ಸಾರಾಂಶ
ಬೆಂಗಳೂರು : ಇತ್ತೀಚೆಗೆ ನಟಿಯೊಬ್ಬರು ತಮ್ಮ ಕಾರಿನ ಡಿಕ್ಕಿಯಲ್ಲಿ ಇರಿಸಿದ್ದ ವಜ್ರದ ಉಂಗುರ ಸೇರಿದಂತೆ ಕೆಲ ದುಬಾರಿ ವಸ್ತುಗಳಿದ್ದ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆ ನಿವಾಸಿ ರಾಜ್ ಮಹಮ್ಮದ್ ಮಸ್ತಾನ್ (45) ಬಂಧಿತ. ಆರೋಪಿಯಿಂದ 22.50 ಲಕ್ಷ ರು. ಮೌಲ್ಯದ ವಜ್ರದ ಬ್ಯಾಂಡ್, ವಜ್ರದ ರಿಂಗ್, ದುಬಾರಿ ವಾಚು, ವ್ಯಾಲೆಟ್ ಹಾಗೂ ಏರ್‌ಪಾಡ್ ಜಪ್ತಿ ಮಾಡಲಾಗಿದೆ.
ನಟಿ ರುಕ್ಮಿಣಿ ವಿಜಯ್ ಕುಮಾರ್ ಅವರು ಮೇ 11ರಂದು ಬೆಳಗ್ಗೆ 8 ಗಂಟೆಗೆ ಕ್ವೀನ್ಸ್ ರಸ್ತೆಯ ಬಸ್ ನಿಲ್ದಾಣದ ಬಳಿ ತಮ್ಮ ಕಾರನ್ನು ನಿಲ್ಲಿಸಿ ಕಬ್ಬನ್ ಪಾರ್ಕ್‌ಗೆ ವಾಯು ವಿಹಾರಕ್ಕೆ ತೆರಳಿದ್ದರು. ಒಂದು ತಾಸಿನ ಬಳಿಕ ವಾಪಸ್ ಕಾರಿನ ಬಳಿ ಬಂದಾಗ ಕಾರಿನ ಡಿಕ್ಕಿಯಲ್ಲಿದ್ದ ಬ್ಯಾಗ್ ಕಳವಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲಿ ಬಚ್ಚಿಟ್ಟಿದ್ದ ವಸ್ತುಗಳು ಜಪ್ತಿ:
ಪ್ರಕರಣ ಸಂಬಂಧ ತನಿಖೆ ನಡೆಸಿ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಮೇ 15ರಂದು ಮಹಾಲಕ್ಷ್ಮೀ ಲೇಔಟ್‌ನ ಗಣೇಶ ಬ್ಲಾಕ್ ಹತ್ತಿರ ಆರೋಪಿ ಮಸ್ತಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಬ್ಯಾಗ್ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಲಗ್ಗೆರೆಯ ಆತನ ಮನೆಯಲ್ಲಿ ಬಚ್ಚಿಟ್ಟಿದ್ದ 22.50 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಡಿಕ್ಕಿ ಲಾಕ್ ಮಾಡಿರಲಿಲ್ಲ:
ಆರೋಪಿ ಮಸ್ತಾನ್ ವೃತ್ತಿಯಲ್ಲಿ ಕ್ಯಾಬ್ ಚಾಲಕ. ರುಕ್ಷ್ಮಿಣಿ ವಿಜಯ್ ಕುಮಾರ್ ಅಂದು ದುಬಾರಿ ವಸ್ತುಗಳು ಇದ್ದ ಬ್ಯಾಗ್‌ನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಇರಿಸಿ, ವಾಯು ವಿಹಾರಕ್ಕೆ ಕಬ್ಬನ್ ಪಾರ್ಕ್ ತೆರಳಿದ್ದರು. ಆದರೆ, ಕಾರಿನ ಡಿಕ್ಕಿ ಲಾಕ್ ಮಾಡುವುದನ್ನು ಮರೆತಿದ್ದರು. ಈ ವೇಳೆ ಅಲ್ಲೇ ಕ್ಯಾಬ್ ನಿಲ್ಲಿಸಿಕೊಂಡು ನಿಂತಿದ್ದ ಮಸ್ತಾನ್, ಡಿಕ್ಕಿ ತೆಗೆದು ಆ ಬ್ಯಾಗ್ ಕಳವು ಮಾಡಿ ಪರಾರಿಯಾಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.