ಡೆತ್‌ನೋಟಲ್ಲಿ ಹೆಸರಿದ್ದಾಕ್ಷಣ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತಲ್ಲ

| Published : May 27 2024, 08:45 AM IST

Karnataka highcourt
ಡೆತ್‌ನೋಟಲ್ಲಿ ಹೆಸರಿದ್ದಾಕ್ಷಣ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮಹತ್ಯೆಗೆ ಶರಣಾದವರು ಬರೆದಿಟ್ಟ ಡೆತ್‌ನೋಟ್‌ನಲ್ಲಿ ಹೆಸರು ಉಲ್ಲೇಖಿಸಿರುವುದೊಂದೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಪರಾಧ ಸಾಬೀತಿಗೆ ಸಾಕಾಗುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಆತ್ಮಹತ್ಯೆಗೆ ಶರಣಾದವರು ಬರೆದಿಟ್ಟ ಡೆತ್‌ನೋಟ್‌ನಲ್ಲಿ ಹೆಸರು ಉಲ್ಲೇಖಿಸಿರುವುದೊಂದೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಪರಾಧ ಸಾಬೀತಿಗೆ ಸಾಕಾಗುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಮನೆ ಕೆಲಸದಾಕೆ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಮನೆ ಮಾಲೀಕರ ಹೆಸರು ಉಲ್ಲೇಖಿಸಿರುವ ಕಾರಣವು ವಿಚಾರಣೆಯಲ್ಲಿ ದೃಢಪಡಬೇಕಿದೆ ಎಂದು ಮನೆ ಮಾಲೀಕರ ವಿರುದ್ಧದ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಕೈ ಬಿಡಲು ನಿರಾಕರಿಸಿದ್ದ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದ ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.

ಮೃತಳು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರಾದ ಶಿವಮೊಗ್ಗದ ವಿವೇಕಾನಂದ ಬಡಾವಣೆ ನಿವಾಸಿಗಳಾದ ಜಿ.ಎಚ್‌. ಓಂಕಾರಪ್ಪ ಮತ್ತವರ ಪತ್ನಿ ಅನುಸೂಯಮ್ಮ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ಮೇಲಿದ್ದ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಕೈಬಿಟ್ಟು ಆದೇಶಿಸಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 306 ಪ್ರಕಾರ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಆ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರು ಶಿಕ್ಷಾರ್ಹರಾಗುತ್ತಾರೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅಪರಾಧ ಚಿಂತನೆ (ತಪ್ಪು ಮಾಡಿದ ಭಾವನೆ) ಸ್ಪಷ್ಟವಾಗಿ ಇರಬೇಕು. ಮೃತರು ಆತ್ಮಹತ್ಯೆ ಮಾಡಿಕೊಳ್ಳಲು ನೇರ ಅಥವಾ ಸಕ್ರಿಯ ಕೃತ್ಯ ಇರಬೇಕು. ಆ ಕೃತ್ಯವು ಮೃತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟರೆ ಅನ್ಯ ಆಯ್ಕೆ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಸಿರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು ತನ್ನ ಸಾವಿಗೆ ಜವಾಬ್ದಾರರು ಎಂದು ಮೃತಳು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಹಾಗೆಯೇ, ತಾನೊಂದು ಯುವಕನನ್ನು ಪ್ರೀತಿಸುತ್ತಿರುವುದನ್ನು, ಆತನನ್ನು ಭೇಟಿ ಮಾಡುವ ಇಚ್ಛೆ ಹೊಂದಿದ್ದನ್ನೂ ಉಲ್ಲೇಖಿಸಿದ್ದಳು. ಹೀಗಿರುವಾಗ ಅರ್ಜಿದಾರ ದಂಪತಿ ಜವಾಬ್ದಾರರಾಗಿದ್ದಾರೆ ಎಂದು ಉಲ್ಲೇಖಿಸಿದ್ದೊಂದೇ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಅಪರಾಧ ಸಾಬೀತುಪಡಿಸಲು ಸಾಕಾಗುವುದಿಲ್ಲ. ಇನ್ನು ಅರ್ಜಿದಾರರಿಗೆ ಅಪರಾಧ ಭಾವನೆ ಅಥವಾ ಅವರ ಕುಮ್ಮಕ್ಕು ಇರುವ ಬಗ್ಗೆ ಯಾವೊಂದು ಸಾಕ್ಷ್ಯಗಳು, ದೂರು ಅಥವಾ ದೋಷಾರೋಪ ಪಟ್ಟಿಯಲ್ಲಿನ ದಾಖಲೆಯಿಂದ ಕಂಡುಬರುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ವಿಚಾರಣೆ ಎದುರಿಸುವಂತೆ ಅರ್ಜಿದಾರರಿಗೆ ಹೇಳುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಆರೋಪಿಯನ್ನು ದೋಷಿಯಾಗಿ ಪರಿಗಣಿಸಬೇಕಾದರೆ ದೋಷಾರೋಪ ಪಟ್ಟಿಯಲ್ಲಿ ಒದಗಿಸಲಾದ ದಾಖಲೆಗಳು ಪೂರಕವಾಗಿರಬೇಕು. ಮತ್ಯಾವುದೇ ದಾಖಲೆಗಳನ್ನು ಒದಗಿಸಿಲ್ಲವೆಂದು ದೋಷಾರೋಪ ಪಟ್ಟಿಯ ದಾಖಲೆ ಆಧರಿಸಿ ಆರೋಪಿಯನ್ನು ದೋಷಿಯೆಂದು ತೀರ್ಮಾನಿಸಲಾಗದು. ದೋಷಾರೋಪ ಹೊರಿಸುವ ಸಂದರ್ಭದಲ್ಲಿ ಆರೋಪವನ್ನು ಮೇಲ್ನೋಟಕ್ಕೆ ಸಾಬೀಪಡಿಸುವಂತಹ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯ ಆಧರಿಸಬೇಕು. ಅದು ಬಿಟ್ಟು ಪ್ರಾಸಿಕ್ಯೂಷನ್‌ (ಅಭಿಯೋಜನೆ) ಮತ್ತು ತನಿಖಾ ಸಂಸ್ಥೆ ಮಧ್ಯೆ ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸಬಾರದು ಎಂದು ಆದೇಶದಲ್ಲಿ ಪೀಠ ಕಟುವಾಗಿ ನುಡಿದಿದೆ.

ಪ್ರಕರಣವೇನು?:

ಅರ್ಜಿದಾರರ ಮನೆಯಲ್ಲಿ ಶೃತಿ ಎಂಬ ಯುವತಿ ಎರಡು ವರ್ಷ ಕೆಲಸ ಮಾಡಿಕೊಂಡಿದ್ದರು. ಆಕೆ 2015ರಲ್ಲಿ ಅರ್ಜಿದಾರರ ಮನೆಯ ಕೊಠಡಿಯಲ್ಲಿ ಒಳಗಿನಿಂದ ಬೋಲ್ಟ್‌ ಹಾಕಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದರು. ಪಕ್ಕದಲ್ಲೇ ಆಕೆ ಬರೆದಿಟ್ಟ ಚೀಟಿ (ಡೆತ್‌ನೋಟ್‌) ಕಂಡುಬಂದಿತ್ತು. ಮೃತಳ ತಾಯಿ ನೀಡಿದ್ದ ದೂರಿನ ತನಿಖೆ ನಡೆಸಿದ್ದ ತುಂಗಾನಗರ ಠಾಣಾ ಪೊಲೀಸರು, ಅರ್ಜಿದಾರರ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪ ಕೈ ಬಿಡಲು ಕೋರಿದ್ದ ಅರ್ಜಿದಾರರ ಮನವಿಯನ್ನು 2023ರ ಡಿ.18ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರು, ಡೆತ್‌ನೋಟ್‌ನಲ್ಲಿ ತಾನು ಯುವಕನ್ನು ಪ್ರೀತಿಸುತ್ತಿದ್ದ ಮಾಹಿತಿ, ಫೋನ್‌ ನಂಬರ್‌ ಮತ್ತು ಅರ್ಜಿದಾರರು ತನ್ನ ಸಾವಿಗೆ ಜವಾಬ್ದಾರರು ಎಂದು ಮೃತಳು ಉಲ್ಲೇಖಿಸಿದ್ದರು. ಅದು ಬಿಟ್ಟು ಅರ್ಜಿದಾರರು ಕಿರುಕುಳ, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಬಗ್ಗೆ ಉಲ್ಲೇಖವಿಲ್ಲ. ತಾಯಿಯ ದೂರಿನಲ್ಲಿ ಈ ಆರೋಪವಿಲ್ಲ. ಆರೋಪ ಸಾಬೀತುಪಡಿಪಡಿಸುವ ದಾಖಲೆ/ಸಾಕ್ಷ್ಯಾಧಾರವನ್ನು ಆರೋಪ ಪಟ್ಟಿಯಲ್ಲಿ ಒದಗಿಸಿಲ್ಲ ಎಂದು ವಾದಿಸಿದ್ದರು. ಅದನ್ನು ಆಕ್ಷೇಪಿಸಿದ್ದ ಸರ್ಕಾರಿ ವಕೀಲರು, ಆರೋಪದ ಬಗ್ಗೆ ಅಧೀನ ನ್ಯಾಯಾಲಯದಲ್ಲೇ ದೃಢಪಡಬೇಕಿದೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.