ಎವಿಯನ್-ಲೆಸ್-ಬೇನ್ಸ್ (ಫ್ರಾನ್ಸ್‌) : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸುದೀರ್ಘ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಮಾತುಗಳನ್ನು ಆಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಇರುವವರೆಗೂ ಭಾರತದ ಮೇಲೇನಾದರೂ ದಾಳಿ ಆದರೆ, ನಾವು ನೆರವಿಗೆ ಬರುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಜಿ7 ಶೃಂಗಸಭೆಗೆಂದು ಸದ್ಯ ಫ್ರಾನ್ಸ್‌ನಲ್ಲಿರುವ ಡೊನಾಲ್ಡ್‌ ಟ್ರಂಪ್‌, ಬುಧವಾರ ಇಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉಭಯ ದೇಶಗಳ ಸ್ನೇಹ ಸಂಬಂಧ ಸೇರಿದಂತೆ ಹಲವಾರು ಜಾಗತಿಕ ಸಂಬಂಧಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಅದ್ಭುತ

ಮಾತುಕತೆ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌, ‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಅದ್ಭುತವಾಗಿದೆ. ಇದು ಆರಂಭವಾಗುವುದು ನನ್ನ ಮತ್ತು ಪ್ರಧಾನಿ ಮೋದಿ ಅವರ ಬಹುಕಾಲದ ಸ್ನೇಹದಿಂದ. ಇನ್ನಷ್ಟು ಆಪ್ತವಾಗಲು ಸಾಧ್ಯವೇ ಇಲ್ಲದಷ್ಟು ನಾವಿಬ್ಬರು ಹತ್ತಿರವಾಗಿದ್ದೇವೆ’ ಎಂದು ಇಬ್ಬರ ನಡುವಿನ ಸ್ನೇಹ ಸಂಬಂಧದ ಬಗ್ಗೆ ಬೆಳಕು ಚೆಲ್ಲುವ ಯತ್ನ ಮಾಡಿದರು.


ಯಾವುದೇ ಅಧಿಕೃತ ರಕ್ಷಣಾ ಒಪ್ಪಂದಗಳು ಏರ್ಪಟ್ಟಿಲ್ಲ

ಇದೇ ವೇಳೆ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರ ಸಂಬಂಧ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ ವೇಳೆ, ‘ನಾವು ಭಾರತದೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದೇವೆ. ಆದರೆ ಭಾರತ ಮತ್ತು ಅಮೆರಿಕ ನಡುವೆ ಯಾವುದೇ ಅಧಿಕೃತ ರಕ್ಷಣಾ ಒಪ್ಪಂದಗಳು ಏರ್ಪಟ್ಟಿಲ್ಲ. ಆದರೆ ಒಂದು ವೇಳೆ ಮೋದಿಯವರು ಪ್ರಧಾನಿ ಹುದ್ದೆಯಲ್ಲಿ ಇರುವ ಹೊತ್ತಿನಲ್ಲಿ ಅವರ ದೇಶದ ಮೇಲೇನಾದರೂ ದಾಳಿ ಆದರೆ, ಅಮೆರಿಕ ಅವರ ನೆರವಿಗೆ ಧಾವಿಸುತ್ತದೆ. ಅವರನ್ನು ನಾವು ರಕ್ಷಣೆ ಮಾಡುತ್ತೇವೆ’ ಎಂದರು.

ಇದೇ ವೇಳೆ, ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಇರುವವರೆಗೂ, ಅಮೆರಿಕವು ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ. ಒಂದು ವೇಳೆ ಅವರ ಸ್ಥಾನಕ್ಕೆ ಬೇರೆ ಯಾರಾದರೂ ಬಂದರೆ ಆಗ ಪರಿಸ್ಥಿತಿ ಬದಲಾಗಬಹುದು ಎಂದು ನಗೆಚಟಾಕಿ ಹಾರಿಸಿದರು.