ಸಾರಾಂಶ
ರಷ್ಯಾದಿಂದ ತೈಲ ಖರೀದಿಸುವ ಧೋರಣೆ ವಿರೋಧಿಸಿ ಭಾರತದ ಮೇಲೆ ಹೇರಲು ಉದ್ದೇಶಿಸಿರುವ ಶೇ.25ರಷ್ಟು ಹೆಚ್ಚುವರಿ ತೆರಿಗೆಯ ನಿರ್ಧಾರದಿಂದ ಹಿಂದೆ ಸರಿಯುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ
ಆ್ಯಂಕರೇಜ್ (ಅಮೆರಿಕ): ರಷ್ಯಾದಿಂದ ತೈಲ ಖರೀದಿಸುವ ಧೋರಣೆ ವಿರೋಧಿಸಿ ಭಾರತದ ಮೇಲೆ ಹೇರಲು ಉದ್ದೇಶಿಸಿರುವ ಶೇ.25ರಷ್ಟು ಹೆಚ್ಚುವರಿ ತೆರಿಗೆಯ ನಿರ್ಧಾರದಿಂದ ಹಿಂದೆ ಸರಿಯುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿ ಬಳಿಕ ತಣ್ಣಗಾದಂತೆ ಕಂಡುಬಂದಿರುವ ಟ್ರಂಪ್, ‘ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಚಿಂತನೆ ಸದ್ಯಕ್ಕಿಲ್ಲ, 2-3 ವಾರದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.
ಈಗಾಗಲೇ ಭಾರತದ ಮೇಲೆ ಅಮೆರಿಕ ಶೇ.25ರಷ್ಟು ತೆರಿಗೆ ವಿಧಿಸಿದ್ದು, ಆ.7ರಿಂದ ಜಾರಿಗೆ ಬಂದಿದೆ. ರಷ್ಯಾದಿಂದ ತೈಲ ಖರೀದಿ ಹಿನ್ನೆಲೆಯಲ್ಲಿ ಹೆಚ್ಚುವರಿ ಶೇ.25ರಷ್ಟು ತೆರಿಗೆ ಆ.27ರಿಂದ ಜಾರಿಗೆ ಬರಬೇಕಿದೆ. ಅಂದರೆ ಒಟ್ಟು ತೆರಿಗೆ ಶೇ.50 ಆಗಲಿದೆ.
ಟ್ರಂಪ್ ಹೇಳಿದ್ದೇನು?:
ಇನ್ನು ಪುಟಿನ್ ಭೇಟಿಗೂ ಮುನ್ನ ಮಾತನಾಡಿದ್ದ ಟ್ರಂಪ್, ‘ಪುಟಿನ್ ಇದೀಗ ತನ್ನ ತೈಲ ಖರೀದಿದಾರ (ಭಾರತ) ನೊಬ್ಬನನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಭಾರತವು ರಷ್ಯಾದಿಂದ ಶೇ.40ರಷ್ಟು ತೈಲ ಖರೀದಿಸುತ್ತಿದೆ. ಚೀನಾ ಕೂಡ ಸಾಕಷ್ಟು ತೈಲ ಖರೀದಿ ಮಾಡುತ್ತಿದೆ. ಒಂದು ವೇಳೆ ಹೆಚ್ಚುವರಿ ತೆರಿಗೆ ವಿಧಿಸಿದರೆ ಅವರ (ಪುಟಿನ್) ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳಲಿದೆ. ನನಗೆ ತೆರಿಗೆ ಹಾಕಲೇಬೇಕೆಂದಿದ್ದರೆ ಹಾಕಿಯೇ ಹಾಕುತ್ತೇನೆ. ಆದರೆ ಇಂಥ ತೆರಿಗೆ ಹಾಕುವ ಪರಿಸ್ಥಿತಿ ಬರಲಿಕ್ಕಿಲ್ಲ’ ಎಂದಿದ್ದರು. ಇನ್ನು ಪುಟಿನ್ ಭೇಟಿ ಬಳಿಕ ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿದ ಟ್ರಂಪ್, ‘ತೆರಿಗೆ ಹೇರುವ ಬಗ್ಗೆ 2-3 ವಾರದಲ್ಲಿ ನಿರ್ಧರಿಸುವೆ’ ಎಂದು ಮೃದು ಧೋರಣೆ ತಾಳಿದರು.
ಫಲ ನೀಡದೆ ಪುಟಿನ್-
ಟ್ರಂಪ್ ಸಭೆ ಅಂತ್ಯ
ಅಲಾಸ್ಕಾ: ಉಕ್ರೇನ್-ರಷ್ಯಾ ಯುದ್ಧಕ್ಕೆ ಅಂತ್ಯ ಹಾಡಲು ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಶುಕ್ರವಾರ ತಡರಾತ್ರಿ ಅಲಸ್ಕಾದಲ್ಲಿ ನಡೆದ ಮಾತುಕತೆ ತಕ್ಷಣಕ್ಕೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಆದಾಗ್ಯೂ ಯುದ್ಧ ತಣಿಸುವಲ್ಲಿ ಇದು ಮೊದಲ ಹೆಜ್ಜೆಯಾಗಿದ್ದು, ಧನಾತ್ಮಕ ಸಂದೇಶದೊಂದಿಗೆ ಕೊನೆಗೊಂಡಿದೆ. ಇದರ ಬೆನ್ನಲ್ಲೇ ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅಮೆರಿಕಕ್ಕೆ ತೆರಳಿ ಟ್ರಂಪ್ ಜತೆ ಮಾತುಕತೆ ನಡೆಸಲಿದ್ದಾರೆ.