ಫುಟ್‌ಪಾತ್‌ನಲ್ಲಿರುವ ಅನಾಥ ವಾಹನ ಹರಾಜು; ವಿಲೇವಾರಿಗೆ ಬಿಬಿಎಂಪಿ, ಪೊಲೀಸರಿಗೆ ಹೈಕೋರ್ಟ್‌ ಅನುಮತಿ

| Published : Feb 09 2024, 01:50 AM IST / Updated: Feb 09 2024, 12:52 PM IST

car
ಫುಟ್‌ಪಾತ್‌ನಲ್ಲಿರುವ ಅನಾಥ ವಾಹನ ಹರಾಜು; ವಿಲೇವಾರಿಗೆ ಬಿಬಿಎಂಪಿ, ಪೊಲೀಸರಿಗೆ ಹೈಕೋರ್ಟ್‌ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ರಸ್ತೆ-ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಇಲಾಖೆಗೆ ಅನುಮತಿ ನೀಡಿರುವ ಹೈಕೋರ್ಟ್‌, ಅದಕ್ಕಾಗಿ ಕಾಲಮಿತಿ ನಿಗದಿಪಡಿಸಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರಸ್ತೆ-ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಬಿಬಿಎಂಪಿ ಹಾಗೂ ನಗರ ಪೊಲೀಸ್‌ ಇಲಾಖೆಗೆ ಅನುಮತಿ ನೀಡಿರುವ ಹೈಕೋರ್ಟ್‌, ಅದಕ್ಕಾಗಿ ಕಾಲಮಿತಿ ನಿಗದಿಪಡಿಸಿ ಆದೇಶಿಸಿದೆ.

ತ್ಯಾಗರಾಜನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅಪರಿಚಿತ ಹಾಗೂ ವಾರಸುದಾರರು ಪತ್ತೆ ಆಗದ ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಆರು ತಿಂಗಳ ಗಡುವು ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್‌, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿದ 30 ದಿನಗಳಲ್ಲಿ ಹರಾಜು ಹಾಕಬೇಕು. 

1ರಿಂದ 5 ವರ್ಷದ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5ರಿಂದ 15 ವರ್ಷದ ವಾಹನಗಳನ್ನು ಎರಡು ತಿಂಗಳಲ್ಲಿ ಹರಾಜು ಮೂಲಕ ವಿಲೇವಾರಿ ಮಾಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿತು.

ನಗರದ ರಸ್ತೆ-ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ಪಾದಚಾರಿ ಮಾರ್ಗಗಳ ಮೇಲೆ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ನಗರ ಸಂಚಾರ ಪೊಲೀಸ್‌ ವಿಭಾಗದ ಜಂಟಿ ಆಯುಕ್ತ ಅನುಚೇತ್‌ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಲ್ಲಿಸಿರುವ ಪ್ರತ್ಯೇಕ ಪ್ರಮಾಣ ಪತ್ರಗಳನ್ನು ರಾಜ್ಯ ಅಡ್ವೋಕೇಟ್ ಜನರಲ್ (ಎಜಿ) ಕೆ.ಶಶಿಕಿರಣ ಶೆಟ್ಟಿ ನ್ಯಾಯಪೀಠಕ್ಕೆ ಒದಗಿಸಿದರು.

ರಸ್ತೆ ಹಾಗೂ ಪಾದಚಾರಿ ಮಾರ್ಗದ ಮೇಲೆ 15 ಮತ್ತು ಅದಕ್ಕಿಂತ ಹೆಚ್ಚು ದಿನ ನಿಲುಗಡೆ ಮಾಡಿದ ವಾಹನಗಳನ್ನು ಗುರುತಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಈ ತಂಡ ವಾಹನಗಳನ್ನು ತೆಗೆಯುವಂತೆ ಸ್ಟಿಕ್ಕರ್ ಅಳವಡಿಸುತ್ತದೆ. 

ನಂತರವೂ ಅವು ಅಲ್ಲಿಯೇ ಇದ್ದರೆ ಮಹಜರು ನಡೆಸಿ ಸಂಗ್ರಹಣಾ ಸ್ಥಳಕ್ಕೆ ಟೋಯಿಂಗ್ ಮಾಡಲಾಗುವುದು. ನಂತರ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಸಂಪರ್ಕಿಸಿ, ವಾಹನಗಳ ಮಾಲೀಕರ ವಿಳಾಸ ಹಾಗೂ ಅವುಗಳ ಮೇಲಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಎಜಿ ತಿಳಿಸಿದರು.

ಅಲ್ಲದೆ, ವಾಹನ ಮಾಲೀಕರಿಗೆ ದಂಡ ಪಾವತಿಸಲು ಸೂಚಿಸಲಾಗುವುದು. ದಂಡ ಪಾವತಿಸದಿದ್ದರೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅನುಮತಿ ಪಡೆದು ಸಾಧ್ಯವಾದರೆ ಹರಾಜು ಅಥವಾ ಗುಜರಿಗೆ ಹಾಕುವ ಮೂಲಕ ವಿಲೇವಾರಿ ಮಾಡಲಾಗುವುದು. 

ಗೆಜೆಟ್ ಪ್ರಕಟಣೆಯ ದಿನದಿಂದ ಆರು ತಿಂಗಳಲ್ಲಿ ವಾಹನಗಳನ್ನು ಹರಾಜು ಹಾಕಲು 2023ರ ಜು.11ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಆ ಅವಧಿಯನ್ನು 15 ದಿನಕ್ಕೆ ಇಳಿಸಿದರೆ ತ್ವರಿತ ಹಾಗೂ ಸುಲಭ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಎಜಿ ತಿಳಿಸಿದರು.

ಪ್ರತ್ಯೇಕ ವ್ಯಾಪಾರ ವಲಯ: ತುಷಾರ್‌
ಬಿಬಿಎಂಪಿ ವ್ಯಾಪ್ತಿಯ 609.89 ಕಿ.ಮೀ. ಮತ್ತು 734.45 ಕಿ.ಮೀ. ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗದ ಮೇಲೆ ಶಾಶ್ವತ ಹಾಗೂ ಉಪ ಶಾಶತ್ವದ ನಿರ್ಮಾಣಗಳನ್ನು ಅನುಮತಿಸುವುದಿಲ್ಲ. 

ರಸ್ತೆ-ಪಾದಚಾರಿ ಮಾರ್ಗದಿಂದ ಅವರನ್ನು ತೆರವುಗೊಳಿಸಿ, ಅವರ ಜೀವನಾಧಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ನಗರದ ಎಂಟು ವಲಯದಲ್ಲಿ ವ್ಯಾಪಾರ ವಲಯ ಗುರುತಿಸಲಾಗುವುದು. 

ವ್ಯಾಪಾರಕ್ಕೆ ಸಮಯ ನಿಗದಿಪಡಿಸಲು ಮಾರ್ಗಸೂಚಿ ರೂಪಿಸಲಾಗುವುದು. ಅಲ್ಲಿಯವರಗೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಬೀದಿ ವ್ಯಾಪಾರಿಗಳ ವ್ಯಾಪಾರವನ್ನು ಮೇಲ್ವಿಚಾರಣೆ ನಡೆಸಲಾಗುವುದು ಎಂದು ತುಷಾರ್‌ ಗಿರಿನಾಥ್‌ ತಮ್ಮ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

2022ರಲ್ಲಿ 1.53 ವಾಹನ ಮೇಲೆ ಪ್ರಕರಣ ದಾಖಲು
ರಸ್ತೆ-ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ ಸಂಬಂಧ 2021ರಲ್ಲಿ 74,851, 2022ರಲ್ಲಿ 1,53,983, 2023ರಲ್ಲಿ 78,238 ಮತ್ತು 20214ರಲ್ಲಿ 479 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. 

ಅಲ್ಲದೆ, ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸಿದ ವಾಹನಗಳ ಸಂಬಂಧ 2021ರಲ್ಲಿ 8,422, 2022ರಲ್ಲಿ 18,144, 2023ರಲ್ಲಿ 9,547, 2024ರಲ್ಲಿ 113 ಪ್ರಕರಣ ದಾಖಲಿಸಲಾಗಿದೆ ಎಂದು ಅನುಚೇತ್‌ ಅವರು ತಮ್ಮ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.