ಸಾರಾಂಶ
ಸಿನಿವಾರ್ತೆ : ಒಂದು ವಿಶಿಷ್ಠವಾದ ಗಿಡದ ಸುತ್ತ ನಡೆಯುವ ಕತೆಯನ್ನು ಒಳಗೊಂಡ ಚಿತ್ರಕ್ಕೆ ‘ದೇವಸಸ್ಯ’ ಎನ್ನುವ ಹೆಸರು ಇಟ್ಟಿದ್ದು, ಇದರ ಶೀರ್ಷಿಕೆ ಟೀಸರ್ ಅನಾವರಣ ಆಗಿದೆ. ಅನಂತಕುಮಾರ್ ಹೆಗ್ಡೆ ನಿರ್ಮಾಣದ, ಕಾರ್ತೀಕ್ ಭಟ್ ನಿರ್ದೇಶನದ ಚಿತ್ರವಿದು. ನವೀನ್ ಕೃಷ್ಣ ಟೈಟಲ್ ಟೀಸರ್ ಬಿಡುಗಡೆ ಮಾಡಿದರು.
ಕಾರ್ತಿಕ್ ಭಟ್, ‘ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಕತೆಯಿದು. ಇಲ್ಲಿ ಎರಡು ಊರುಗಳ ಮಧ್ಯೆ ನಡೆಯುವ ಕತೆಯೂ ಇದೆ. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನಾ ಮಾಡಿದ್ದಾರೆ. ಬಿಂಬಿಕಾ ಚಿತ್ರದ ನಾಯಕಿ. 1995ರಲ್ಲಿ ನಡೆಯುವ ಕತೆಯಾಗಿದ್ದರಿಂದ ಸೆಟ್‌ಗಳನ್ನು ಹಾಕಿದ್ದು, 45 ದಿನಗಳ ಚಿತ್ರೀಕರಣ ಆಗಿದೆ’ ಎಂದರು.
ಅನಂತಕುಮಾರ್ ಹೆಗ್ಡೆ, ‘ನನಗೆ ಮೊದಲಿಂದಲೂ ಸಿನಿಮಾ ಹೀರೋ ಆಗಬೇಕೆಂಬ ಆಸೆಯಿತ್ತು. ಈಗ ನಿರ್ಮಾಪಕನಾಗಿದ್ದೇನೆ. ಇದು ದೇವಸಸ್ಯ ಎನ್ನುವ ಸಂಜೀವಿನಿ ಗಿಡದ ಸುತ್ತ ನಡೆಯುವ ಕತೆ. 30 ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಟಿ ಮಾಡಿದ್ದೇವೆ’ ಎಂದರು.