ನೇಹಾ ಹತ್ಯೆ ವಿಚಾರದಲ್ಲಿ ಬಿಜೆಪಿ ರಾಜಕಾರಣ- ಸಿಎಂ

| Published : Apr 26 2024, 12:50 AM IST / Updated: Apr 26 2024, 08:14 AM IST

ಸಾರಾಂಶ

ಈಗಾಗಲೇ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಹಾ ಕುಟುಂಬದೊಂದಿಗೆ ನಾವಿದ್ದೇವೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ತೀವ್ರಗತಿಯ ತನಿಖೆ ಮಾಡುತ್ತಿದ್ದಾರೆ.

ಹುಬ್ಬಳ್ಳಿ:  ನೇಹಾ ಹತ್ಯೆ ಪ್ರಕರಣದಲ್ಲಿ ನಾವು ಯಾವುದೇ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರೇ ರಾಜಕಾರಣ ಮಾಡುತ್ತಿದ್ದಾರೆ. ಅನ್ಯಾಯವಾಗಿರುವ ಕುಟುಂಬಕ್ಕೆ ನಾವು ನ್ಯಾಯ ಒದಗಿಸಿಕೊಡುವ ಕಾರ್ಯ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇಲ್ಲಿನ ಬಿಡನಾಳದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಘಟನೆ ದುರದುಷ್ಟಕರವಾಗಿದೆ. ಈಗಾಗಲೇ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಹಾ ಕುಟುಂಬದೊಂದಿಗೆ ನಾವಿದ್ದೇವೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ತೀವ್ರಗತಿಯ ತನಿಖೆ ಮಾಡುತ್ತಿದ್ದಾರೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.

ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎನ್ನುವ ಬಿಜೆಪಿ ಬೇಡಿಕೆ ವಿಚಾರಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಬಿಜೆಪಿಯೂ ಇದರಲ್ಲಿಯೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಒಂದೇ ಒಂದು ಪ್ರಕರಣ‍ವನ್ನು ಸಿಐಡಿಗೆ ವಹಿಸಿದ್ದಾರಾ? ಈ ಹಿಂದೆ ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ. ಈ ರೀತಿಯ ಹೇಳಿಕೆ ನೀಡಿ ಸುಮ್ಮನೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸುವಂತೆ ಮನವಿ ಮಾಡಿದ್ದರು. ಅದರಂತೆ ಈಗಾಗಲೇ ವಿಶೇಷ ಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಹಾಗೆಯೇ ಅವರ ಕುಟುಂಬಕ್ಕೆ ಬೇಕಾದ ಭದ್ರತೆ ನೀಡುತ್ತೇವೆ. ಆದಷ್ಟು ಬೇಗನೆ ಸಿಐಡಿ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದು, ಆರೋಪಿಗೆ ಗರಿಷ್ಠ ಶಿಕ್ಷೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಅಮಾನವೀಯ ಕೃತ್ಯ

ಬಿಡನಾಳದಲ್ಲಿರುವ ನೇಹಾ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ತಾಯಿ ಗೀತಾ ಅವರೊಂದಿಗೆ ಕೆಲಕಾಲ ಚರ್ಚಿಸಿ ಮಾಹಿತಿ ಪಡೆದರು. ಇದೊಂದು ಅಮಾನವೀಯ ಕೃತ್ಯವಾಗಿದ್ದು, ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ. ಯಾವುದೇ ರೀತಿ. ಭಯಪಡುವ ಅವಶ್ಯಕತೆಯಿಲ್ಲ. ತನಿಖೆ ಬೇಗ ನಡೆದು ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಎಚ್‌.ಕೆ. ಪಾಟೀಲ, ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿನೋದ ಅಸೂಟಿ, ಕಾಂಗ್ರೆಸ್‌ ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ, ಮಹೇಂದ್ರ ಸಿಂಘಿ ಸೇರಿದಂತೆ ಹಲವರಿದ್ದರು.