ಸಾರಾಂಶ
ಚೀನಾ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗದಾಪ್ರಹಾರ ನಡೆಸಿದ್ದಾರೆ. ತನ್ನ ಮೇಲೆ ಹೇರಿದ್ದ ಶೇ.34ರಷ್ಟು ತೆರಿಗೆ ಹಿಂಪಡೆಯಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಆ ದೇಶದ ಮೇಲೆ ಹೆಚ್ಚುವರಿ ಶೇ.50ರಷ್ಟು ತೆರಿಗೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ಧಾರೆ.
ಬೀಜಿಂಗ್: ವಿಶ್ವದ ವಿವಿಧ ದೇಶಗಳ ಮೇಲೆ ಅಮೆರಿಕದ ಪ್ರತಿತೆರಿಗೆ ಜಾರಿಗೆ ಮುನ್ನಾದಿನವಾದ ಮಂಗಳವಾರ ಚೀನಾ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗದಾಪ್ರಹಾರ ನಡೆಸಿದ್ದಾರೆ. ತನ್ನ ಮೇಲೆ ಹೇರಿದ್ದ ಶೇ.34ರಷ್ಟು ತೆರಿಗೆ ಹಿಂಪಡೆಯಲು ಚೀನಾ ನಿರಾಕರಿಸಿದ ಬೆನ್ನಲ್ಲೇ, ಆ ದೇಶದ ಮೇಲೆ ಹೆಚ್ಚುವರಿ ಶೇ.50ರಷ್ಟು ತೆರಿಗೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ಧಾರೆ. ಇದರೊಂದಿಗೆ ಚೀನಾದ ಮೇಲಿನ ಅಮೆರಿಕದ ತೆರಿಗೆ ಪ್ರಮಾಣ ಶೇ.104ಕ್ಕೆ ಏರಿದ್ದು ಅದು ಬುಧವಾರದಿಂದಲೇ ಜಾರಿಗೆ ಬರಲಿದೆ.
ಈ ನಡುವೆ ಅಮೆರಿಕದ ಶೇ.104ರಷ್ಟು ತೆರಿಗೆ ದಾಳಿಗೆ ಪ್ರತಿಯಾಗಿ ಹಾಲಿವುಡ್ ಸಿನೆಮಾಗಳನ್ನೇ ನಿಷೇಧಿಸುವ ಬಗ್ಗೆ ಚೀನಾ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ವಿಶ್ವದ ಟಾಪ್ 2 ಬಲಿಷ್ಠ ದೇಶಗಳ ತೆರಿಗೆ ಸಮರ ಮತ್ತಷ್ಟು ತೀವ್ರತೆ ಪಡೆದಂತಾಗಿದೆ.
ಮಹಾ ದಾಳಿ:
ಚೀನಾ ಮೇಲೆ ಅಮೆರಿಕ ಮೊದಲು ಶೇ.20 ತೆರಿಗೆ ಹೇರಿತ್ತು. ಜೊತೆಗೆ ಏ.2ರಂದು ಟ್ರಂಪ್ ಮತ್ತೆ ಶೇ.34 ತೆರಿಗೆ ಘೋಷಿಸಿದ್ದರು. ಬಳಿಕ ಚೀನಾ ಕೂಡ ಅಮೆರಿಕದ ಮೇಲೆ ಶೇ.34 ಪ್ರತಿತೆರಿಗೆ ಘೋಷಿಸಿತ್ತು. ಇದೇ ಕೋಪದಲ್ಲಿ ಈಗ ಟ್ರಂಪ್ ಶೇ.50 ಹೆಚ್ಚುವರಿ ತೆರಿಗೆ ಪ್ರಕಟಿಸಿದ್ದಾರೆ. ಇದನ್ನು ಮಂಗಳವಾರ ರಾತ್ರಿ ಶ್ವೇತಭವನ ದೃಢಪಡಿಸಿದೆ. ಇದರಿಂದ ಚೀನಾ ಮೇಲೆ ಅಮೆರಿಕ ಶೇ.104 ತೆರಿಗೆ ಹೇರಿದಂತಾಗಿದೆ.
ಹಾಲಿವುಡ್ ಸಿನೆಮಾಗೆ ನಿರ್ಬಂಧ:
ಈ ನಡುವೆ ಟ್ರಂಪ್ ಹಾಕಿದ್ದ ಬೆದರಿಕೆಗೆ ಮಂಗಳವಾರ ಬೆಳಗ್ಗೆ ತಿರುಗೇಟು ನೀಡಿದ್ದ ಕ್ಸಿ ಜಿನ್‌ಪಿಂಗ್ ಸರ್ಕಾರ, ‘ಇಂಥ ತಳಬುಡವಿಲ್ಲದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಇದು ಕೇವಲ ಬ್ಲ್ಯಾಕ್‌ಮೇಲ್ ತಂತ್ರ. ಕೊನೆಯವರೆಗೆ ನಾವು ಇದರ ವಿರುದ್ಧ ಹೋರಾಡುತ್ತೇವೆ’ ಎಂದಿತ್ತು. ಇದಕ್ಕೆ ಜಗ್ಗದೇ ಟ್ರಂಪ್ ಶೇ.50 ಹೆಚ್ಚುವರಿ ತೆರಿಗೆ ಘೋಷಿಸಿರುವ ಕಾರಣ, ಚೀನಾ ಹಾಲಿವುಡ್ ಚಿತ್ರಗಳ ಮೇಲೆ ನಿರ್ಬಂಧ ಹೇರುವ ಸಂಭವವಿದೆ ಎಂದು ವರದಿಯಾಗಿದೆ.