ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯಲ್ಲೇ ಕುಳಿತು ಲಕ್ಷ ಲಕ್ಷ ರುಪಾಯಿ ಸಂಪಾದಿಸಬಹುದು ಎಂದು ಹೇಳಿ ಜನರಿಗೆ ಟೋಪಿ ಹಾಕಿ ಹಣ ದೋಚುತ್ತಿದ್ದ ಮಹಿಳೆ ಸೇರಿದಂತೆ ಸೈಬರ್ ಮೋಸ ಜಾಲದ ಒಂಭತ್ತು ಮಂದಿಯನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಮುಂಬೈನ ಆಲಿಖಾನ್, ಹಮೀರ್ ಸುಹೇಲ್, ಇನಾಯತ್ ಖಾನ್, ನಯಾಜ್ ಅಹಮದ್, ಆದಿಲ್ ಆಗಾ, ಸಯ್ಯದ್ ಅಬ್ಬಾಸ್ ಮಿಥುಲ್ ಅಮಿರ್ ಸುಹಾಲಿ, ಹೈದರಾಬಾದ್‌ನ ನೈನಾ ತಾರಾಚಂದ್ ರಾಜ್, ಮಿಹಿರ್ ಶಶಿಕಾಂತ್ ಶಾ ಮತ್ತು ಸತೀಶ್ ಕೊಲಂಗಿ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಮುಂದುವರೆದಿದೆ.
ಇತ್ತೀಚಿಗೆ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ವಿದ್ಯಾರಣ್ಯಪುರದ ವ್ಯಕ್ತಿಯೊಬ್ಬರಿಗೆ ₹18 ಲಕ್ಷವನ್ನು ದುಷ್ಕರ್ಮಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಎಸಿಪಿ ಸತ್ಯನಾರಾಯಣ್ ಸಿಂಗ್ ಸಾರಥ್ಯದಲ್ಲಿ ಇನ್‌ಸ್ಪೆಕ್ಟರ್ ಹಜರೇಶ್ ಎ.ಕಿಲೆದಾರ್ ತಂಡ ಆರೋಪಿಗಳನ್ನು ಬಂಧಿಸಿದೆ.
ನಕಲಿ ಬ್ಯಾಂಕ್ ಖಾತೆಗಳು:
ಈ ಆರೋಪಿಗಳು ವಂಚನೆ ಕೃತ್ಯದಲ್ಲಿ ಹಣ ವರ್ಗಾವಣೆಗೆ ಸಹಕಾರ ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ವಂಚನೆ ಹಣದ ವಹಿವಾಟು ನಡೆಸಿದ್ದಾರೆ.
ಅಲ್ಲದೆ ಸಾರ್ವಜನಿಕರಿಗೆ ಕೆಲವು ಬಾರಿ ಕರೆ ಮಾಡಿ ವಂಚಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಹೇಗೆ ವಂಚನೆ?
ವಾಟ್ಸ್ ಆಪ್ ಹಾಗೂ ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಸಾರ್ವಜನಿಕರಿಗೆ ವರ್ಕ್ ಫ್ರಮ್ ಹೋಂ ಕೆಲಸ ನೀಡುವುದಾಗಿ ಸಂದೇಶ ಕಳುಹಿಸುತ್ತಿದ್ದರು. ಮನೆಯಲ್ಲೇ ಕುಳಿತು ಲಕ್ಷ ಲಕ್ಷ ಸಂಪಾದಿಸಬಹುದು ಎಂದು ಆಮಿಷವೊಡುತ್ತಿದ್ದರು.
ನಾವು ಕಳುಹಿಸುವ ವಿಡಿಯೋ ಹಾಗೂ ಫೋಟೋಗಳನ್ನು ಲೈಕ್ ಮಾಡಿ ಶೇರ್ ಮಾಡಿದರೇ ಒಂದಕ್ಕೆ ₹150 ಸಿಗಲಿದೆ. ಹೀಗೆ ದಿನಕ್ಕೆ ₹500ರಿಂದ ₹10 ಸಾವಿರವರೆಗೆ ಗಳಿಸಬಹುದು ಎಂದು ಜನರಿಗೆ ಆಸೆ ತೋರಿಸುತ್ತಿದ್ದರು.
ಈ ಪ್ರಲೋಭೆಗಳಿಗೆ ಒಳಗಾಗಿ ತಮ್ಮ ಮೋಸದ ಬಲೆಗೆ ಬೀಳುವ ಜನರಿಗೆ ಕೆಲವು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಆರೋಪಿಗಳು ಹೇಳುತ್ತಿದ್ದರು.
ತರುವಾಯ ನೋಂದಣಿ ಶುಲ್ಕವೆಂದು ಇಂತಿಷ್ಟು ಪಾವತಿಸುವಂತೆ ಹೇಳುತ್ತಿದ್ದರು. ಬಳಿಕ ಆರಂಭದಲ್ಲಿ ಲಾಭಾಂಶವೆಂದು ಹೇಳಿ ಗ್ರಾಹಕರ ವ್ಯಾಲೆಟ್‌ಗೆ ವಂಚಕರು ಹಣ ಜಮೆ ಮಾಡುತ್ತಿದ್ದರು.
ಈ ಹಣ ಪಡೆಯಲು ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ಸಿಗಲಿದೆ ಎನ್ನುತ್ತಿದ್ದರು. ಹೀಗೆ ನಾಜೂಕಿನ ಮಾತುಗಳ ಮೂಲಕ ಹಂತ ಹಂತವಾಗಿ ಜನರಿಂದಲೇ ಹಣ ಪೀಕುತ್ತಿದ್ದರು.
ಇದೇ ರೀತಿ ಕೆಲ ದಿನಗಳ ಹಿಂದೆ ವಿದ್ಯಾರಣ್ಯಪುರದ ಬಿಇಎಲ್ ಲೇಔಟ್ ನಿವಾಸಿಗೆ ವಂಚಿಸಿ ₹18.75 ಲಕ್ಷವನ್ನು ದೋಚಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದೇಶದಲ್ಲಿ 2 ಸಾವಿರ, ನಗರದಲ್ಲಿ 135 ಕೇಸ್: ದೇಶದ ವ್ಯಾಪ್ತಿ ಈ ವಂಚಕರ ಜಾಲ ಹರಡಿದ್ದು, ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಕರ್ನಾಟಕ ಸೇರಿದಂತೆ ರಾಷ್ಟ್ರದ 28 ರಾಜ್ಯಗಳಲ್ಲಿ ವರದಿಯಾಗಿದ್ದ ಎರಡು ಸಾವಿರ ಪ್ರಕರಣಗಳು ಪತ್ತೆಯಾಗಿವೆ.
ಬಂಧಿತರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯದ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದೇಶದ 28 ರಾಜ್ಯಗಳಲ್ಲಿ ದಾಖಲಾಗಿದ್ದ 2,143 ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ ಬೆಂಗಳೂರಿನ 135 ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 265 ಪ್ರಕರಣಗಳು ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಂಚಿಸಿದ್ದ ₹158 ಕೋಟಿ, ಸಿಕ್ಕಿದ್ದು ಬರೀ ₹62 ಲಕ್ಷ: ಈ ಆರೋಪಿಗಳು ₹158 ಕೋಟಿ ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೆ ಆರೋಪಿಗಳಿಗೆ ಸೇರಿದ 30 ಬ್ಯಾಂಕ್ ಖಾತೆಗಳಲ್ಲಿ ₹62.83 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್‌ಗಳು, 1 ಲ್ಯಾಪ್‌ಟಾಪ್, 15 ಸಿಮ್ ಕಾರ್ಡ್ ಹಾಗೂ 3 ಬ್ಯಾಂಕ್ ಚೆಕ್ ಬುಕ್‌ಗಳನ್ನು ಜಪ್ತಿಯಾಗಿವೆ.
ವಂಚನೆ ಕೃತ್ಯದಿಂದ ಸಂಪಾದಿಸಿದ ಹಣವನ್ನು ಕ್ಷಣಾರ್ಧದಲ್ಲಿ ಡ್ರಾ ಮಾಡಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬರ್ ವಂಚನೆ ಪ್ರಕರಣದ ಆರೋಪಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಕ್ರಮದ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಈ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳ ಜತೆ ಚರ್ಚೆ ನಡೆದಿದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದರು.