ಆರ್ಥಿಕವಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯಿಂದ ಸಾಲಕ್ಕೆ ಕೈಚಾಚಿದ್ದ ಪಾಕಿಸ್ತಾನ, ಇದೀಗ ಅದೇ ಐಎಂಎಫ್‌ನ ಷರತ್ತಿನಂತೆ ತನ್ನ ಒಡೆತನದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಅನ್ನೇ ಮಾರಲು ಮುಂದಾಗಿದೆ.

- 23ಕ್ಕೆ ಪಾಕ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಹರಾಜು- ಅರ್ಧದಷ್ಟು ವಿಮಾನ ಹಾರಲ್ಲ, 30% ಪೈಲಟ್‌ಗಳು ನಕಲಿ

---

- ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ 62 ಸಾವಿರ ಕೋಟಿ ರು. ಸಾಲ ಕೊಡಲು ಐಎಂಎಫ್‌ ಅಸ್ತು- ಆದರೆ ನಷ್ಟದಲ್ಲಿರುವ ವಿಮಾನಯಾನ ಕಂಪನಿ ಮಾರಾಟ ಮಾಡುವುದು ಸೇರಿ ಹಲವು ಷರತ್ತು ಹೇರಿಕೆ- ಹೀಗಾಗಿ ಏರ್‌ಲೈನ್ಸ್‌ ಕಂಪನಿ ಮಾರಲು ಮುಂದಾದ ಪಾಕ್‌ ಸರ್ಕಾರ. 2 ದಶಕದಲ್ಲಿ ಮೊದಲ ಖಾಸಗೀಕರಣ- ವಿಮಾನಯಾನ ಕಂಪನಿಯಲ್ಲಿ ಒಟ್ಟು 33 ವಿಮಾನ ಇವೆ. ಆ ಪೈಕಿ 17 ಹಾರಾಡಲು ಆಗದ ಸ್ಥಿತಿಯಲ್ಲಿವೆ- ಕಂಪನಿಯಲ್ಲಿರುವ 30% ಪೈಲಟ್‌ಗಳು ನಕಲಿ ಲೈಸೆನ್ಸ್‌ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ

--ಇಸ್ಲಾಮಾಬಾದ್‌: ಆರ್ಥಿಕವಾಗಿ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯಿಂದ ಸಾಲಕ್ಕೆ ಕೈಚಾಚಿದ್ದ ಪಾಕಿಸ್ತಾನ, ಇದೀಗ ಅದೇ ಐಎಂಎಫ್‌ನ ಷರತ್ತಿನಂತೆ ತನ್ನ ಒಡೆತನದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಅನ್ನೇ ಮಾರಲು ಮುಂದಾಗಿದೆ.

ಕಳೆದ ವರ್ಷ ಪಾಕ್‌ಗೆ ಐಎಂಎಫ್‌ 62 ಸಾವಿರ ಕೋಟಿ ರು. (7 ಶತಕೋಟಿ ಡಾಲರ್‌) ಸಾಲದ ಘೋಷಣೆ ಮಾಡಿತ್ತು. ಆದರೆ ಅದಕ್ಕೆ ಕೆಲವೊಂದು ಷರತ್ತು ವಿಧಿಸಿತ್ತು. ಅದರಲ್ಲಿ ಭಾರೀ ನಷ್ಟದಲ್ಲಿರುವ ಪಿಐಎ ಮಾರಾಟ, ಪೆಟ್ರೋಲಿಯಂ, ಇಂಧನ, ವಿದ್ಯುತ್‌ ಬೆಲೆ ಏರಿಕೆ, ಅಧಿಕಾರಿಗಳ ವೆಚ್ಚ ಕಡಿತ ಮೊದಲಾದ ಅಂಶಗಳು ಕೂಡ ಸೇರಿದ್ದವು. ಅದರಂತೆ ಇದೀಗ ಡಿ.23ರಂದು ಪಿಐಎ ಹರಾಜಿಗೆ ನಿರ್ಧರಿಸಲಾಗಿದೆ. ಇದು ಕಳೆದ 2 ದಶಕದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ಖಾಸಗೀಕರಣವಾಗಿದೆ.

ಪಿಐಎ ಖರೀದಿಗೆ ಮಿಲಿಟರಿಯೇ ಬಹುಪಾಲು ಪಾಲು ಷೇರು ಹೊಂದಿರುವ ಫೌಜಿ ಫರ್ಟಿಲೈಸರ್ ಸೇರಿ 4 ಕಂಪನಿಗಳು ಮುಂದೆ ಬಂದಿವೆ.

ಪಿಎಐ ಬಳಿ ಇರುವ 33 ವಿಮಾನಗಳ ಪೈಕಿ 17 ಹಾರಲು ಆಗದ ಸ್ಥಿತಿಯಲ್ಲಿವೆ. ಜೊತೆಗೆ ಸಂಸ್ಥೆಯ ಶೇ.30ರಷ್ಟು ಪೈಲಟ್‌ಗಳು ನಕಲಿ ಲೈಸೆನ್ಸ್‌ ಹೊಂದಿದ್ದಾರೆ ಎಂಬ ಆರೋಪ ಕೂಡ ಇದೆ. ಐಎಂಎಫ್‌ನಿಂದ ಅತಿ ಹೆಚ್ಚು ಸಾಲ ಪಡೆದ ದೇಶಗಳ ಪೈಕಿ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.