ಕಮಿಷನ್ ಆಸೆಗೆ ಚೀನಾಕ್ಕೆ ಮಾಹಿತಿ ನೀಡುತ್ತಿದ್ದ ಮೂವರು ಸೈಬರ್ ವಂಚಕರು ಪೊಲೀಸ್ ವಶಕ್ಕೆ

| Published : Jan 12 2025, 01:16 AM IST / Updated: Jan 12 2025, 04:18 AM IST

ಸಾರಾಂಶ

ಸೈಬರ್‌ ವಂಚನೆ ಕೃತ್ಯಗಳಲ್ಲಿ ಜನರಿಂದ ಹಣ ದೋಚಲು ಚೀನಾ ಪ್ರಜೆಗಳಿಗೆ ನೆರವಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ಕಮಿಷನ್ ಪಡೆಯುತ್ತಿದ್ದ ಮೂವರನ್ನು ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

 ಬೆಂಗಳೂರು : ಸೈಬರ್‌ ವಂಚನೆ ಕೃತ್ಯಗಳಲ್ಲಿ ಜನರಿಂದ ಹಣ ದೋಚಲು ಚೀನಾ ಪ್ರಜೆಗಳಿಗೆ ನೆರವಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ಕಮಿಷನ್ ಪಡೆಯುತ್ತಿದ್ದ ಮೂವರನ್ನು ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಳ್ಳಂದೂರಿನ ಸಂಜಯ್‌ ದೇಯ್‌, ಅಸ್ಸಾಂ ರಾಜ್ಯದ ಬಿಕಾಸ್ ದಾಸ್ ಹಾಗೂ ಲೋಕಿಜಾಯ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು ಹಾಗೂ 5 ಡೆಬಿಟ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತೀಚಿಗೆ ಆನ್‌ಲೈನ್‌ ಕಂಪನಿಯಲ್ಲಿ ಹೂಡಿಕೆಯಲ್ಲಿ ಸುಲಭವಾಗಿ ಹಣ ಸಂಪಾದಿಸುವುದಾಗಿ ಆಮಿಷವೊಡ್ಡಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ಟೋಪಿ ಹಾಕಿ ಹಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಸಿಇಎನ್‌ ಠಾಣೆ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದ ತಂಡ, ಹಣ ವರ್ಗಾವಣೆ ಜಾಲವನ್ನು ಶೋಧಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ವಂಚನೆ ಹೇಗೆ:

ಕೆಲ ದಿನಗಳ ಹಿಂದೆ ದೂರುದಾರರಿಗೆ ದಿವ್ಯ ಅಶೋಕ್ (7742218528) @Divya_ash19900 ಎಂಬುವವರು ಟೆಲಿಗ್ರಾಂ ಮೂಲಕ ಪರಿಚಯವಾಗಿದ್ದರು. ಆಗ ತಾವು ನೀಡುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಪ್ರತಿ ದಿನ 500 ರಿಂದ 4000 ರು ವರೆಗೆ ಹಣವನ್ನು ಗಳಿಸಬಹುದು ಎಂದಿದ್ದಳು. ಈ ಮಾತಿಗೆ ಸಮ್ಮತಿಸಿದ ದೂರುದಾರರು, ಸೈಬರ್‌ ವಂಚಕಿ ಸೂಚಿಸಿದ ಖಾತೆಗೆ ಹಂತ ಹಂತವಾಗಿ 2, 69,209 ರು.ವರ್ಗಾಯಿಸಿದ್ದರು. ತರುವಾಯ ಈ ಹೂಡಿಕೆ ಹಣವನ್ನು ವಿತ್ ಡ್ರಾ ಮಾಡಲು ಹೋದರೆ 4.85 ಲಕ್ಷ ರು ಪಾವತಿಸಿದರೆ 12.32 ಲಕ್ಷ ಹಣವನ್ನು ನೀಡುವುದಾಗಿ ಆರೋಪಿಗಳು ತಿಳಿಸಿದ್ದರು. ಆದರೆ ಈ ಆಫರ್ ಬಗ್ಗೆ ಶಂಕೆಗೊಂಡ ಅವರು, ತಾವು ವಂಚನೆಗೊಳಗಾಗಿರುವುದಾಗಿ ಅರಿವಾಗಿ ದೂರು ನೀಡಿದ್ದರು.

ಬ್ಯಾಂಕ್ ಖಾತೆಗಳು ನೀಡಿದ ಸುಳಿವು:

ಈ ವಂಚನೆ ಪ್ರಕರಣದ ತನಿಖೆಗಿಳಿದ ಪೊಲೀಸರು, ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಐದಾರು ತಿಂಗಳ ಹಿಂದೆ ಮಾರತ್ತಹಳ್ಳಿಯಲ್ಲಿ ಷೇರು ಹೂಡಿಕೆ ಕುರಿತು ಮಾಹಿತಿ ನೀಡುವ ಕಂಪನಿ ಹೆಸರಿನಲ್ಲಿ ‘ದೇಬಂಶಿ ಎಂಟರ್‌ಪ್ರೈಸಸ್‌’ ಎಂಬ ನಕಲಿ ಕಂಪನಿಯನ್ನು ಅಸ್ಸಾಂ ರಾಜ್ಯದ ಆರೋಪಿಗಳು ತೆರೆದಿದ್ದರು. ನಂತರ ಆ ಕಂಪನಿ ಹೆಸರಿನಲ್ಲಿ 10ಕ್ಕೂ ಹೆಚ್ಚಿನ ಬ್ಯಾಂಕ್‌ ಖಾತೆಗಳನ್ನು ತೆರೆದು ಬಳಿಕ ಆ ಖಾತೆಗಳನ್ನು ಟೆಲಿಗ್ರಾಂ ಮೂಲಕ ಚೀನಾ ದೇಶದ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳಿಗೆ ಚೀನಾ ದೇಶದ ಸೈಬರ್ ಮೋಸಗಾರರು ಬಿಟ್‌ ಕಾಯಿನ್ ಮೂಲಕ ಕಮಿಷನ್ ರವಾನಿಸಿದ್ದರು. ಚೀನಾ ಮೂಲದ ವ್ಯಕ್ತಿಗಳಿಂದ 10% ವರೆಗೆ ಯುಎಸ್‌ಡಿಟಿ ರೂಪದಲ್ಲಿ ಅಕ್ರಮವಾಗಿ ಹಣವನ್ನು ಪಡೆದು ಲಾಭಾಂಶವನ್ನು ಹಂಚಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೀನಾದಿಂದ ಕಮಿಷನ್‌ಗೆ ಸಾಕ್ಷಿ

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮೋಸದ ಜಾಲಕ್ಕೆ ಆಂಧ್ರಪ್ರದೇಶದ ಸಂಜಯ್‌ ದೇಯ್‌, ಅಸ್ಸಾಂ ರಾಜ್ಯದ ಬಿಕಾಸ್ ದಾಸ್ ಹಾಗೂ ಲೋಕಿಜಾಯ್‌ಗೆ ಗಾಳ ಹಾಕಿ ಚೀನಾ ವಂಚಕರು ಬೀಳಿಸಿಕೊಂಡಿದ್ದರು. ಬಳಿಕ ಈ ಮೂವರಿಗೆ ಹಣದಾಸೆ ತೋರಿಸಿ ನಕಲಿ ಕಂಪನಿಯನ್ನು ಚೀನಾ ಪ್ರಜೆಗಳು ಸ್ಥಾಪಿಸಿದ್ದರು. ಇನ್ನು ಬ್ಯಾಂಕ್ ಖಾತೆಗಳಲ್ಲಿ ಚೀನಾ ಪ್ರಜೆಗಳಿಗೆ ಹಣ ವರ್ಗಾವಣೆ ಹಾಗೂ ಅದಕ್ಕೆ ಪ್ರತಿಯಾಗಿ ಕಮಿಷನ್ ಪಡೆದಿರುವುದಕ್ಕೆ ತನಿಖೆಯಲ್ಲಿ ಪುರಾವೆ ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್ ಖಾತೆಗೆ ನಕಲಿ ಕಂಪನಿ

ಸೈಬರ್ ವಂಚನೆ ಕೃತ್ಯದಲ್ಲಿ ಸಂಪಾದಿಸಿದ ಹಣವನ್ನು ದೋಚುವ ಸಲುವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಉದ್ದೇಶದಿಂದಲೇ ಆರೋಪಿಗಳು ನಕಲಿ ಕಂಪನಿ ಆರಂಭಿಸಿದ್ದರು. ಕಂಪನಿ ಪ್ರಾರಂಭಿಸಿದರೆ ಅವುಗಳ ಆರ್ಥಿಕ ವಹಿವಾಟಿಗೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಸುಲಭವಾಗುತ್ತದೆ. ಹೀಗಾಗಿಯೇ ಷೇರು ಪೇಟೆ ಮಾಹಿತಿ ನೀಡುವ ನಕಲಿ ಕಂಪನಿಯನ್ನು ಆರೋಪಿಗಳು ಸ್ಥಾಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.