ತಮ್ಮ ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಗ್ರಾಹಕರ ಚಿನ್ನಾಭರಣ ಕಳವು ಮಾಡಿದ್ದ ಖಾಸಗಿ ಬ್ಯಾಂಕ್‌ನ ಇಬ್ಬರು ನೌಕರರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ತಮ್ಮ ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಗ್ರಾಹಕರ ಚಿನ್ನಾಭರಣ ಕಳವು ಮಾಡಿದ್ದ ಖಾಸಗಿ ಬ್ಯಾಂಕ್‌ನ ಇಬ್ಬರು ನೌಕರರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ನಿವಾಸಿಗಳಾದ ಹರ್ಷಿತ್ ಹಾಗೂ ಐಶ್ವರ್ಯ ಬಂಧಿತರಾಗಿದ್ದು, ಆರೋಪಿಗಳಿಂದ 16 ಲಕ್ಷ ರು. ಮೌಲ್ಯದ 170 ಗ್ರಾಂ ಚಿನ್ನ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಆಭರಣ ಪರಿಶೀಲನೆಗೆ ಆರೋಪಿಗಳ ಸಹೋದ್ಯೋಗಿ ಹೋದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಸಾಲ ತೀರಿಸಲು ಕಳ್ಳತನ:

ಕಳೆದ ಐದು ವರ್ಷಗಳಿಂದ ಬಸವೇಶ್ವರನಗರದ ಖಾಸಗಿ ಬ್ಯಾಂಕ್‌ನಲ್ಲಿ ಹರ್ಷಿತ್ ಹಾಗೂ ಐಶ್ವರ್ಯ ಕೆಲಸ ಮಾಡುತ್ತಿದ್ದು, ಒಂದೆಡೆ ಕೆಲಸ ಮಾಡುವಾಗ ಇಬ್ಬರು ಆತ್ಮೀಯರಾಗಿದ್ದರು. ಮನೆ ನಿರ್ಮಾಣಕ್ಕಾಗಿ ಐಶ್ವರ್ಯ ಹಾಗೂ ಮೋಜು ಜೀವನಕ್ಕೆ ಹರ್ಷಿತ್ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ತುತ್ತಾಗಿದ್ದರು. ತಮ್ಮ ಬಳಿ ಇದ್ದ ಚಿನ್ನಾಭರಣವನ್ನು ಸಹ ಅಡಮಾನವಿಟ್ಟು ಸಾಲ ಪಡೆದಿದ್ದ ಅವರು, ಪ್ರತಿ ತಿಂಗಳ ಸಾಲದ ಕಂತು ತೀರಿಸಲು ಪರದಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮನೆಯಲ್ಲಿದ್ದ ಚಿನ್ನಾಭರಣಗಳ ಸುರಕ್ಷತೆಯಾಗಿಡಲು ಆ ಬ್ಯಾಂಕ್‌ನ ಅಧಿಕಾರಿ ಶ್ರೀಶ ಅವರು, ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕ್‌ನಲ್ಲಿ ಲಾಕರ್ ಪಡೆದಿದ್ದರು. ಆಗ ತಮ್ಮ ಸಹೋದ್ಯೋದಿಗಳಿಗೆ ಆಭರಣವನ್ನು ತೋರಿಸಿ ಅವರು ಲಾಕರ್‌ನಲ್ಲಿಟ್ಟಿದ್ದರು. ಹೀಗಿರುವಾಗ ಅದೇ ತಿಂಗಳಲ್ಲಿ ಸಾಲದ ಕಂತು ತೀರಿಸಲು ಐಶ್ವರ್ಯಳಿಗೆ ಸಮಸ್ಯೆಯಾಗಿದೆ. ಆಗ ತಮ್ಮ ಲಾಕರ್‌ನಲ್ಲಿ ಶ್ರೀಶ ಇಟ್ಟಿದ್ದ ಆಭರಣ ಕದ್ದು ಬೇರೆಡೆ ಅಡಮಾನವಿಡಲು ಹರ್ಷಿತ್ ಸಲಹೆ ನೀಡುತ್ತಾನೆ.

ಕೊನೆಗೆ ಬ್ಯಾಂಕ್‌ನಲ್ಲಿ ಯಾರೂ ಇಲ್ಲದ ವೇಳೆ ಲಾಕರ್‌ ಕೀ ಪಡೆದು ಆಭರಣ ಕ‍ಳವು ಮಾಡಿ ತಮ್ಮ ಪರಿಚಿತ ಆಭರಣದ ವ್ಯಾಪಾರಿಗೆ ಮಾರಾಟ ಮಾಡಿ ಆರೋಪಿಗಳು ಹಣ ಪಡೆದಿದ್ದರು. ಕೆಲ ದಿನಗಳ ಬಳಿಕ ಲಾಕರ್‌ನಲ್ಲಿಟ್ಟಿದ್ದ ಆಭರಣ ಪಡೆಯಲು ಶ್ರೀಶ ತೆರಳಿದಾಗ ಕಳ್ಳತನ ಕೃತ್ಯ ಬಯಲಾಗಿದೆ. ಬಳಿಕ ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಅಂತೆಯೇ ತನಿಖೆಗಿಳಿದ ಸಬ್ ಇನ್ಸ್‌ಪೆಕ್ಟರ್‌ ಭಾನುಪ್ರಕಾಶ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಬ್ಯಾಂಕ್ ನೌಕರರ ಮೇಲೆ ಶಂಕೆ ಮೂಡಿದೆ.

ಅಲ್ಲದೆ ಈ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕ ಸೇರಿ ಆರು ಮಂದಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಒಬ್ಬರ ಆಭರಣ ಕಳ್ಳತನವಾಗಿತ್ತು. ಇನ್ನುಳಿದ ಐವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಹರ್ಷಿತ್ ಹಾಗೂ ಐಶ್ವರ್ಯ ಕೊನೆಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.