ವಿದೇಶಿಗರು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಹೋಗಲು ಅಗತ್ಯವಾಗಿರುವ ಎಚ್‌1ಬಿ ವೀಸಾವನ್ನು ಹೊಸದಾಗಿ ಪಡೆಯಲು 95.5 ಲಕ್ಷ ರು. ಶುಲ್ಕ ಪಾವತಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಅಮೆರಿಕದ ಜಿಲ್ಲಾ ಕೋರ್ಟ್‌ ಕಾನೂನುಬಾಹಿರ ಎಂದಿದೆ

ವಾಷಿಂಗ್ಟನ್‌: ವಿದೇಶಿಗರು ಉದ್ಯೋಗಕ್ಕಾಗಿ ಅಮೆರಿಕಕ್ಕೆ ಹೋಗಲು ಅಗತ್ಯವಾಗಿರುವ ಎಚ್‌1ಬಿ ವೀಸಾವನ್ನು ಹೊಸದಾಗಿ ಪಡೆಯಲು 95.5 ಲಕ್ಷ ರು. ಶುಲ್ಕ ಪಾವತಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಅಮೆರಿಕದ ಜಿಲ್ಲಾ ಕೋರ್ಟ್‌ ಕಾನೂನುಬಾಹಿರ ಎಂದಿದ್ದು, ಅದನ್ನು ಅಮಾನ್ಯಗೊಳಿಸುವಂತೆ ಆದೇಶಿಸಿದೆ.

 4.7 ಲಕ್ಷ ರು.ನಿಂದ ಏಕಾಏಕಿ 95.5 ಲಕ್ಷ ರು.ಗೆ ಏರಿಸಿತ್ತು

ಅಮೆರಿಕಕ್ಕೆ ಉದ್ಯೋಗಕ್ಕೆಂದು ವಿದೇಶಿಗರು ಬರುವುದನ್ನು ತಡೆಯಲು ಟ್ರಂಪ್‌ ಸರ್ಕಾರ, ಎಚ್‌1ಬಿ ವೀಸಾದ ಶುಲ್ಕವನ್ನು ಕಳೆದ ಸೆಪ್ಟೆಂಬರ್‌ನಿಂದ 4.7 ಲಕ್ಷ ರು.ನಿಂದ ಏಕಾಏಕಿ 95.5 ಲಕ್ಷ ರು.ಗೆ ಏರಿಸಿತ್ತು. ಉದ್ಯೋಗವನ್ನರಸಿ ಅಲ್ಲಿಗೆ ಹೋಗುವವರಲ್ಲಿ ಬಹುಪಾಲು ಇರುವ ಭಾರತೀಯರಿಗೆ ಇದು ಹೊರೆಯಾಗಿತ್ತು.

ಡೆಮಾಕ್ರಟಿಕ್‌ ಪಕ್ಷದ 20 ಅಟಾರ್ನಿ ಜನರಲ್‌ಗಳು ಅರ್ಜಿ

ಅತ್ತ ಈ ಕ್ರಮವನ್ನು ಪ್ರಶ್ನಿಸಿ ಡೆಮಾಕ್ರಟಿಕ್‌ ಪಕ್ಷದ 20 ಅಟಾರ್ನಿ ಜನರಲ್‌ಗಳು ಅರ್ಜಿ ಸಲ್ಲಿಸಿದ್ದರು. ಟ್ರಂಪ್ ಆಡಳಿತವು ಕಾಂಗ್ರೆಸ್ ಅನುಮೋದನೆಯಿಲ್ಲದೆ ಶುಲ್ಕ ಹೆಚ್ಚಿಸುವ ಮೂಲಕ ತನ್ನ ಅಧಿಕಾರವನ್ನು ಮೀರಿ ವರ್ತಿಸುತ್ತಿದೆ. ಇದರಿಂದಾಗಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಹೆಚ್ಚು ಕೌಶಲ್ಯ ಬೇಡುವ ಹಾಗೂ ವಿದೇಶಿಗರನ್ನು ಅವಲಂಬಿಸಿರುವ ವೃತ್ತಿಗಳಲ್ಲಿ ಕಾರ್ಮಿಕ ಕೊರತೆ ಇನ್ನಷ್ಟು ಹೆಚ್ಚುತ್ತದೆ ಎಂದು ಅದರಲ್ಲಿ ವಾದಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್‌, ಹೆಚ್ಚುವರಿ ಶುಲ್ಕ ರದ್ದತಿಗೆ ಆದೇಶಿಸಿದೆ.