ಸಾರಾಂಶ
ಸಂಕಷ್ಟದಲ್ಲಿರುವ ಚಿತ್ರಮಂದಿರಗಳನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲು ಚಿತ್ರರಂಗ ನಿರ್ಧರಿಸಿದೆ.
ಬೆಂಗಳೂರು : ಸಂಕಷ್ಟದಲ್ಲಿರುವ ಚಿತ್ರಮಂದಿರಗಳನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲು ಚಿತ್ರರಂಗ ನಿರ್ಧರಿಸಿದೆ. ಈ ಕುರಿತು ಶಿವರಾಜ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಹೆಚ್ಚಿನ ಸಿನಿಮಾಗಳನ್ನು ಮಾಡುವ ಕುರಿತು ಸ್ಟಾರ್ ನಟರ ಜೊತೆ ಮಾತುಕತೆ ನಡೆಸುವುದಕ್ಕೂ ಚಿತ್ರರಂಗ ಮುಂದಾಗಿದೆ.
ಶಿವರಾಜ್‌ಕುಮಾರ್ ಅವರ ಮನೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರು, ‘ನಾನು ಬೆಂಗಳೂರಿನಲ್ಲೇ ಮೂರು ಚಿತ್ರಮಂದಿರಗಳನ್ನು ನಡೆಸುತ್ತಿದ್ದೇನೆ. ಸಿನಿಮಾಗಳಿಲ್ಲದೆ ಥಿಯೇಟರ್‌ಗಳು ಮುಚ್ಚುವಂತಾಗಿದೆ. ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ಕೂಡ ಮಾಡುತ್ತಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳು ಇಲ್ಲದೆ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಸ್ಟಾರ್ ನಟರ ಸಿನಿಮಾಗಳ ಸಂಖ್ಯೆ ಹೆಚ್ಚಾಗಬೇಕು, ಜತೆಗೆ ಚಿತ್ರಮಂದಿರಗಳ ಉಳಿವಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಚಿತ್ರಮಂದಿರಗಳ ನವೀಕರಣಕ್ಕೆ 50 ಲಕ್ಷ ಸಬ್ಸಿಡಿ ಇದೆ. ಆದರೆ, ಅದನ್ನು ಪಡೆಯಲು ಸಾಕಷ್ಟು ಷರತ್ತುಗಳು ಇವೆ. ವಿದ್ಯುತ್ ಬಿಲ್ ಹಾಗೂ ತೆರಿಗೆ ಕಡಿತ, ಸಬ್ಸಿಡಿಯಲ್ಲಿ ಲೋನ್ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಇಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮಾತನಾಡಿ, ‘ಸಭೆಯಲ್ಲಿ ಮುಖ್ಯವಾಗಿ ಏಕಪರದೆ ಚಿತ್ರಮಂದಿರಗಳ ಉಳಿವಿಗಾಗಿ ಸರ್ಕಾರದಿಂದ ಯಾವ ರೀತಿ ನೆರವು ಪಡೆಯಬೇಕು ಎಂಬುದನ್ನು ಚರ್ಚೆ ಮಾಡಲಾಯಿತು. ಚಿತ್ರಮಂದಿರಗಳನ್ನು ನಡೆಸಲಾಗದೆ ಅವುಗಳನ್ನು ಒಡೆದು ಕಾಂಪ್ಲೆಕ್ಸ್‌ಗಳನ್ನು ಕಟ್ಟಲಾಗುತ್ತಿದೆ. ಈಗ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಅಗತ್ಯ ಇದೆ. ಹೀಗಾಗಿ ಪ್ರದರ್ಶಕರ ಜತೆಗೆ ಮಾತುಕತೆ ಮಾಡಲು ಸಭೆ ಕರೆಯಲಾಗಿತ್ತು. ಪ್ರದರ್ಶಕರ ಪರ ನಾವು ಹೇಳಿದ ಎಲ್ಲಾ ಅಭಿಪ್ರಾಯಗಳನ್ನು ಶಿವಣ್ಣ ಆಲಿಸಿದರು. ಇನ್ನು ಒಂದು ತಿಂಗಳೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರಮಂದಿರಗಳ ಉಳಿವಿಗೆ ನೆರವು ಕೋರಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಚಿತ್ರಮಂದಿರಗಳು ಉಳಿಯಬೇಕು ಎಂದರೆ ಮೊದಲ ಹಂತವಾಗಿ ಲ್ಯಾಂಡ್ ತೆರಿಗೆ, ವಿದ್ಯುತ್ ಬಿಲ್ ಕಡಿತ ಹಾಗೂ ಚಿತ್ರಮಂದಿರಗಳ ನವೀಕರಣಕ್ಕೆ ಕಡಿಮೆ ಬಡ್ಡಿದರಲ್ಲಿ ಲೋನ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಶಿವರಾಜ್‌ಕುಮಾರ್ ಅವರೇ ನಮ್ಮ ನಾಯಕರು. ಹೀಗಾಗಿ ಅವರ ನೇತೃತ್ವದಲ್ಲಿ ನಿಯೋಗ ಮಾಡಿಕೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು’ ಎಂದು ಕೆ ವಿ ಚಂದ್ರಶೇಖರ್ ತಿಳಿಸಿದರು.
ಸಭೆಯಲ್ಲಿ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ದುನಿಯಾ ವಿಜಯ್, ಧ್ರುವ ಸರ್ಜಾ ಮುಂತಾದವರು ಪಾಲ್ಗೊಂಡಿದ್ದರು.