‘ಪಾಕಿಸ್ತಾನದ ಅಂದಿನ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್‌ ಅವರನ್ನು ನಾವು (ಅಮೆರಿಕ) ಅಕ್ಷರಶಃ ಕೊಂಡು ಕೊಂಡಿದ್ದೆವು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮಾಜಿ ಅಧಿಕಾರಿ ಜಾನ್‌ ಕಿರಿಯಾಕು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಾಷಿಂಗ್ಟನ್‌ : ‘ಪಾಕಿಸ್ತಾನದ ಅಂದಿನ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್‌ ಅವರನ್ನು ನಾವು (ಅಮೆರಿಕ) ಅಕ್ಷರಶಃ ಕೊಂಡು ಕೊಂಡಿದ್ದೆವು. ನಾವು ಆರ್ಥಿಕ ಅಭಿವೃದ್ಧಿ ಹಾಗೂ ಮಿಲಿಟರಿ ನೆರವಿನ ರೂಪದಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೆವು. ಇದರಿಂದ ಸಂತಸಗೊಂಡ ಅವರು ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದರು’ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮಾಜಿ ಅಧಿಕಾರಿ ಜಾನ್‌ ಕಿರಿಯಾಕು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಮುಷರ್ರಫ್‌ ಅವರ ಕಾಲಾವಧಿಯಲ್ಲಿ ಪಾಕ್‌ ಜತೆಗಿನ ಅಮೆರಿಕದ ಸಂಬಂಧ ಚೆನ್ನಾಗಿತ್ತು. ಹಾಗೆ ನೋಡಿದರೆ ಅಮೆರಿಕ ಯಾವತ್ತಿಗೂ ನಿರಂಕುಶವಾದಿಗಳನ್ನು ಇಷ್ಟಪಡುತ್ತದೆ. ಏಕೆಂದರೆ ಅಂಥವರ ಆಡಳಿತದಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕಾಗಲಿ, ಮಾಧ್ಯಮಗಳ ಕುರಿತಾಗಲಿ ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಅಂಥವರ ನಿರ್ಣಯ ಅಂತಿಮ ಆಗಿರುವ ಕಾರಣ ಅಮೆರಿಕ ಸುಲಭವಾಗಿ ಡೀಲ್‌ ಮಾಡುತ್ತದೆ’ ಎಂದರು.

‘ನಾವು ನಿಯಮಿತವಾಗಿ ಮುಷರ್ರಫ್‌ ಅವರನ್ನು ಭೇಟಿಯಾಗುತ್ತಿದ್ದೆವು

‘ನಾವು ನಿಯಮಿತವಾಗಿ ಮುಷರ್ರಫ್‌ ಅವರನ್ನು ಭೇಟಿಯಾಗುತ್ತಿದ್ದೆವು. ಪಾಕ್‌ನಿಂದ ಏನಾದರೂ ನೀವು ತೆಗೆದುಕೊಳ್ಳಿ. ಆದರೆ ನಮ್ಮ ಸೇನೆಯನ್ನು ಸಂತೋಷವಾಗಿಡಿ ಎಂದು ಅವರು ಬೇಡಿಕೆ ಇರಿಸಿದ್ದರು. ಹೀಗಾಗಿ ಪಾಕ್‌ ಸೇನೆಗೆ ಯಥೇಚ್ಛ ನೆರವು ನೀಡಿದೆವು. ಅದಕ್ಕೆ ಪ್ರತಿಯಾಗಿ ಪಾಕ್‌ ಅಣ್ವಸ್ತ್ರ ಶಸ್ತ್ರಾಗಾರವನ್ನು ನಮ್ಮ ವಶಕ್ಕೆ ತೆಗೆದುಕೊಂಡಿದ್ದೆವು’ ಎಂದು ಜಾನ್‌ ಮೆಲುಕು ಹಾಕಿದರು.

‘ಪಾಕಿಸ್ತಾನದ ಮಿಲಿಟರಿ ಯಾವತ್ತಿಗೂ ಅಲ್‌ಖೈದಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಅವರಿಗೇನಿದ್ದರೂ ಭಾರತದ ಬಗ್ಗೆಯಷ್ಟೇ ಚಿಂತೆ. ಹೀಗಾಗಿ ಸೇನೆ ಹಾಗೂ ಉಗ್ರರನ್ನು ಮುಷರ್ರಫ್‌ ಸಂತುಷ್ಟವಾಗಿರಿಸಲು ಯತ್ನಿಸುತ್ತಿದ್ದರು’ ಎಂದೂ ಅವರು ಹೇಳಿದರು.

ಭಾರತದ ವಿರುದ್ಧ ಪಾಕ್ ಗೆಲ್ಲಲಾಗದು: 

ಅ ಮೆರಿಕ ಅಧಿಕಾರಿನವದೆಹಲಿ: ಪಾಕಿಸ್ತಾನ ಯಾವತ್ತಿಗೂ ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ. ಭಾರತದ ಜತೆಗಿನ ಯುದ್ಧದಿಂದ ಏನೂ ಲಾಭ ಆಗುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ಅಧಿಕಾರಿ ಜಾನ್‌ ಕಿರಿಯಾಕು ತಿಳಿಸಿದ್ದಾರೆ.‘ಭಾರತದ ಜತೆಗಿನ ಯುದ್ಧದಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭ ಆಗುವುದಿಲ್ಲ. ಯಾಕೆಂದರೆ ಪಾಕಿಸ್ತಾನ ಆ ಯುದ್ಧದಲ್ಲಿ ಸೋಲುವುದು ನಿಶ್ಚಿತ. ಇದು ಸರಳ ಸತ್ಯ. ನಾನು ಅಣ್ವಸ್ತ್ರಗಳ ಕುರಿತು ಮಾತನಾಡುತ್ತಿಲ್ಲ. ಕೇವಲ ಸಾಂಪ್ರದಾಯಿಕ ಯುದ್ಧದ ಕುರಿತಷ್ಟೇ ಹೇಳುತ್ತಿದ್ದೇನೆ. ಭಾರತವನ್ನು ಕೆರಳಿಸುವುದರಿಂದ ಪಾಕಿಸ್ತಾನದ ಹಿತಾಸಕ್ತಿಗೇ ಹಾನಿ ಎಂದು ನಿರ್ಧರಿಸುವ ನೀತಿ ಪಾಕಿಸ್ತಾನದಲ್ಲಿ ಬರಬೇಕು ಎಂದು ಅವರು ಹೇಳಿದ್ದಾರೆ.