ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ, ಬೇರೆ ಭಾಷೆ ಸಿನಿಮಾ ಮಾಡಲ್ಲ : ದರ್ಶನ್‌ ಹೇಳಿದ್ದು ಟ್ರೆಂಡಿಂಗ್‌

| N/A | Published : Mar 29 2025, 12:30 AM IST / Updated: Mar 29 2025, 06:30 AM IST

ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ, ಬೇರೆ ಭಾಷೆ ಸಿನಿಮಾ ಮಾಡಲ್ಲ : ದರ್ಶನ್‌ ಹೇಳಿದ್ದು ಟ್ರೆಂಡಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಿನಿಮಾಗಳನ್ನು ನೋಡದಿದ್ದರೆ ನಾವು ಇಲ್ಲಿಂದ ಬೇರೆಲ್ಲೋ ಹೋಗೋದಿಲ್ಲ. ತೋಟ, ಹಸು ಸಾಕಿಕೊಂಡು ಬದುಕ್ತೀವಿ. ಮಾಡೋದಿದ್ರೆ ಕನ್ನಡ ಸಿನಿಮಾವನ್ನೇ ಮಾಡ್ತೀವಿ ಎಂದು ದರ್ಶನ್‌ ಹೇಳಿದ್ದು ಟ್ರೆಂಡಿಂಗ್‌ ಆಗಿದೆ.

 ‘ಇಂಡಸ್ಟ್ರಿಯಲ್ಲಿರುವ ಬಹಳಷ್ಟು ಜನ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ನಾವು ಕೆಲವರು ಮಾತ್ರ ಇಲ್ಲಿಗೆ ಸೀಮಿತವಾಗಿ ಕನ್ನಡ ಚಿತ್ರಗಳನ್ನಷ್ಟೇ ಮಾಡುತ್ತಿದ್ದೇವೆ. ನೀವು ಕನ್ನಡ ಸಿನಿಮಾಗಳನ್ನು ನೋಡದಿದ್ದರೆ ನಾವು ಇಲ್ಲಿಂದ ಬೇರೆಲ್ಲೋ ಹೋಗೋದಿಲ್ಲ. ತೋಟ, ಹಸು ಸಾಕಿಕೊಂಡು ಬದುಕ್ತೀವಿ. ಮಾಡೋದಿದ್ರೆ ಕನ್ನಡ ಸಿನಿಮಾವನ್ನೇ ಮಾಡ್ತೀವಿ.’

- ಇವು ನಟ ದರ್ಶನ್‌ ಮಾತುಗಳು.

ಧನ್ವೀರ್‌ ನಟನೆಯ ‘ವಾಮನ’ ಸಿನಿಮಾದ ಟ್ರೇಲರನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ದರ್ಶನ್‌, ‘ಈ ಸಿನಿಮಾದ ಮುದ್ದು ರಾಕ್ಷಸಿ ಹಾಡು ನನಗಿಷ್ಟ. ನನ್ನ ಹೆಂಡತಿ ಸಿಟ್ಟಲ್ಲಿ ಕಯ್ಯ ಕಯ್ಯ ಅಂದರೆ ಆಕೆಯನ್ನು ಮುದ್ದು ರಾಕ್ಷಸಿ ಅಂತ ಕರೀತೀನಿ’ ಎಂದೂ ಹೇಳಿದ್ದಾರೆ.

‘ಕನ್ನಡ ಚಿತ್ರರಂಗವನ್ನು ಮತ್ತು ಕನ್ನಡ ಪ್ರೇಕ್ಷಕರನ್ನೇ ನಾವು ನಂಬಿಕೊಂಡಿದ್ದೇವೆ. ಇದೊಂದು ಬಗೆಯಲ್ಲಿ ಜೀವ ವಿಜ್ಞಾನದ ಸರಪಳಿಯ ಹಾಗೆ. ಅದರಲ್ಲಿ ಹುಳವನ್ನು ಕಪ್ಪೆ ತಿನ್ನುತ್ತದೆ. ಕಪ್ಪೆಯನ್ನು ಹಾವು, ಹಾವನ್ನು ಹದ್ದು, ಹದ್ದು ಸತ್ತರೆ ಅದನ್ನು ಹುಳವೇ ತಿನ್ನೋದು. ಹೀಗೆ ಚಿತ್ರರಂಗವೂ ಪರಸ್ಪರ ಅವಲಂಬನೆ ಮೇಲೇ ನಿಂತಿದೆ. ಧನ್ವೀರ್‌ ಮೊದಲಿನಿಂದಲೂ ಭಿನ್ನ ಪಾತ್ರಗಳನ್ನು ಮಾಡುತ್ತ ಬಂದಿದ್ದಾರೆ. ವಾಮನ ತಾಯಿ ಸೆಂಟಿಮೆಂಟಿನ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ವ್ಯಕ್ತಿ ಹೇಗೆ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದೂ ದರ್ಶನ್‌ ಹೇಳಿದ್ದಾರೆ.

ನಾಯಕ ಧನ್ವೀರ್‌, ‘ದರ್ಶನ್‌ ದೂರದ ಊರಿನಲ್ಲಿ ಶೂಟಿಂಗ್‌ನಲ್ಲಿದ್ದಾರೆ. ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂದು ತಾನಿರುವ ಕಡೆಗೆ ನನ್ನನ್ನು ಕರೆಸಿಕೊಂಡು ಅಲ್ಲೇ ಟ್ರೇಲರ್‌ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಚಿತ್ರಮಂದಿರದಲ್ಲೇ ವಾಮನ ಸಿನಿಮಾ ನೋಡೋದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ವಿಶೇಷತೆಗಳಿವೆ’ ಎಂದರು.

ನಿರ್ದೇಶಕ ಶಂಕರ್‌ ರಾಮನ್‌, ‘ಇದು ತಾಯಿ ಮಗನ ಬಾಂಧವ್ಯದ ಕಥೆ. ಮನರಂಜನಾತ್ಮಕ ಅಂಶಗಳೂ ಸಾಕಷ್ಟಿವೆ’ ಎಂದರು.

ನಾಯಕಿ ರೀಷ್ಮಾ ನಾಣಯ್ಯ, ನಿರ್ಮಾಪಕ ಚೇತನ್‌ ಗೌಡ, ಸಹ ನಿರ್ಮಾಪಕಿ ರೂಪಾ ಚೇತನ್‌, ಕಲಾವಿದರಾದ ತಾರಾ ಅನೂರಾಧ, ಸಂಪತ್‌ ರಾಜ್‌, ಚಿತ್ಕಲಾ ಬಿರಾದಾರ್‌ ಇದ್ದರು.

ದರ್ಶನ್‌ ಗೈರಿಗೆ ಅಭಿಮಾನಿಗಳ ಆಕ್ರೋಶ

ಚಿತ್ರತಂಡ ಟ್ರೇಲರನ್ನು ದರ್ಶನ್‌ ಬಿಡುಗಡೆ ಮಾಡುತ್ತಾರೆ ಎಂದು ಹೇಳಿತ್ತು. ಹಾಗಾಗಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿನ ಪ್ರಸನ್ನ ಥೇಟರ್‌ಗೆ ಆಗಮಿಸಿದ್ದರು. ಆದರೆ ಚಿತ್ರತಂಡ ದರ್ಶನ್‌ ಶುಭ ಹಾರೈಕೆಯ ವೀಡಿಯೋ ಹಾಕಿದ ತಕ್ಷಣ ದರ್ಶನ್‌ ಬರುವುದಿಲ್ಲ ಅನ್ನುವುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ. ಇದರಿಂದ ಆಕ್ರೋಶಿತರಾದ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.