ಸಾರಾಂಶ
ಅಬುಧಾಬಿ: ‘ಭಾರತೀಯರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಕನ್ನಡದಲ್ಲಿ ಮಾತನಾಡಿದ್ದಾರೆ.
ಇದರೊಂದಿಗೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ 4 ಭಾಷೆಗಳಲ್ಲಿ ಈ ಮಾತನ್ನೇ ಆಡುವ ಮೂಲಕ ದಕ್ಷಿಣ ಭಾರತದ ಮತದಾರರನ್ನು ಸೆಳೆಯಲು ಮೋದಿ ಪ್ರಯತ್ನ ಆರಂಭಿಸಿದ್ದಾರೆ.
ಎರಡು ದಿನ ಯುಎಇ ಪ್ರವಾಸದಲ್ಲಿರುವ ಮೋದಿ, ಅಬುಧಾಬಿಯ ಜಾಯೇದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ‘ಅಹ್ಲಾನ್ ಮೋದಿ’ (ನಮಸ್ತೆ ಮೋದಿ) ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಂಗಳವಾರ ಭಾಷಣ ಮಾಡಿದರು.
ಮಧ್ಯಪ್ರಾಚ್ಯದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಜನರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ದಕ್ಷಿಣ ಭಾರತೀಯರನ್ನು ಸೆಳೆಯಲು ವಿದೇಶದಿಂದಲೇ ಮೋದಿ ಪ್ರಯತ್ನ ನಡೆಸಿದರು. ಇತ್ತೀಚೆಗೆ ಕೂಡ ಅವರು ದಕ್ಷಿಣದಲ್ಲಿ ಧಾರ್ಮಿಕ ಯಾತ್ರೆ ನಡೆಸಿದ್ದು ಗಮನಾರ್ಹ.
ನನ್ನ 3ನೇ ಅವಧಿಯಲ್ಲಿ 3ನೇ ಆರ್ಥಿಕತೆ: ಇದೇ ವೇಳೆ, ‘ನನ್ನ 3ನೇ ಅವಧಿಯಲ್ಲಿ ಭಾರತ ವಿಶ್ವದಲ್ಲೇ ನಂ.3 ಆರ್ಥಿಕತೆಯ ರಾಷ್ಟ್ರವಾಗಲಿದೆ.
ಇದು ಮೋದಿ ಗ್ಯಾರಂಟಿ. ನಾನು ಅಧಿಕಾರಕ್ಕೆ ಬಂದಾಗ 11ನೇ ಸ್ಥಾನದಲ್ಲಿದ್ದ ಆರ್ಥಿಕತೆ ಈಗ ನಂ.5 ಆಗಿರುವುದು ಗಮನಾರ್ಹ’ ಎಂದರು. ಈ ಮೂಲಕ 3ನೇ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಜನತೆಗೆ ಧನ್ಯವಾದ: ‘ಭಾರತ್-ಯುಎಇ ದೋಸ್ತಿ ಜಿಂದಾಬಾದ್’ ಎನ್ನುವ ಮೂಲಕ ಭಾಷಣ ಆರಂಭಿಸಿದ ಮೋದಿ, ‘ಇಷ್ಟೊಂದು ಪ್ರಮಾಣದಲ್ಲಿ ಆಗಮಿಸುವ ಮೂಲಕ ನೀವು ಇತಿಹಾಸ ರಚನೆ ಮಾಡಿದ್ದೀರಿ.
ನೀವೆಲ್ಲರೂ ಭಾರತದ ಬೇರೆ ಬೇರೆ ಭಾಗದಿಂದ ಯುಎಇಗೆ ಬಂದಿರಬಹುದು. ಆದರೆ ನಿಮ್ಮೆಲ್ಲರ ಹೃದಯ ಪರಸ್ಪರ ಬಾಂಧವ್ಯವನ್ನು ಹೊಂದಿದೆ.
ನೀವು ಹುಟ್ಟಿದ ನಾಡಿನ ಘಮವನ್ನು ಹಾಗೂ 140 ಕೋಟಿ ಭಾರತೀಯರ ಸಂದೇಶವನ್ನು ನಾನು ನಿಮಗಾಗಿ ತಂದಿದ್ದೇನೆ. ನಾನು ನನ್ನ ಕುಟುಂಬದ ಜನರನ್ನು ಭೇಟಿ ಮಾಡಲು ಬಂದಿದ್ದೇನೆ’ ಎಂದು ಹೇಳಿದರು.
ಭಾರತ- ಯುಎಇ ಸಂಬಂಧ ಮಾದರಿ: ಭಾರತ ಮತ್ತು ಯುಎಇ ನಡುವಿನ ಸಂಬಂಧ ಜಗತ್ತಿಗೆ ಮಾದರಿಯಾಗಿದೆ. ಉಭಯ ದೇಶಗಳು ಅಭಿವೃದ್ಧಿಯಲ್ಲಿ ಜೊತೆಯಾಗಿ ಸಾಗುತ್ತಿವೆ.
ನಾನು ಪ್ರತಿ ಬಾರಿ ನನ್ನ ಸಹೋದರ ಮೊಹಮದ್ ಬಿನ್ ಜಾಯೇದ್ ಅಲ್ ನಹ್ಯಾನ್‌ರನ್ನು ಭೇಟಿ ಮಾಡಿದಾಗ ದುಬೈಗೆ ನೀವು (ಭಾರತೀಯ ಸಮುದಾಯ) ನೀಡುತ್ತಿರುವ ಕೊಡುಗೆಯನ್ನು ಹೊಗಳುತ್ತಾರೆ.
ದಿನಕಳೆದಂತೆ ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಬಿಗಿಯಾಗುತ್ತಿದೆ ಎಂದು ಅವರು ಹೇಳಿದರು.
ಮೋದಿ ಕಾರ್ಯಕ್ರಮವನ್ನು ವೀಕ್ಷಿಸಲು ನೂರಾರು ಭಾರತೀಯ ಸಮುದಾಯದವರು ಜಾಯೇದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಸೇರಿದ್ದರು.
ಕಾರ್ಯಕ್ರಮದುದ್ದಕ್ಕೂ ಮೋದಿ, ಮೋದಿ, ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳು ಮೊಳಗುತ್ತಿದ್ದವು.
ಯುಎಇ ಅಧ್ಯಕ್ಷರಿಂದ ಮೋದಿ ಗುಣಗಾನ:
ಅಬುಧಾಬಿ: ನಿಮ್ಮ ಬೆಂಬಲವಿಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಸ್ವಾಮಿನಾರಾಯಣ ಹಿಂದೂ ದೇವಸ್ಥಾನ ನಿರ್ಮಾಣ ಮಾಡುವುದು ಅಸಾಧ್ಯವಾಗುತ್ತಿತ್ತು.
ಈ ದೇವಾಲಯವು ಭಾರತದೊಂದಿಗಿನ ನಿಮ್ಮ ಬಾಂಧವ್ಯಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅಲ್ ನಹ್ಯಾನ್ ಹೊಗಳಿಕೆ ಮಳೆ ಸುರಿಸಿದ್ದಾರೆ.
ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಬೃಹತ್ ಹಿಂದೂ ದೇವಸ್ಥಾನ ದೇವಸ್ಥಾನವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ, ಈ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಯುಎಇ ಪ್ರವಾಸ ಕೈಗೊಂಡಿದ್ದಾರೆ.
ಮಂಗಳವಾರ ಯುಎಇ ತಲುಪಿದ ಬಳಿಕ ಮೋದಿ, ಜಾಯೇದ್ ಅವರೊಂದಿಗೆ ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ವೇಳೆ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ಮಂದಿರ ನಿರ್ಮಾಣಕ್ಕೆ ನೀಡಿದ ನೆರವಿಗೆ ನಹ್ಯಾನ್‌ಗೆ ಕೃತಜ್ಞತೆ ಸಲ್ಲಿಸಿದರು.
ರುಪೇ ಕಾರ್ಡ್ ಸೇರಿ ಹಲವು ಒಪ್ಪಂದ: ಯುಎಇನಲ್ಲಿ ರುಪೇ ಕಾರ್ಡ್ ಬಳಿಕೆ, ಯುಪಿಐ ಬಳಕೆ, ಭಾರತ-ಮಧ್ಯಪ್ರಾಚ್ಯ ಕಾರಿಡಾರ್ ಯೋಜನೆ ಜಾರಿಗೆ ತ್ವರಿತಗತಿ, ಉಭಯ ದೇಶಗಳಲ್ಲಿ ಪರಸ್ಪರ ಬಂಡವಾಳ ಹೂಡಿಕೆ- ಹೀಗೆ ಹಲವು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.
ಅದ್ಧೂರಿ ಸ್ವಾಗತ: ಮೋದಿ ಯುಎಇಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಜಾಯೇದ್ ಅವರು ಮೋದಿಯನ್ನು ಬರಮಾಡಿಕೊಂಡರು. ಈ ವೇಳೆ ಜಾಯೇದ್ ಹಾಗೂ ಮೋದಿ ಪರಸ್ಪರ ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು.
ಬಳಿಕ ಮೋದಿಗೆ ಯುಎಇ ಸೇನಾ ಗೌರವ ನೀಡಲಾಯಿತು. ಭಾರತೀಯ ಮೂಲದವರೂ ಭಾರಿ ಸಂಖ್ಯೆಯಲ್ಲಿ ನೆರೆದು ಮೋದಿಗೆ ಸ್ವಾಗತ ಕೋರಿದರು.
ನಂತರ ಜಾಯೇದ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ವೇಳೆ ಮಾತು ಆರಂಭಿಸಿದ ಮೋದಿ ‘ನನ್ನ ಮತ್ತು ನನ್ನ ತಂಡದ ಈ ಭವ್ಯವಾದ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
ನೀವು ಹೇಳಿದಂತೆ, ನಾನು ಇಲ್ಲಿಗೆ ಬಂದಾಗಲೆಲ್ಲಾ ನಾನು ನನ್ನ ಮನೆ ಮತ್ತು ಕುಟುಂಬಕ್ಕೆ ಬಂದಿದ್ದೇನೆ ಎಂದು ಭಾವಿಸುತ್ತೇನೆ.
ಕಳೆದ ಏಳು ತಿಂಗಳಲ್ಲಿ ನಾವು ಐದು ಬಾರಿ ಭೇಟಿಯಾಗಿದ್ದೇವೆ. ಇಂದು ಭಾರತ ಮತ್ತು ಯುಎಇ ನಡುವೆ ಪ್ರತಿಯೊಂದು ವಲಯದಲ್ಲಿ ಪರಸ್ಪರ ಸಹಭಾಗಿತ್ವವಿದೆ’ ಎಂದರು.
ಇಂದು ಮೊದಲ ಯುಎಇ ಹಿಂದೂ ದೇಗುಲ ಉದ್ಘಾಟನೆ:
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದಾರೆ.
ಇದಲ್ಲದೆ ಬುಧವಾರ ಹಾಗೂ ಗುರುವಾರ ಅವರು ಕತಾರ್‌ಗೂ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಅಮೀರ್ ಶೇಖ್ ತಮೀಂ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮಂದಿರದ ವೈಶಿಷ್ಟ್ಯತೆ: ಯುಎಇಯ ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ‘ಬಾಪ್ಸ್’ ಸ್ವಾಮಿ ನಾರಾಯಣ ಮಂದಿರವು 27 ಎಕರೆ ಪ್ರದೇಶದಲ್ಲಿ ತಲೆಯೆತ್ತಿದೆ .
ಇಲ್ಲಿ ಕೃಷ್ಣ- ರಾಧೆ, ಶಿವ- ಪಾರ್ವತಿ ಮತ್ತು ಸೀತೆ, ರಾಮ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರುಗಳನ್ನು ಪೂಜಿಸಲಾಗುತ್ತದೆ.
ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ ಮತ್ತು ಮತ್ತು 180 ಅಡಿ ಅಗಲವಿದೆ.ಇದರಲ್ಲಿ ಗಂಗಾ-ಯಮುನಾ ನೀರು ತಂದು ಕೊಳ ನಿರ್ಮಿಸಲಾಗಿದೆ. ಅಯೋಧ್ಯೆ ಮಂದಿರದ ರೀತಿ ಈ ದೇಗುಲ ನಿರ್ಮಾಣಕ್ಕೂ ಕಬ್ಬಿಣದ ಬಳಕೆ ಆಗಿಲ್ಲ.