ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಇನ್ನು ಸಂಪೂರ್ಣ ಶಾಂತಿ

| Published : Oct 26 2024, 01:05 AM IST / Updated: Oct 26 2024, 04:49 AM IST

ಸಾರಾಂಶ

ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಎರಡೂ ದೇಶಗಳು ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ.

ಲೇಹ್‌: ಭಾರತ ಹಾಗೂ ಚೀನಾ ನಡುವಿನ ಪೂರ್ವ ಲಡಾಖ್‌ ಪ್ರದೇಶದ ಗಡಿಯಲ್ಲಿ ಎರಡೂ ದೇಶಗಳು ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ಶುಕ್ರವಾರದಷ್ಟೊತ್ತಿಗೆ ಅರ್ಧ ಹಿಂತೆಗೆತ ಮುಗಿದಿದ್ದು ಅ.28-29ರವೇಳೆಗೆ ಹಿಂತೆಗೆತ ಸಂಪೂರ್ಣ ಹಿಂತೆಗೆತ ಆಗಲಿದೆ. ಇದರೊಂದಿಗೆ 2020ರ ಗಲ್ವಾನ್ ಸಂಘರ್ಷಕ್ಕಿಂತ ಮುಂಚೆ ಇದ್ದ ಶಾಂತ ಸ್ಥಿತಿ ಗಡಿಯಲ್ಲಿ ನೆಲೆಸಲಿದೆ.

ರಷ್ಯಾದಲ್ಲಿ ನಡೆದ ಬ್ರಿಕ್ಸ್‌ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಭೇಟಿ ಹಾಗೂ ಅದಕ್ಕೂ ಮುನ್ನ ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದಂತೆ ಸೇನೆ ಹಿಂಪಡೆತ ಪ್ರಕ್ರಿಯೆ ಆರಂಭವಾಗಿದೆ.

2020ರಲ್ಲಿ ಲಡಾಖ್‌ನ ಗಲ್ವಾನ್‌ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಭೀಕರ ಸಂಘರ್ಷ ನಡೆದಿತ್ತು. ಬಳಿಕ ಒಟ್ಟು 7 ಗಡಿಭಾಗದಲ್ಲಿ ಸಂಘರ್ಷ ಏರ್ಪಟ್ಟಿತ್ತು. ನಂತರ ಮಾತುಕತೆ ಬಳಿಕ 5 ಗಡಿಗಳಲ್ಲಿ ಚೀನಾ ಸೇನೆಯ ವಾಪಸಾತಿ ಆಗಿತ್ತು. ಆದರೆ ಡೆಮ್ಚೋಕ್‌, ಡೆಸ್ಪಾಂಗ್‌ನಿಂದ ಚೀನಾ ಸೇನೆ ಹಿಂಪಡೆದಿರಲಿಲ್ಲ. ಈಗ ಇತ್ತೀಚಿನ ಒಪ್ಪಂದದ ಪ್ರಕಾರ, ಎರಡೂ ಕಡೆ ಸೇನಾ ವಾಪಸಾತಿ ಆರಂಭವಾಗಿದೆ. ಈ ಪ್ರಕ್ರಿಯೆ 3-4 ದಿನ ನಡೆಯಲಿದ್ದು ಅಕ್ಟೋಬರ್‌ ಅಂತ್ಯಕ್ಕೆ (ಅ.28-29ರ ವೇಳೆಗೆ) ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಸೇನೆ ಹಿಂಪಡೆಯಲಿವೆ. ಬಳಿಕ ಈ ಪ್ರದೇಶಗಳಲ್ಲಿ ಇತ್ತೀಚಿನ ಒಪ್ಪಂದದ ಅನುಸಾರ ಜಂಟಿ ಪಹರೆ ಆರಂಭಿಸಲಿವೆ ಎಂದು ಮೂಲಗಳು ಹೇಳಿವೆ.

ತಾತ್ಕಾಲಿಕ ಟೆಂಟ್‌ ತೆರವು:

ಹಿಂತೆಗೆತದ ಭಾಗವಾಗಿ ಡೆಪ್ಸಾಂಗ್‌ ಮತ್ತು ಡೆಮ್ಚೋಕ್‌ ಪ್ರದೇಶಗಳಲ್ಲಿ ಎರಡೂ ದೇಶಗಳು ನಿರ್ಮಿಸಿಕೊಂಡಿದ್ದ ಕೆಲ ತಾತ್ಕಾಲಿಕ ಟೆಂಟ್‌ಗಳನ್ನು ಶುಕ್ರವಾರ ತೆರವುಗೊಳಿಸಲಾಗಿದೆ. ಬಹುತೇಕ ಶೇ.60ರಷ್ಟು ಟೆಂಟ್‌ಗಳ ತೆರವು ಪೂರ್ಣಗೊಂಡಿದೆ.

2 ವರ್ಷಗಳ ಹಿಂದೆ ಭಾರತ ಮತ್ತು ಚೀನಾ ಮಿಲಿಟರಿಗಳು ಇಲ್ಲಿ ಬಫರ್‌ ಜೋನ್‌ಗಳನ್ನು ಗುರುತಿಸಿಕೊಂಡಿದ್ದವು. ಆ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದವು. ಈಗ ಅವುಗಳನ್ನು ತೆರವುಗೊಳಿಸಿ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಸ್ಥಳೀಯ ಕಮಾಂಡರ್‌ಗಳು ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟೆಂಟ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಿದ ಬಳಿಕ ಎರಡೂ ದೇಶಗಳು ಭೂ ಮತ್ತು ವಾಯುಮಾರ್ಗದಲ್ಲಿ ಜಂಟಿ ತಪಾಸಣೆ ನಡೆಸಲಿವೆ. ಬಳಿಕ ಪಹರೆ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ+.