ಸಾರಾಂಶ
ಲಿಯೋನಾರ್ಡೋ ಡಾವಿಂಚಿ ರಚಿಸಿದ ವಿಶ್ವಪ್ರಸಿದ್ಧ ಮೊನಾಲಿಸಾ ವರ್ಣಚಿತ್ರವನ್ನು ಒಳಗೊಂಡಿರುವ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಜಗತ್ಪ್ರಸಿದ್ಧ ಲೂವ್ ವಸ್ತುಸಂಗ್ರಹಾಲಯದaಲ್ಲಿ ಭಾನುವಾರ ಸಿನಿಮೀಯ ದರೋಡೆ ನಡೆದಿದೆ.
ಪ್ಯಾರಿಸ್ : ಲಿಯೋನಾರ್ಡೋ ಡಾವಿಂಚಿ ರಚಿಸಿದ ವಿಶ್ವಪ್ರಸಿದ್ಧ ಮೊನಾಲಿಸಾ ವರ್ಣಚಿತ್ರವನ್ನು ಒಳಗೊಂಡಿರುವ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಜಗತ್ಪ್ರಸಿದ್ಧ ಲೂವ್ ವಸ್ತುಸಂಗ್ರಹಾಲಯದಲ್ಲಿ ಭಾನುವಾರ ಸಿನಿಮೀಯ ದರೋಡೆ ನಡೆದಿದೆ. ಕೇವಲ 7 ನಿಮಿಷಗಳ ಅವಧಿಯಲ್ಲಿ ನಡೆದ ಈ ದುಷ್ಕೃತ್ಯದಲ್ಲಿ ನೆಪೋಲಿಯನ್ ಕಾಲದ ಸಾವಿರಾರು ಕೋಟಿ ರು. ಮೌಲ್ಯ ಹೊಂದಿರುವ 9 ಅಮೂಲ್ಯ ಆಭರಣ ಸಂಗ್ರಹಗಳನ್ನು ಗುಂಪೊಂದು ಕಳ್ಳತನ ಮಾಡಿ ಪರಾರಿಯಾಗಿದೆ. ಫ್ರಾನ್ಸ್ ಸರ್ಕಾರ ಇದನ್ನು ‘ಗ್ರೇಟ್ ರಾಬರಿ’ ಎಂದು ಕರೆದಿದೆ.ಹಾಲಿವುಡ್ ಸಿನೆಮಾ ನೆನಪಿಸುವ ಈ ಘಟನೆ ಬೆನ್ನಲ್ಲೇ, ಭಾನುವಾರ ಪ್ರವಾಸಿಗರಿಗೆ ಮ್ಯೂಸಿಯಂ ಪ್ರವೇಶ ನಿರಾಕರಿಸಿಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಏನಾಯ್ತು?:
ಮುಖಕ್ಕೆ ಮಾಸ್ಕ್ ಧರಿಸಿದ್ದ ಗುಂಪೊಂದು ಹೈಡ್ರಾಲಿಕ್ ಕಟರ್‌ಗಳೊಂದಿಗೆ ಭಾನುವಾರ ಬೆಳಗ್ಗೆ 9.30ರ ವೇಳೆಗೆ ಸ್ಕೂಟರ್‌ನಲ್ಲಿ ಮ್ಯೂಸಿಯಂ ಬಳಿ ಆಗಮಿಸಿದೆ. ಬಳಿಕ ಮ್ಯೂಸಿಯಂನ ಕಟ್ಟಡದ ಗೋಡೆಯೊಂದರ ಬಳಿ ಮೊದಲೇ ತಂದು ನಿಲ್ಲಿಸಿದ್ದ ಹೈಡ್ರಾಲಿಕ್ ಏಣಿ ಬಳಸಿ ಮ್ಯೂಸಿಯಂನ ಮೇಲೇರಿದೆ. ಹೀಗೆ ಮೇಲೆ ಏರಿದ ತಂಡ ಕಟರ್ ಬಳಸಿ ಗ್ಲಾಸ್‌ನ ಗೋಡೆ ಕತ್ತರಿಸಿದೆ. ಬಳಿಕ ಮ್ಯೂಸಿಯಂನ ಒಳಗೆ ಪ್ರವೇಶಿಸಿದ ತಂಡ ನೆಪೋಲಿಯನ್ ಆಭರಣಗಳ ಸಂಗ್ರಹದಿಂದ 9 ತುಂಡುಗಳನ್ನು ಕಳವು ಮಾಡಿ ಪರಾರಿಯಾಗಿದೆ. ಇದಿಷ್ಟೂ ಘಟನೆ ಕೇವಲ 7 ನಿಮಿಷಗಳಲ್ಲಿ ಮುಗಿದು ಹೋಗಿದೆ.
ಘಟನೆ ಬಳಿಕ ದರೋಡೆಕೋರರ ತಂಡ ಕಟರ್, ಏಣಿ ಬಿಟ್ಟು ಪರಾರಿಯಾಗಿದ್ದು, ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಮ್ಯೂಸಿಯಂ ಅನ್ನು ಬಂದ್ ಮಾಡಲಾಗಿದೆ. ಡಕಾಯಿತಿ ವೇಳೆ ಯಾರಿಗೂ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ತನಿಖೆ ನಡೆಯುತ್ತಿದೆ’ ಎಂದು ಸಂಸ್ಕೃತಿ ಸಚಿವೆ ರಚಿದಾ ದತಿ ತಿಳಿಸಿದ್ದಾರೆ.
ಕಳವು ಮಾಡಲಾದ ವಸ್ತುಗಳ ಪೈಕಿ ಫ್ರೆಂಚ್ ರಾಣಿ ಯುಜೀನ್‌ಗೆ ಸೇರಿದ 850 ಕೋಟಿ ರು. ಮೌಲ್ಯದ ಕಿರೀಟ ಸೇರಿತ್ತಾದರೂ, ಅದನ್ನು ಅವಸರದಲ್ಲಿ ದರೋಡೆಕೋರರು ಮ್ಯೂಸಿಯಂ ಹೊರಗೇ ಬೀಳಿಸಿ ಹೋಗಿದ್ದಾರೆ. ಅದನ್ನು ಭದ್ರತಾ ಸಿಬ್ಬಂದಿ ಮರಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಿತ್ಯ 30000 ಜನ ಭೇಟಿ:
ಲೂವ್ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ವಸ್ತು ಸಂಗ್ರಹಾಲಯವಾಗಿದ್ದು, ಪ್ರತಿನಿತ್ಯ ಕನಿಷ್ಠ 25,000 ವೀಕ್ಷಕರು ಭೇಟಿ ನೀಡುತ್ತಾರೆ. ಮೆಸೊಪೊಟೋಮಿಯಾ, ಈಜಿಪ್ಟ್ ಕಾಲದ ಸುಮಾರು 33,000 ಪ್ರಾಚೀನ ವಸ್ತುಗಳು, ಶಿಲ್ಪ ಮತ್ತು ಚಿತ್ರಕಲೆಗಳು ಇಲ್ಲಿವೆ. ಲಿಯೋನಾರ್ಡೋ ಡಾವಿಂಚಿ ರಚಿಸಿದ ಮೊನಾಲಿಸಾ ವರ್ಣಚಿತ್ರ ಮತ್ತು ವೀನಸ್ ಡಿ ಮಿಲೋ, ಸಮೋತ್ರೇಸ್‌ನ ವಿಜಯದ ಚಿತ್ರಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.
ಕಳವು ಇದೇ ಮೊದಲಲ್ಲ:
ಲೂವ್‌ನಲ್ಲಿ ಕಳ್ಳತನ ನಡೆಯುತ್ತಿರುವುದು ಇದೇ ಮೊದಲೇನಲ್ಲ. 1911ರ ಆ.21ರಂದು ಮ್ಯೂಸಿಯಂನ ಕಾರ್ಮಿಕನೊಬ್ಬ ಮೊನಾಲಿಸಾ ಚಿತ್ರವನ್ನು ಅಪಹರಿಸಿದ್ದ. ಬಳಿಕ ಆತನಿಂದ ವಶಪಡಿಸಿಕೊಳ್ಳಲಾಗಿತ್ತು. 1956ರಲ್ಲಿಯೂ ಮೊನಾಲಿಸಾ ಮೇಲೆ 2 ಬಾರಿ ದಾಳಿಗಳು ನಡೆದಿವೆ. ಒಬ್ಬ ಬ್ಲೇಡ್‌ನಿಂದ ಚಿತ್ರಕ್ಕೆ ಹಾನಿಯೆಸಗಿದರೆ, ಮತ್ತೊಬ್ಬ ಕಲ್ಲೆಸೆದಿದ್ದ. 2ನೇ ಮಹಾಯುದ್ಧದ ವೇಳೆ ಫ್ರಾನ್ಸ್ ಅನ್ನು ಜರ್ಮನಿ ಆಕ್ರಮಿಸಿತ್ತು. ಆಗ ನಾಝಿಗಳು ಇಲ್ಲಿನ ಅನೇಕ ಕಲಾಕೃತಿಗಳನ್ನು ಲೂಟಿ ಮಾಡಿದ್ದಾರೆ. ಇದರ ಹೊರತಾಗಿಯೂ ಆಗಾಗ ಕಳುವಿನ ಯತ್ನಗಳು ನಡೆಯುತ್ತಲೇ ಇವೆ.
ಪ್ಯಾರಿಸ್‌ನ ಲೂವ್ ವಸ್ತು ಸಂಗ್ರಹಾಲಯ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧವಾದುದು. ನಿತ್ಯ ಇಲ್ಲಿಗೆ ಕನಿಷ್ಠ 25000 ಜನ ಭೇಟಿ ನೀಡುತ್ತಾರೆ
ಮೆಸೊಪೊಟೋಮಿಯಾ, ಈಜಿಪ್ಟ್ ಕಾಲ ಪ್ರಾಚೀನ ವಸ್ತುಗಳು, ಶಿಲ್ಪ, ಚಿತ್ರಕಲೆ, ಡಾವಿಂಚಿಯ ಮೊನಾಲಿಸಾ ವರ್ಣಚಿತ್ರ ಇಲ್ಲಿಯ ವಿಶೇಷ
ಭಾನುವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಬಂದ ಗುಂಪೊಂದು ಮ್ಯೂಸಿಯಂ ಗಾಜಿನ ಗೋಡೆ ಕತ್ತರಿಸಿ ಅದರೊಳಗಿದ್ದ 9 ವಸ್ತು ಲೂಟಿ ಮಾಡಿದೆ
ಈ ಪೈಕಿ ಫ್ರೆಂಚ್ ರಾಣಿ ಯುಜಿನ್‌ಗೆ ಸೇರಿದ 850 ಕೋಟಿ ರು. ಮೌಲ್ಯದ ಅಪರೂಪದ ಕಿರೀಟವನ್ನು ಮ್ಯೂಸಿಯಂ ಹೊರಗೆ ಬೀಳಿಸಿ ಹೋಗಿದೆ
ಉಳಿದಂತೆ ಕಳ್ಳತನ ಮಾಡಲಾದ ನೆಪೋಲಿಯನ್‌ಗೆ ಸೇರಿದ 9 ವಸ್ತುಗಳಿಗೆ ಮೌಲ್ಯವನ್ನೇ ಕಟ್ಟಲಾಗದು. ಅಷ್ಟು ಅಪರೂಪದ್ದು ಎನ್ನಲಾಗಿದೆ