ಸಾರಾಂಶ
ಬೆಂಗಳೂರು : ಟ್ರಸ್ಟ್‌ಗಳಿಗೆ ಕೈಗಾರಿಕೆಗಳಿಂದ ಕೋಟ್ಯಂತರ ರುಪಾಯಿ ಸಿಎಸ್ಆರ್ ಅನುದಾನ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿಯ ಜತೀನ್ ಅಗರ್ವಾಲ್, ತಮಿಳುನಾಡು ರಾಜ್ಯದ ಕಾಂಚೀಪುರದ ಸುನಿತಾ, ಚೆನ್ನೈ ನಗರದ ಜಯಕುಮಾರ್ ಹಾಗೂ ಗುಜರಾತ್‌ನ ರಾಜೇಂದ್ರ ಹೆಗ್ಡೆ ಬಂಧಿತರಾಗಿದ್ದು, ಆರೋಪಿಗಳಿಂದ ₹15 ಲಕ್ಷ ಮೌಲ್ಯದ ಡಿಡಿ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇತ್ತೀಚೆಗೆ ಉಲ್ಲಾಳದ ಶಂಕರನಾಂದ ಆಶ್ರಮ ಟ್ರಸ್ಟ್‌ನ ಮುಖ್ಯಸ್ಥ ಶಂಕರಾನಂದ ಮೂರ್ತಿ ಅವರಿಗೆ ವಂಚಿಸಿ ₹15 ಲಕ್ಷ ಮೌಲ್ಯದ ಡಿಡಿ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾಗ ಜತೀನ್‌ನನ್ನು ಹಿಡಿದು ಹಲಸೂರು ಪೊಲೀಸರಿಗೆ ಟ್ರಸ್ಟ್ ವಕೀಲರು ನೀಡಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಮೋಸದ ಜಾಲ ಬಯಲಾಗಿದೆ.
ಕೋಟಿ ಲಾಭ ತೋರಿಸಿ ಲಕ್ಷಕ್ಕೆ ಟೋಪಿ:
ಟ್ರಸ್ಟ್‌ಗಳಿಗೆ ಕೈಗಾರಿಕೆಗಳಿಂದ 30 ರಿಂದ 40 ಕೋಟಿ ರು. ಅನುದಾನದ ಆಸೆ ತೋರಿಸಿ ಲಕ್ಷ ಲಕ್ಷ ವಸೂಲಿ ಮಾಡುವುದನ್ನೇ ಸುನೀತಾ, ಜಯಕುಮಾರ್ ಹಾಗೂ ರಾಜೇಂದ್ರ ವೃತ್ತಿಯಾಗಿಸಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಆ ಕಂಪನಿಗಳ ಹೆಸರಿನಲ್ಲಿ ವಂಚಕರು ನಕಲಿ ದಾಖಲೆಗಳನ್ನು ಕೂಡಾ ಸೃಷ್ಟಿಸಿಕೊಂಡಿದ್ದರು.
ಅಂತೆಯೇ ಮಾ.13 ರಂದು ಉಲ್ಲಾಳದ ಶಂಕರನಾಂದ ಆಶ್ರಮ ಟ್ರಸ್ಟ್‌ನ ಮುಖ್ಯಸ್ಥ ಶಂಕರನಾಂದ ಅವರನ್ನು ಭೇಟಿಯಾದ ಸುನೀತಾ ಮತ್ತು ಜಯಕುಮಾರ್, ‘ನಮಗೆ ಆದಿತ್ಯ ಬಿರ್ಲಾ, ಉಲ್ಟ್ರಾ ಟೆಕ್, ಮಹೀಂದ್ರಾ ಸಸ್ಟೈನ್, ಎಕ್ಸ್‌ಪೆಡಿಟೊರ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಹಾಗೂ ಜೆಎಸ್‌ಡಬ್ಲ್ಯು ಸೇರಿ ಪ್ರತಿಷ್ಠಿತ ಕಂಪನಿಗಳ ಪರಿಚಯವಿದೆ’ ಎಂದಿದ್ದರು. ಬಳಿಕ ಎಕ್ಸ್‌ಪೆಡಿಟೊರ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಕಂಪನಿ ಮೂಲಕ 20 ಕೋಟಿ ರು ಸಿಎಸ್‌ಆರ್ ಅನುದಾನ ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು, ಈ ಅನುದಾನ ಪಡೆಯಲು ಕಂಪನಿಯ ಮೂಮೆಂಟ್ ಹಾಗೂ ಪ್ರೊಸೆಸಿಂಗ್ ಶುಲ್ಕವಾಗಿ 15 ಲಕ್ಷ ರು ಕೊಡಬೇಕು ಎಂದಿದ್ದರು. ಈ ಡೀಲ್‌ಗೆ ಒಪ್ಪಿದರೆ ಅವರಿಂದ 15 ಲಕ್ಷ ರು ಹಣ ಪಡೆದು ಅದಕ್ಕೆ ಗ್ಯಾರಂಟಿಯಾಗಿ ಶಂಕರನಾಂದ ರವರಿಗೆ 15 ಲಕ್ಷ ರು ಡಿಡಿ ನೀಡುವುದಾಗಿ ಸುನೀತಾ ಹೇಳಿದ್ದರಿಂದ ಮತ್ತಷ್ಟು ವಿಶ್ವಾಸ ಮೂಡಿತ್ತು.
ಸಿಕ್ಕಿಬಿದ್ದಿದ್ದು ಹೇಗೆ?
ಈ ಹಣ ವ್ಯವಹಾರದ ನಡೆಯುವಾಗ ಗ್ಯಾರಂಟಿಗೆ ಹಲಸೂರು ಸಮೀಪದ ಹೋಟೆಲ್‌ನಲ್ಲಿ ಸುನೀತಾ ಗ್ಯಾಂಗ್ ಪರವಾಗಿ ಜತೀನ್ ಹಾಗೂ ಟ್ರಸ್ಟ್ ಪರವಾಗಿ ಅವರ ವಕೀಲ ಮಂಜುನಾಥ್ ಇದ್ದರು. ಪೂರ್ವ ಒಪ್ಪಂದಂತೆ ಟ್ರಸ್ಟ್‌ಗೆ ಹಣ ಸಂದಾಯವಾಗುವವರೆಗೆ ಈ ಇಬ್ಬರು ಹೋಟೆಲ್‌ನಲ್ಲೇ ತಂಗುವ ಮಾತಾಗಿತ್ತು.
ಹೀಗಿರುವಾಗ ಟ್ರಸ್ಟ್‌ನಿಂದ ಶುಲ್ಕದ ನೆಪದಲ್ಲಿ ಪಡೆದ 15 ಲಕ್ಷ ರು ಅನ್ನು ಜತೀನ್ ಸೋದರ ಮಾವನಿಗೆ ಸೇರಿದ ಧರ್ಮ ಟ್ರೇಡರ್ಸ್ ಕಂಪನಿಯ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಯಿತು. ಈ ಹಣ ಸಂದಾಯವಾದ ಕೂಡಲೇ ಟ್ರಸ್ಟ್‌ಗೆ ಪ್ರತಿಯಾಗಿ 15 ಲಕ್ಷ ರು ಡಿಡಿಯನ್ನು ಆರೋಪಿಗಳು ನೀಡಬೇಕಿತ್ತು. ಆದರೆ ನೀವು ಆರ್‌ಟಿಜಿಎಸ್ ಮಾಡಿದ ಹಣವು ಜಮೆಯಾಗಿಲ್ಲ ಎಂದು ಸುಳ್ಳು ಹೇಳಿ ಡಿಡಿ ನೀಡದೆ ಹೋಟೆಲ್‌ನಿಂದ ತಪ್ಪಿಸಿಕೊಳ್ಳಲು ಜತೀನ್ ಯತ್ನಿಸಿದ್ದಾನೆ. ಆಗ ಆತನ ವರ್ತನೆ ಮೇಲೆ ಶಂಕೆಗೊಂಡ ಟ್ರಸ್ಟ್ ಪ್ರತಿನಿಧಿ, ತಕ್ಷಣವೇ ಜತೀನ್‌ನನ್ನು ಹಿಡಿದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಂಚನೆ ಕೃತ್ಯದ ಬಗ್ಗೆ ತಿಳಿಸಿದ್ದಾರೆ. ಅಷ್ಟರಲ್ಲಿ ಹೋಟೆಲ್‌ಗೆ ಸುನೀತಾ ಹಾಗೂ ಜಯಕುಮಾರ್ ಕೂಡ ಬಂದಿದ್ದರು. ಈ ಗಲಾಟೆ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ತಳಕ್ಕೆ ತೆರಳಿದ್ದ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮೋಸದ ಜಾಲವು ಬಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
40-50 ಜನರಿಗೆ ವಂಚನೆ
ಕೊರೋನಾ ಬಳಿಕ ಈ ರೀತಿ ವಂಚನೆ ಕೃತ್ಯದಲ್ಲಿ ಆರೋಪಿಗಳು ತೊಡಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಈ ವಂಚನೆ ಜಾಲದಿಂದ ಇದುವರೆಗೆ ಸುಮಾರು 40 ರಿಂದ 50 ಮಂದಿ ಮೋಸ ಹೋಗಿರುವುದು ಗೊತ್ತಾಗಿದೆ. ಆದರೆ ಈವರೆಗೆ ಯಾರೊಬ್ಬರು ದೂರು ನೀಡಿಲ್ಲ. ಹೀಗಾಗಿ ಆರೋಪಿಗಳ ಹೇಳಿಕೆ ಆಧರಿಸಿ ಹಣ ಕಳೆದುಕೊಂಡವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ-ಗುಜರಾತ್‌ನಲ್ಲಿ ವಂಚಕರು
ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಮುಂಬೈ ಮೂಲದ ಜತೀನ್ ಓದುತ್ತಿದ್ದ. ತನ್ನ ಸೋದರ ಮಾವನ ಸೂಚನೆ ಮೇರೆಗೆ ಆತ ಈ ಜಾಲದಲ್ಲಿ ಕೆಲಸ ಮಾಡುತ್ತಿದ್ದ. ಈ ಜಾಲವು ಸಂಘಟಿತವಾಗಿ ಕಾರ್ಯನಿರ್ವಹಿಸಿದ್ದು, ಗುಜರಾತ್ ಹಾಗೂ ಮುಂಬೈನಲ್ಲಿ ಜಾಲದ ಮಾಸ್ಟರ್ ಮೈಂಡ್‌ಗಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.