ಸಾರಾಂಶ
ಅಪರೂಪದ ಖನಿಜಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ವಿಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಚೀನಾ ಮೇಲೆ ಶೇ.100ರಷ್ಟು ಹೆಚ್ಚುವರಿ ತೆರಿಗೆ ದಾಳಿ ಮಾಡುತ್ತೇವೆ. ಮುಂದಿನ ಬದಲಾವಣೆಗಳನ್ನು ಹೊರತುಪಡಿಸಿದರೆ ನ.1ರಿಂದ ಇದು ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.
ವಾಷಿಂಗ್ಟನ್: ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಮತ್ತು ಸೇನಾ ಶಸ್ತ್ರಾಸ್ರ್ರ ವಲಯದಲ್ಲಿ ಪ್ರಮುಖವಾಗಿ ಬಳಕೆಯಾಗುವ ಅಪರೂಪದ ಖನಿಜಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ವಿಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಮೇಲೆ ಶೇ.100ರಷ್ಟು ಹೆಚ್ಚುವರಿ ತೆರಿಗೆ ದಾಳಿ ಮಾಡುತ್ತೇವೆ. ಮುಂದಿನ ಬದಲಾವಣೆಗಳನ್ನು ಹೊರತುಪಡಿಸಿದರೆ ನ.1ರಿಂದ ಇದು ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.
ಅಲ್ಲದೇ ಶೀಘ್ರವೇ ನಡೆಯಬೇಕಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗಿನ ಭೇಟಿಯನ್ನೂ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅವರು ಚೀನಾ ಜತೆ ಇನ್ನೊಂದು ಸುತ್ತಿನ ತೆರಿಗೆ ಸಂಘರ್ಷಕ್ಕೆ ಇಳಿದಂತಾಗಿದೆ.
ಸದ್ಯ ಚೀನಾ ವಸ್ತುಗಳ ಮೇಲೆ ಅಮೆರಿಕ ಶೇ.30ರಷ್ಟು ತೆರಿಗೆ ಹೇರುತ್ತದೆ. ನ.1ರಿಂದ ಇದರ ಪ್ರಮಾಣ ಶೇ.135 ಆಗಲಿದೆ.
ಚೀನಾ ನಿರ್ಬಂಧ:
ಯಾವುದೇ ವಿದೇಶಿ ಕಂಪನಿಗಳು ಚೀನಾದಿಂದ ಅಪರೂಪದ ಖನಿಜ ಆಮದಿಗೆ ಚೀನಾ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ, ಇಂಥ ಖನಿಜಗಳನ್ನು ಸೇನಾ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಖಚಿತಪಡಿಸಬೇಕು ಎಂದು ಷರತ್ತು ವಿಧಿಸಿತ್ತು. ಅಲ್ಲದೆ ಅಪರೂಪದ ಖನಿಜ ಗಣಿಗಾರಿಕೆ, ಸಂಸ್ಕರಣೆ, ಮರುಸಂಸ್ಕರಣೆಗೆ ಬಳಸುವ ಯಂತ್ರೋಪಕರಣ ರಫ್ತಿನ ಮೇಲೂ ನಿರ್ಬಂಧ ಹೇರಿತ್ತು.
ಟ್ರಂಪ್ ತಿರುಗೇಟು:
ಚೀನಾದ ಈ ನಿರ್ಧಾರ ಖಂಡಿಸಿರುವ ಟ್ರಂಪ್, ‘ಚೀನಾ ಸರ್ಕಾರದ ಈ ನಿರ್ಧಾರ ಆಘಾತಕಾರಿ ಮತ್ತು ಯಾವುದೇ ಮುನ್ಸೂಚನೆ ನೀಡದೇ ಕೈಗೊಂಡ ಕ್ರಮವಾಗಿದೆ. ಚೀನಾ ಸರ್ಕಾರ ದಿನೇ ದಿನೇ ಹಗೆತನ ಪ್ರದರ್ಶಿಸುತ್ತಿದೆ, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್ ಮತ್ತು ಸೇನಾ ವಲಯದಲ್ಲಿ ಬಹುವಾಗಿ ಬಳಸುವ ಖನಿಜ ಮತ್ತು ಮ್ಯಾಗ್ನೆಟ್ ರಫ್ತಿನ ಮೇಲೆ ನಿರ್ಬಂಧ ಹೇರುವ ಮೂಲಕ ಇಡೀ ಜಗತ್ತನ್ನು ಒತ್ತೆ ಇಟ್ಟುಕೊಳ್ಳುತ್ತಿದೆ. ಚೀನಾ ಕೈಗೊಂಡ ಈ ಕ್ರಮಗಳ ವಿರುದ್ಧವಾಗಿ ನಾವು ನ.1ರಿಂದಲೇ ಜಾರಿಗೆ ಬರುವಂತೆ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹಾಲಿ ಇರುವ ತೆರಿಗೆಗೆ ಹೆಚ್ಚುವರಿಯಾಗಿ ಶೇ.100ರಷ್ಟು ತೆರಿಗೆ ಹಾಕಲಿದ್ದೇವೆ. ಚೀನಾ ಮತ್ತೇನಾದರೂ ಕ್ರಮ ಕೈಗೊಂಡರೆ ಹೆಚ್ಚುವರಿ ತೆರಿಗೆ ದರದಲ್ಲಿ ವ್ಯತ್ಯಾಸವಾಗಲಿದೆ’ ಎಂದಿದ್ದಾರೆ.
ಅಲ್ಲದೆ, ‘ಎಲ್ಲಾ ರೀತಿಯ ಸೂಕ್ಷ್ಮ ಸಾಫ್ಟ್‌ವೇರ್‌ಗಳನ್ನು ಚೀನಾಕ್ಕೆ ರಫ್ತು ಮಾಡುವುದರ ವಿರುದ್ಧ ನಾವೂ ನಿಯಂತ್ರಣ ಹೇರಲಿದ್ದೇವೆ’ ಎಂದು ಹೇಳಿದ್ದಾರೆ.
ಮತ್ತೆ ಸಮರ:
ಕೆಲ ತಿಂಗಳ ಹಿಂದೆ ಕೂಡಾ ಅಮೆರಿಕ ಮತ್ತು ಚೀನಾ ನಡುವೆ ಇಂಥದ್ದೇ ತೆರಿಗೆ ಸಮರ ಆರಂಭವಾಗಿತ್ತು. ಆಗ ಚೀನಾದ ಆಮದಿನ ಮೇಲೆ ಅಮೆರಿಕ ಶೇ.145ರಷ್ಟು ತೆರಿಗೆ ಹೇರಿತ್ತು. ಬಳಿಕ ಚೀನಾ ಕೂಡಾ ಅಮೆರಿಕದ ಆಮದಿನ ಮೇಲೆ ಶೆ.125ರಷ್ಟು ತೆರಿಗೆ ಹೇರಿತ್ತು. ಆದರೆ ಬಳಿಕ ಬಿಕ್ಕಟ್ಟು ಇತ್ಯರ್ಥಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅಮೆರಿಕವು ತಾನು ಹೇರಿದ್ದ ಹೆಚ್ಚುವರಿ ತೆರಿಗೆ ಜಾರಿಗೆ 90 ದಿನ ಗಡುವು ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆ ತೆರಿಗೆ ಸಮರ ಆರಂಭವಾಗಿದೆ.
ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್, ಸೇನಾ ಶಸ್ತ್ರಾಸ್ತ್ರಗಳಿಗೆ ಅತ್ಯಗತ್ಯವಾದ ಅಪರೂಪದ ಖನಿಜ ಮಾರಾಟದ ಮೇಲೆ ಚೀನಾ ಸರ್ಕಾರ ಷರತ್ತು
ಶಸ್ತ್ರಾಸ್ತ್ರಕ್ಕೆ ಬಳಸಲ್ಲ ಎಂದು ಖಚಿತಪಡಿಸಿದರೆ ಮಾತ್ರವೇ ರಫ್ತಿಗೆ ಅವಕಾಶ. ಗಣಿಗಾರಿಕೆ ಉಪಕರಣ ಮಾರಾಟಕ್ಕೂ ಕೆಲ ನಿರ್ಬಂಧ
ಚೀನಾದ ಕ್ರಮ ಆಘಾತಕಾರಿ. ಹಗೆತನದ್ದು. ಜಗತ್ತನ್ನು ಒತ್ತೆ ಇಟ್ಟುಕೊಳ್ಳುವ ಪ್ರಯತ್ನ. ಇದರ ವಿರುದ್ಧ ಹೆಚ್ಚುವರಿ ತೆರಿಗೆ: ಟ್ರಂಪ್ ಕಿಡಿ