ಸಾರಾಂಶ
ಇಸ್ಲಾಮಾಬಾದ್: ಲಷ್ಕರ್ ಉಗ್ರ ಅಬು ಖತಲ್, ಅನಾಮಿಕರ ಗುಂಡಿನ ದಾಳಿಗೆ ಬಲಿಯಾದ ಬೆನ್ನಲ್ಲೇ, 26/11 ಮುಂಬೈ ದಾಳಿ ರೂವಾರಿ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಭಾರತಕ್ಕೆ ಬೇಕಾದ ಪಾಕಿಸ್ತಾನ ಮೂಲದ ಉಗ್ರರಿಗೆ ಇದೀಗ ಪ್ರಾಣಭೀತಿ ಹೆಚ್ಚಾಗಿದೆ.
ಅದರ ಬೆನ್ನಲ್ಲೇ ಹಫೀಜ್ ಸೇರಿದಂತೆ ಭಾರತದಲ್ಲಿ ನಡೆದ ವಿವಿಧ ಭಯೋತ್ಪಾದನಾ ಚಟುವಟಿಕೆಗೆ ಕಾರಣರಾದ ಉಗ್ರರ ಭದ್ರತೆಯನ್ನು ಪಾಕಿಸ್ತಾನ ಹೆಚ್ಚಿಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ. ಭಾರತಕ್ಕೆ ಬೇಕಾಗಿದ್ದ 25ಕ್ಕೂ ಹೆಚ್ಚು ಉಗ್ರರು ಕಳೆದ 2 ವರ್ಷಗಳ ಅವಧಿಯಲ್ಲಿ ನಿಗೂಢವಾಗಿ ಅನಾಮಿಕ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಹಲವು ಭಯೋತ್ಪಾದಕರನ್ನು ಪಾಕಿಸ್ತಾನ ವಿವಿಧ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಭಯೋತ್ಪಾದಕರ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದೆ ಎಂದು ವರದಿಯಾಗಿದೆ.
ಸಯೀದ್ ಮುಂದಿನ ಗುರಿ?:
ಈ ನಡುವೆ ಭಾರತದಲ್ಲಿ ನಡೆದ ಹಲವು ಭಯೋತ್ಪಾದನಾ ಕೃತ್ಯಗಳ ರೂವಾರಿಯಾದ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್, ಅನಾಮಿಕ ದಾಳಿಕೋರರ ಮುಂದಿನ ಗುರಿಯಾಗಿರಬಹುದು ಎಂದು ರಕ್ಷಣಾ ಮತ್ತು ವಿದೇಶಾಂಗ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ತಜ್ಞ ರೊಬಿಂದರ್ ಸಚ್‌ದೇವ್, ‘ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಅತ್ಯಾಪ್ತ ಖತಲ್‌ನನ್ನು ಅಪರಿಚಿತರು ಹತ್ಯೆ ಮಾಡಿದ್ದಾರೆ. ಇದರರ್ಥ ಉಗ್ರರ ಬೆನ್ನು ಹತ್ತಿರುವವರು ತಮ್ಮ ಗುರಿಗೆ ಹತ್ತಿರದಲ್ಲಿದ್ದಾರೆ. ಯಾರು ಖಡ್ಗದಿಂದ ಬದುಕುತ್ತಾರೋ, ಅವರು ಅದರಿಂದಲೇ ಸಾಯುತ್ತಾರೆ ಎಂಬ ಮಾತಿದೆ. ಇದು ಹಫೀಜ್ ಸಯೀದ್‌ನ ವಿಷಯದಲ್ಲೂ ಸತ್ಯವಾಗಬಹುದು’ ಎಂದು ಹೇಳಿದ್ದಾರೆ.
ಆದ್ದರಿಂದಲೇ ಪಾಕ್ ಆತನ ರಕ್ಷಣೆಗೆ ಮುಂದಾಗಿದೆ. ಹೀಗಾಗಿ ಪಾಕ್ ಉಗ್ರರನ್ನು ಪೋಷಿಸುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಪಾಕಿಸ್ತಾನದಲ್ಲಿ ಇತ್ತೀಚೆಗೆ ಅನಾಮಿಕರಿಂದ ಭಾರತಕ್ಕೆ ಬೇಕಾದ ಉಗ್ರರ ಹತ್ಯೆ ಹೆಚ್ಚಳ
- ಈವರೆಗೆ ಭಾರತಕ್ಕೆ ಬೇಕಾದ 26 ಕುಖ್ಯಾತ ಉಗ್ರರು ಅನಾಮಿಕರ ಗುಂಡಿಗೆ ಹತ
- ಇದರ ಬೆನ್ನಲ್ಲೇ 26/11 ರೂವಾರಿ ಹಫೀಜ್ ಸಯೀದ್ ಸೇರಿ ಅನೇಕರಿಗೆ ಪ್ರಾಣಭೀತಿ
- ಅನೇಕ ಉಗ್ರ ನಾಯಕರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ಸೇನೆಯಿಂದ ಭದ್ರತೆ
- ಖುದ್ದು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐನಿಂದಲೇ ಭದ್ರತಾ ವ್ಯವಸ್ಥೆ ಪರಿಶೀಲನೆ
- ಉಗ್ರರಿಗೆ ಪಾಕಿಸ್ತಾನ ರಕ್ಷಣೆ ನೀಡುತ್ತಿದೆ ಎಂಬುದು ಈಗ ಮತ್ತೊಮ್ಮೆ ಸಾಬೀತು