ರಿಕೆಟಿಗರು

ಟೂರ್ನಿಯಲ್ಲಿ ಮತ್ತೆ ವಿದೇಶಿ ಆಟಗಾರ್ತಿಯರೇ ಹೆಚ್ಚಿನ ಸದ್ದು ಮಾಡಿದರು. ಮುಂಬೈನ ನತಾಲಿ ಸ್ಕೀವರ್‌ ಬ್ರಂಟ್‌ 10 ಪಂದ್ಯಗಳಲ್ಲಿ ಬರೋಬ್ಬರಿ 523 ರನ್‌ ಕಲೆಹಾಕಿದರು. ಆರ್‌ಸಿಬಿ ಉತ್ತಮ ಪ್ರದರ್ಶನ ನೀಡದಿದ್ದರೂ ತಂಡದ ಪ್ರಮುಖ ಆಟಗಾರ್ತಿ ಎಲೈಸಿ ಪೆರ್ರಿ ಅಬ್ಬರಿಸಿದರು. ಅವರು 8 ಇನ್ನಿಂಗ್ಸ್‌ಗಳಲ್ಲಿ 372 ರನ್‌ ಗಳಿಸಿದರು. ಮುಂಬೈನ ಹೇಲಿ ಮ್ಯಾಥ್ಯೂಸ್‌ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ತಮ್ಮ ಕೈಚಳಕ ತೋರಿಸಿದರು. ಅವರು 10 ಪಂದ್ಯಗಳಲ್ಲಿ 307 ರನ್‌ ಗಳಿಸಿದ್ದಲ್ಲದೇ, 17 ವಿಕೆಟ್‌ಗಳನ್ನೂ ಕಬಳಿಸಿದರು. ಮುಂಬೈನ ಅಮೇಲಿ ಕೇರ್‌(16 ವಿಕೆಟ್‌), ಡೆಲ್ಲಿ ಕ್ಯಾಪಿಟಲ್ಸ್‌ನ ಜೆಸ್‌ ಜೊನಾಸನ್‌(13 ವಿಕೆಟ್‌) ಕೂಡಾ ಮಿಂಚಿದರು.

ಒಂದು ಆವೃತ್ತಿಯಲ್ಲಿ 500+, ಒಟ್ಟಾರೆ 1000 ರನ್‌ ಗಳಿಸಿದ ಸ್ಕೀವರ್‌

ಮುಂಬೈ ಆಟಗಾರ್ತಿ ಸ್ಕೀವರ್‌ ಬ್ರಂಟ್‌ ಡಬ್ಲ್ಯುಪಿಎಲ್‌ ಇತಿಹಾಸದಲ್ಲೇ ಸಾವಿರ ರನ್‌ ಪೂರ್ಣಗೊಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಅವರು 29 ಪಂದ್ಯಗಳಲ್ಲಿ 46.68ರ ಸರಾಸರಿಯಲ್ಲಿ 1027 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕ ಒಳಗೊಂಡಿವೆ. ಎಲೈಸಿ ಪೆರ್ರಿ (972 ರನ್‌) 2ನೇ ಸ್ಥಾನದಲ್ಲಿದ್ದಾರೆ. ಇನ್ನು, ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಸ್ಕೀವರ್‌ 10 ಪಂದ್ಯಗಳಲ್ಲಿ 523 ರನ್‌ ಗಳಿಸಿ, ಆವೃತ್ತಿಯೊಂದರಲ್ಲಿ 500+ ರನ್‌ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.