ವೆನಿಜುವೆಲಾದಲ್ಲಿ ಬುಧವಾರ ಸಂಜೆ 38 ಸೆಕುಂಡಿನ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 165 ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. 

ಕರಾಕಸ್‌: ವೆನಿಜುವೆಲಾದಲ್ಲಿ ಬುಧವಾರ ಸಂಜೆ 38 ಸೆಕುಂಡಿನ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 165 ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಸಾವಿನ ಪ್ರಮಾಣ 10 ಸಾವಿರದಿಂದ 1 ಲಕ್ಷದ ವರೆಗೂ ಇರಬಹುದು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಂದಾಜಿಸಿದೆ.

ಸ್ಥಳೀಯ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದ ಈ ಕಂಡು ಕೇಳರಿಯದ ಈ ಭಾರೀ ಭೂಕಂಪದಿಂದಾಗಿ ದೇಶಾದ್ಯಂತ ಸಾವಿರಾರು ಕಟ್ಟಡಗಳು ಧರಾಶಾಹಿಯಾಗಿದ್ದು, ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವವರ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಮನೆ, ಮಠ ಕಳೆದುಕೊಂಡಿರುವ ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವವರ ತಮ್ಮವರಿಗಾಗಿ ರಾತ್ರಿಯಿಡೀ ಹುಡುಕಾಟ ನಡೆಸುವ, ಗೋಳಿಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಭಾರೀ ಸಾವು-ನೋವಿನ ಆತಂಕ ಹಿನ್ನೆಲೆಯಲ್ಲಿ ವೆನಿಜುವೆಲಾದ ಪ್ರಭಾರಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಭೂಕಂಪದ ಬೆನ್ನಲ್ಲೇ ಸುನಾಮಿ ಮುನ್ನೆಚ್ಚರಿಕೆ ನೀಡಲಾಯಿತಾದರೂ ನಂತರ ಅದನ್ನು ಹಿಂಪಡೆಯಲಾಯಿತು.

20 ಬಾರಿ ಕಂಪನದ ಅನುಭವ:

ಕೆರೆಬಿಯನ್‌ ಕರಾವಳಿಯಲ್ಲಿ ರಿಕ್ಟರ್‌ ಮಾಪನದಲ್ಲಿ 7.2ರಷ್ಟು ತೀವ್ರತೆಯ ಮೊದಲ ಕಂಪನ ಸಂಭವಿಸಿದೆ. ಇದು ಭೂಮಿಯ 22 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಇದಾದ 38 ಸೆಕುಂಡುಗಳ ಅಂತರದಲ್ಲಿ ನೈಋತ್ಯ ಮೊರೋನ್‌ನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ 7.5 ತೀವ್ರತೆಯ 2ನೇ ಕಂಪನ ಸಂಭವಿಸಿದೆ. ಆ ಬಳಿಕ 20 ಬಾರಿ ಪಾಶ್ಚಾತ್‌ ಕಂಪನದ ಅನುಭವ ಆಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ 1,700 ಕಿ.ಮೀ.ದೂರದ ಬ್ರೆಜಿಲ್‌ನ ಅಮೆಜಾನ್‌ನಲ್ಲೂ ಕಟ್ಚಡಗಳು ನಡುಗಿವೆ. ವೆನಿಜುವೆಲಾ ರಾಜಧಾನಿ ಕರಾಕಸ್‌ನ ಮುಖ್ಯ ಏರ್‌ಪೋರ್ಟ್‌ ಬಂದ್‌ ಆಗಿದೆ. ಕಂಪನದ ಅನುಭವವಾಗುತ್ತಿಂತೆ ಜನ ಕಟ್ಟಡಗಳಿಂದ ಹೊರಗೋಡಿ ಬಂದಿದ್ದು, ನೋಡನೋಡುತ್ತಿದ್ದಂತೆ ಕಟ್ಟಡಗಳು ತರೆಗೆಲೆಗಳಂತೆ ಉರುಳಿ ಬಿದ್ದಿವೆ. ಆ ಭಯಾನಕ ದೃಶ್ಯಗಳಿಂದ ಜನ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಭೂಕಂಪದಿಂದಾಗಿ ರಾಜಧಾನಿ ಕರಾಕಸ್‌ನಲ್ಲಿ ವಿದ್ಯುತ್‌, ಮೊಬೈಲ್‌ ಸೇವೆಗಳು ಅಸ್ತವ್ಯಸ್ತಗೊಂಡಿದ್ದು, ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ರಾಜಧಾನಿಗೆ ಸಮೀಪದ ಕರಾವಳಿ ರಾಜ್ಯ ಲಾ ಗುರಿಯಾ ರಾಜ್ಯದಲ್ಲಿ ಹೆಚ್ಚಿನ ಹಾನಿ ಆಗಿದೆ ಎನ್ನಲಾಗಿದೆ.

ದೇಶದಲ್ಲಿ 1967ರ ಭೀಕರ ಭೂಕಂಪದಿಂದ ಪಾರಾಗಿದ್ದ ವ್ಯಕ್ತಿಯೊಬ್ಬರು ಈ ರೀತಿಯ ಒಂದರ ಹಿಂದೊಂದರಂತೆ ಭಾರೀ ಭೂಕಂಪ ಸಂಭವಿಸಿದ್ದು ಇದೇ ಮೊದಲು ಎಂದು ಹೇಳಿದರೆ, ಮತ್ತೊಬ್ಬರು ಹಾರರ್‌ ಸಿನಿಮಾದ ಮಾದರಿಯಲ್ಲಿ ಕಟ್ಟಡಗಳೆಲ್ಲ ತರಗೆಲೆಯಂತೆ ಕುಸಿದು ಬಿದ್ದವು ಎಂದು ಹೇಳಿಕೊಂಡಿದ್ದಾರೆ.

ದಶಕಗಳ ಬಳಿಕ ಭಾರೀ ಭೂಕಂಪ

ವೆನಿಜುವೆಲಾದಲ್ಲಿ 1997ರಲ್ಲಿ ಸಂಭವಿಸಿದ ಭೂಕಂಪದಲ್ಲಿ 73 ಮತ್ತು ಕರಾಕಸ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 236 ಮಂದಿ ಸಾವಿಗೀಡಾಗಿದ್ದಾರೆ. ಆ ಬಳಿಕ ಇಷ್ಟೊಂದು ಭೀಕರ ಭೂಕಂಪ ಸಂಭವಿಸಿರುವುದು ಇದೇ ಮೊದಲು.

ರಕ್ಷಣಾ ಕಾರ್ಯಾಚರಣೆಗೆ ನೆರವು

ಭೂಕಂಪದಿಂದುಂಟಾಗಿರುವ ಸಾವು-ನೋವಿಗೆ ಸಂಬಂಧಿಸಿ ತೀವ್ರ ಆಘಾತ ವ್ಯಕ್ತಪಡಿಸಿರುವ ಅಮೆರಿಕ, ಫ್ರಾನ್ಸ್‌, ಇಟಲಿ, ಜರ್ಮನಿ ಮತ್ತಿತರ ದೇಶಗಳು, ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ನೆರವು ಕಳುಹಿಸಿಕೊಟ್ಟಿವೆ.